Thursday, January 13, 2011

ಬಿಟ್ಟಿ ಕವಿತೆಗಳು

ನನ್ನ ಕನಸುಗಳಿಗೆ ಬೆಲೆಯಿಲ್ಲದ ಜಾಗದಲ್ಲಿ
ನೆಲೆ ಹುಡುಕುವ ಕಣ್ಣುಗಳಿಗೆ ಸುಸ್ತಿಲ್ಲ
ಹುಟ್ಟು ಹರಿದ ಹಾದಿಗಳಲ್ಲಿ ಸುಮ್ಮನೆ
ಸಾಗುತ್ತಿದ್ದೇನೆ

Tuesday, January 4, 2011

ಹತ್ತು ವರ್ಷದ ಹತ್ತು ಚಿತ್ರಗಳು..

2000 - ಉಪೇಂದ್ರ

ಉಪೇಂದ್ರ ನಿರ್ದೇಶನದ ಈ ಚಿತ್ರ ೨೦೦೦ದಲ್ಲಿ ಬಿಡುಗಡೆಯಾಗಿ ಆ ವರ್ಷ ನಿರೀಕ್ಷಿತ ಗೆಲುವಾಗಿ ದಾಖಲಾಗಿತ್ತು. ತನ್ನ ವಿಚಿತ್ರ ಮ್ಯಾನರಿಸಂನಿಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ "" ನಂತರ ಮತ್ತೊಂದು ಹಿಟ್ ಚಿತ್ರ ಕೊಟ್ಟರು. ಆರಂಭದಲ್ಲಿಯೇ "ದಿ ಎಂಡ್" ಎಂದು ತೋರಿಸುವ ಮೂಲಕ ನಿರೂಪಣೆಯಲ್ಲಿಯೂ ಹೊಸತನಕ್ಕೆ ಸಾಕ್ಷಿಯಾಗಿದ್ದರು. ಬಾಲಿವುಡ್ ನಟಿ ರವಿನಾ ಟಂಡನ್ ಹಾಗೂ ನಟಿ ದಾಮಿನಿ ಅಭಿನಯದ ಮೊದಲ ಕನ್ನಡ ಚಿತ್ರ. ಈ ಚಿತ್ರದ ಹಾಡುಗಳು ಹಾಗೆ ಒಂದಕ್ಕಿಂತ ಒಂದು ಫೇಮಸ್ ಆದವು. ಗುರುಕಿರಣ್ ಹೊಸೆದ ಸಂಗೀತದಲ್ಲಿ"ಉಪ್ಪಿಗಿಂತ ರುಚಿ ಬೇರೆಯಿಲ್ಲ" ಗೀತೆ ಉಪೇಂದ್ರ ಸಹಸ್ರನಾಮವಾದಂತಾಯಿತು.

2001- ಮೆಜೆಸ್ಟಿಕ್

ಪಿ.ಎನ್ ಸತ್ಯಾ ನಿರ್ದೇಶನದ ಈ ಚಿತ್ರದಿಂದ ಕನ್ನಡಕ್ಕೆ ಹೊಸ ಹುಡುಗ ಪರಿಚಯವಾದ. ದಿವಂಗತ ನಟ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಅಭಿನಯದ ಮೊದಲ ಚಿತ್ರ. "ಓಂ" ನಂತರ ಮರೆಯಾಗಿದ್ದ ಮಚ್ಚು-ಲಾಂಗುಗಳು ಈ ಚಿತ್ರದಿಂದ ಮತ್ತೆ ವಿಜೃಂಭಿಸಿದವು. ಈ ದಶಕದ ಮಚ್ಚು-ಲಾಂಗಿಗೆ ಈ ಚಿತ್ರವೇ ಮುನ್ನುಡಿ.

2002- ಅಪ್ಪು

ಪುನೀತ್ ರಾಜ್‌ಕುಮಾರ್ ನಾಯಕನಾಗಿ ಅಭಿನಯಿಸಿದ ಮೊದಲ ಕನ್ನಡ ಚಿತ್ರ. ನಟಿ ರಕ್ಷಿತಾಗೂ ಕೂಡ ಇದು ಮೊದಲ ಚಿತ್ರ. ಇಬ್ಬರ ಮನೋಜ್ಞ ಅಭಿನಯದಿಂದ ಚಿತ್ರ ಸೂಪರ್ ಹಿಟ್ ಆಯಿತು. ಅಲ್ಲಿಂದ ಪುನೀತ್ ರಾಜ್‌ಕುಮಾರ್ ಎಂಬ ನಟ ಕನ್ನಡಕ್ಕೆ ಚಿರ ಪರಿಚಿತನಾದ. ಉಪೇಂದ್ರ ಬರೆದ "ತಾಲಿಬಾನ್ ಅಲ್ಲಾ..ಅಲ್ಲಾ.. ಬಿನ್ ಲಾಡೆನ್ ಅಲ್ವೇ ಅಲ್ಲ" ಗೀತೆಯೂ ಕೂಡ ಬಹು ಪ್ರಸಿದ್ಧಿ ಆಯಿತು.

2003-ಚಂದ್ರಚಕೊರಿ

ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರ 2003ರಲ್ಲಿ ಬಿಡುಗಡೆಯಾಯಿತು. ಈಗಿನ ಫ್ಲಾಪ್ ನಟ ಮುರುಳಿ ಅಭಿನಯದ ಮೊದಲ ಚಿತ್ರ. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಇನ್ನೊಂದು ವಿಶೇಷ. ಬೆಳಗಾವಿಯ ಒಂದು ಥಿಯೇಟರ್ ಅಲ್ಲಿ ಈ ಚಿತ್ರ ಒಂದು ವರ್ಷ ಪ್ರದರ್ಶನದ ಸಾಧನೆ ಮಾಡಿತ್ತು. ಮುರುಳಿ ಈ ಚಿತ್ರದಲ್ಲಿ ಮಾತು ಬಂದರೂ ಮಾತುಬಾರದವನಾಗಿ ಅಭಿನಯಿಸಿದ್ದ.

2004- ಆಪ್ತಮಿತ್ರ

ಮಲಯಾಳಂನ ಯಶಸ್ವೀ ಚಿತ್ರ ಮಣಿ ಚಿತ್ರತಾಳ್ ಕಥೆ ಹೊಂದಿದ್ದ ಈ ಚಿತ್ರ ಸಾಹಸಸಿಂಹನಿಗೆ ಅಗತ್ಯ ಬ್ರೇಕ್ ನೀಡಿತ್ತು. ಈ ಚಿತ್ರದ ನಾಗವಲ್ಲಿ ಪಾತ್ರ ಬಹಳ ಫೇಮಸ್ ಆಯಿತು. ಆದರೆ ಚಿತ್ರ ಬಿಡುಗಡೆಗೂ ಮುಂಚೆ ನಾಗವಲ್ಲಿ ಪಾತ್ರದಲ್ಲಿ ಅಭಿನಯಿಸಿದ್ದ ಸೌಂದರ್ಯ ವಿಧಿವಶರಾದರು. ವಿಶೇಷ ಕಥೆ ಹೊಂದಿದ್ದ ಈ ಚಿತ್ರ ಈ ವರ್ಷದಲ್ಲಿ ಭರ್ಜರಿ ಹಣ ಮಾಡಿತು. ಇದರ ಮೇಕಿಂಗ್ ಬಗ್ಗೆ ಪತ್ರಕರ್ತರೊಬ್ಬರು ಬುಕ್ ಬರೆಯುವಷ್ಟರ ಮಟ್ಟಿಗೆ ಚಿತ್ರ ಹಿಟ್ ಆಗಿಹೋಗಿತ್ತು.

2005- ಜೋಗಿ

ಯಶಸ್ವೀ ಚಿತ್ರ ಕರಿಯದಿಂದ ಗಾಂಧೀನಗರದಲ್ಲಿ ಹೆಸರು ಮಾಡಿದ್ದ ಪ್ರೇಮ್ ನಿರ್ದೇಶಿಸಿದ ಮೂರನೇ ಚಿತ್ರ. ಶಿವರಾಜ್‌ಕುಮಾರ್, ಬಾಂಬೆ ಹುಡುಗಿ ಜೆನ್ನಿಫರ್ ಅಭಿನಯದ ಈ ಚಿತ್ರ. ಆ ವರ್ಷ ಪೂರ್ತಿ ಭರಪೂರ ಹಣವೆತ್ತಿತ್ತು. ಬಾಲಿವುಡ್ ಬೆಡಗಿ ಯಾನಾ ಗುಪ್ತಾ "ಬಿನ್ ಲಾಡೆನ್ನು ನನ್ ಮಾವಾ.." ಎಂಬ ಗೀತೆಗೆ ಹೆಜ್ಜೆ ಹಾಕಿ ಚಿತ್ರವನ್ನು ಇನ್ನಷ್ಟು ಪ್ರಚಾರ ನೀಡಿದರು. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ತಾಯಿ ಪಾತ್ರದಲ್ಲಿದಲ್ಲಿ ಅಭಿನಯಿಸಿದ್ದ ಅರುಂಧತಿ ನಾಗ್‌ಗೆ ಪ್ರಶಸ್ತಿಯೂ ಒಲಿದು ಬಂತು.

2006-ಮುಂಗಾರು ಮಳೆ

ಹನಿ ಹನಿ ಪ್ರೇಮ್ ಕಹಾನಿ ಎಂದು ಬಂದ ಈ ಚಿತ್ರ ಯೋಗರಾಜ್ ಭಟ್ ನಿರ್ದೇಶನದ್ದು. ಬಹುನೀರೀಕ್ಷಿತ ಎರಡೂ ಚಿತ್ರಗಳು(ಮಣಿ ಮತ್ತು ರಂಗ ಎಸ್‌ಎಸ್‌ಎಲ್‌ಸಿ)ಸೋತ ನೆನಪಲ್ಲಿ ಭಟ್‌ಕಟ್ಟಿದ ಅದ್ಭುತ ಪ್ರೇಮ ಕಾವ್ಯ. ವರ್ಷಾಂತ್ಯದಲ್ಲಿ (ಡಿಸೆಂಬರ್-29) ಬಿಡುಗಡೆಯಾದ ಈ ಚಿತ್ರ. 2007ಕ್ಕೆ ಕ್ರೆಡಿಟ್ ಕೊಟ್ಟಿತು. ಚೆಲ್ಲಾಟ ಎಂಬ ಸಾಮಾನ್ಯ ಚಿತ್ರದಲ್ಲಿ ನಟಿಸಿದ್ದ ಗಣೇಶ್ ಈ ಚಿತ್ರದಿಂದ ಮನೆಮನೆಯೂ ಗುರುತಿಸುವಂತಾದರು. ಕನ್ನಡದ ಪ್ರೇಕ್ಷಕರು ಮತ್ತೇ ಪ್ರೇಮದ ಗುಂಗಿಗೆ ಬಿದ್ದರು. ಈ ಚಿತ್ರದಿಂದ ಪೂಜಾ ಗಾಂಧಿ ಮಳೆ ಹುಡುಗಿ ಎಂದೇ ಖ್ಯಾತಳಾದಳು. ಎಸ್.ಕೃಷ್ಣ ಜೋಗ ಜಲಪಾತವನ್ನು ಬೇರೆ ರಿತಿಯೇ ತೋರಿಸಿ ಖ್ಯಾತರಾದರು.

2007- ದುನಿಯಾ

ಯೋಗಾರಾಜ್ ಭಟ್ ಅವರ ಮೊದಲ ಚಿತ್ರ "ಮಣಿ"ಗೆ ಸಂಭಾಷಣೆ ಬರೆದಿದ್ದ "ಸೂರಿ" ದುನಿಯಾ ನಿರ್ದೇಶಿಸುವ ಮೂಲಕ ಗಾಂಧಿನಗರದ ಅಖಾಡಕ್ಕಿಳಿದರು. ವಿಲನ್ ಸಹಚರನಾಗಿಯೂ ಅಥವಾ ವಿಲನ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಈ ಚಿತ್ರದಿಂದ ನಾಯಕ ನಟನಾದರು. ಕರಾವಳಿ ಹುಡುಗಿ ರಶ್ಮಿ ನಾಯಕಿಯಾಗಿ ಅಭಿನಯಿಸಿದ್ದ ಈ ಚಿತ್ರ 2007ರ ದಾಖಲೆಯಾಗಿ ಸಾಬೀತಾಯಿತು.

2008-ಗಾಳಿಪಟ

ಮುಂಗಾರು ಮಳೆ ನಂತರ ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ 2008ರಲ್ಲಿ ಜಾಕ್ ಪಾಟ್ ಹೊಡೆಯಿತು. ಮೂವರು ಗೆಳೆಯರ ಪ್ರೇಮಕಾವ್ಯವನ್ನು ಭಟ್ಟರು ಅಷ್ಟೆ ಅಚ್ಚುಕಟ್ಟಾಗಿ ಬಿಡಿಸಿಟ್ಟಿದ್ದರು. ಕೊಡಚಾದ್ರಿ, ಮುಗಿಲ್‌ಪೇಟೆಯನ್ನು ಕ್ಯಾಮರಾಮೆನ್ ರತ್ನವೇಲು ಬೇರೆಯ ಕಣ್ಣಲ್ಲಿ ತೋರಿಸಿದರು. ಚಿತ್ರದ ಎಲ್ಲಾ ಗೀತೆಗಳು ಜನರ ಬಾಯಲ್ಲಿ ಗುನುಗುನಿಸಿದವು.

2009- ಎದ್ದೇಳು ಮಂಜುನಾಥ

ಮಠದಂತಹ ಡಿಫರೆಂಟ್ ಆಂಗಲ್‌ನ ಚಿತ್ರ ನೀಡಿ ಆಗಲೇ ಪ್ರಸಿದ್ಧಿಗೆ ಬಂದಿದ್ದ ಗುರುಪ್ರಸಾದ್ ಎದ್ದೇಳು ಮಂಜುನಾಥ ಚಿತ್ರವನ್ನು ನಿರ್ದೇಶಿಸುವ ಮೂಲಕ ಮತ್ತೆ ಅಖಾಡಕ್ಕಿಳಿದರು. ಹಾಗಂತ ಎದ್ದೇಳು ಮಂಜುನಾಥ ಹೇಳಿಕೊಳ್ಳುವಂಥ ಹಿಟ್ ಅಲ್ಲದಿದ್ದರೂ ತನ್ನ ಸಂಭಾಷಣೆಗಳಿಂದ ಗುರುತಿಸಿಕೊಂಡಿತು. ತಬಲಾನಾಣಿ, ಜಗ್ಗೇಶ್ ಪಾತ್ರಜನರಿಂದ ಮೆಚ್ಚುಗೆ ಪಡೆಯಿತು.

2010- ಸೂಪರ್

ಉಪೇಂದ್ರ ನಿರ್ದೇಶನದ ಬಹುನೀರೀಕ್ಷಿತ ಚಿತ್ರ ದಿಸೆಂಬರ್ 5 ರಂದು ಬಿಡುಗಡೆಗೊಂಡಿತು. ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಈ ಚಿತ್ರದಿಂದ ಸ್ಯಾಂಡಲ್‌ವುಡ್‌ಗೂ ಎಂಟ್ರಿಯಾದರು. ವಿ. ಹರಿಕೃಷ್ಣ ಸಂಗೀತ ಜನರನ್ನು ಹುಚ್ಚೆಬ್ಬಿಸುವಂತೆ ಮಾಡಿತ್ತು. ಬಿಡುಗಡೆಯಾದ ಎಲ್ಲಾ ಥಿಯೇಟರ್‌ಗಳಲ್ಲೂ ಸೂಪರ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಕಥಾ ಹಂದರವುಳ್ಳ ಈ ಚಿತ್ರದಲ್ಲಿ ಉಪ್ಪಿ ಸುಭಾಷ್ ಗಾಂಧಿಯಾಗಿ ನಟಿಸಿದ್ದರು. ಹಾಗಾಗಿ ಈ ಚಿತ್ರ ಈ ವರ್ಷದ ಚಿತ್ರ.

ಪೂರ್ತಿ ಪೇಜ್ ನೋಡುವುದಾದರೆ.. ಇಲ್ಲಿನ ಲಿಂಕ್ ಉಪಯೋಗಿಸಿ...

http://www.hosadigantha.in/epaper.php?date=01-01-2011&name=01-01-2011-14

ಎತ್ತು ಏರಿಗೆ ಕೋಣ ನೀರಿಗೆ.. ಸದ್ಯದ ಕನ್ನಡ ಚಿತ್ರರಂಗ.

ಮತ್ತೊಂದು ವರ್ಷ ಮಕಾಡೆ ಮಲಗಿದೆ. ಈ ವರ್ಷವೂ ಅಷ್ಟೇ. ಸೆನ್ಸಾರ್ ಆಗಿದ್ದು ೧೭೭ ಚಿತ್ರಗಳು, ಬಿಡುಗಡೆಗೊಂಡಿದ್ದು ಬರೋಬ್ಬರಿ ೧೩೮ ಚಿತ್ರಗಳು ಭಾರತದ ಎಲ್ಲಾ ಚಿತ್ರರಂಗಕ್ಕೆ ಹೋಲಿಸಿದಲ್ಲಿ ಇದೊಂದು ದಾಖಲೆಯೇ. ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ನೂರರ ಅಟ್ಟ ಏರಿ ಕುಳಿತಿತ್ತು. ಕೆಲವೊಂದು ಚಿತ್ರಗಳಿಗೆ ಬಿಟ್ಟರೆ ಹೆಚ್ಚಿನ ಚಿತ್ರಗಳಿಗೆಲ್ಲ ವಿಕ್ಷಕ ಬೆನ್ನು ತಿರುಗಿಸಿದ. ಟಾಕೀಸ್‌ಗಳಲ್ಲಿ ಖಾಲಿ ಸೀಟುಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು.

ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ೨೦೧೦ರಲ್ಲಿ ಚಿತ್ರರಂಗದ್ದು ಏರುಮುಖ. ಪ್ರತಿ ವರ್ಷ ಕೊನೆಯಲ್ಲಿ ಚಿತ್ರರಂಗದ ಬಲಾಬಲದ ಪಟ್ಟಿ ಮಾಡುವಾಗ ಕೈಸುಟ್ಟ ಸಿನಿಮಾಗಳ ಸಂಖ್ಯೆ ಭರಪೂರ ಸಿಗುತ್ತದೆ. ೨೦೧೦ರ ಜನವರಿ ಒಂದರಂದು "ನಾನ್ ಮಾಡಿದ್ ತಪ್ಪಾ" ಎಂಬ ತೋಪು ಚಿತ್ರದೊಂದಿಗೆ ಆರಂಭವಾದ ಚಿತ್ರಶಖೆ ಡಿಸೆಂಬರ್ ಕೊನೆಯವರೆಗೆ ಎಡೆಬಿಡದೆ ಮುಂದುವರಿಯಿತು. ಬಿಡುವಿಲ್ಲದ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತ ಹೋದವು. ಅದರಲ್ಲಿ ಹಾಳು ಮೂಳು ಎಲ್ಲವೂ ಸೇರಿಕೊಂಡಿತು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಚಿತ್ರಗಳ ಸಂಖ್ಯೆ ನೂರರ ಗಡಿ ದಾಟಿದ್ದಕ್ಕೆ ಸಂಭ್ರಮ ಪಟ್ಟಿದ್ದರು. ಆದರೆ ಅವರ ಸಂಭ್ರಮ ಅಷ್ಟಕ್ಕೆ ಮಾತ್ರ ಸೀಮಿತ.

ನಿರ್ನಾಮ ಮಾಡಿದ ಚಿತ್ರಗಳು

೧೩೭ ಚಿತ್ರಗಳಲ್ಲಿ ಮುಕ್ಕಾಲು ಪಾಲು ನಿರ್ಮಾಪಕರನ್ನು ನಿರ್ನಾಮ ಮಾಡಿದ ಚಿತ್ರಗಳೇ ಆಗಿದ್ದು ಚಿತ್ರರಂಗದ ದುರಂತ. ಜನವರಿಯಲ್ಲಿ ಬಂದ ಹೆಚ್ಚಿನ ಚಿತ್ರಗಳು ಪುನಃ ಡಬ್ಬಿಗೆ ಸೇರುವಂತವು. "ಮಿನುಗು" ಮಿನುಗಲೇ ಇಲ್ಲ. ನಾನ್ ಮಾಡಿದ್ ತಪ್ಪಾ , ಸಮಾಗಮ, ಪ್ರೀತಿಯ ತೇರು, ದಿಲ್ದಾರ. ಎಂಬ ಹೊಸಬರ ಚಿತ್ರಗಳು ಲೆಕ್ಕಕ್ಕೆ ಮಾತ್ರ ಸೀಮಿತವಾದವು. ವರ್ಷಧಾರೆ, ಪೆರೋಲ್, ನಿರ್ದೋಷಿ, ಅಂತರಾತ್ಮ, ನನ್ನವನು, ರೌಡಿ ಹೃದಯ, ಪ್ರೀತಿ ಅಂದ್ರೆ ಇಷ್ಟೇನಾ, ಹೋಳಿ, ಒಲವೇ ವಿಸ್ಮಯ, ಸುಗ್ರೀವ, ತಮಸ್ಸು, ಮತ್ತೆ ಮುಂಗಾರು, ಜೋಕಾಲಿ, ಹುಂಜ, ಸೂರ್ಯಕಾಂತಿ,ಪುಂಡ, ಯಕ್ಷ, ಏನೊ ಓಂಥರಾ, ಉಲ್ಲಾಸ ಉತ್ಸಾಹ, ಶೌರ್ಯ, ಗುಬ್ಬಿ, ಯಕ್ಕಾ ಎಲ್ಲಾ ಚಿತ್ರಗಳು ನಿರ್ಮಾಪಕರನ್ನು ಸೋಲಿನ ದವಡೆಗೆ ಸಿಲುಕಿಸಿತು. ಸುಗ್ರೀವ ೧೮ ತಾಸುಗಳಲ್ಲಿ ಮಾಡಿದ ಚಿತ್ರ ಎಂಬ ದಾಖಲೆಯಲ್ಲಿ ಹೆಸರು ಮಾಡಿದರೆ, ಅಗ್ನಿ ಶ್ರೀಧರ್ ಪೆನ್ನು ಬಿಟ್ಟು ತಮಸ್ಸುಗೆ ಆಕ್ಷನ್ ಕಟ್ ಹೇಳಿ ಕೈಸುಟ್ಟುಕೊಂಡರು. ಹಾಗೆ ಸುದೀಪ್ ನಿರ್ದೇಶನದ "ಜಸ್ಟ್‌ಮಾತ್‌ಮಾತಲ್ಲಿ" ಚಿತ್ರಕ್ಕೆ ಜನ ಜಸ್ಟ್ ಕೆಲಸ ಬಿಟ್ಟು ನೋಡಲಿಲ್ಲ.. ಸುದೀಪ್ ಸ್ವಮೇಕ್ ಚಿತ್ರಕ್ಕೆ ಬೆಲೆ ಇಲ್ಲ ಎಂದು ಮತ್ತದೇ ರೀಮೇಕುಮಾರಿ ಸೆರಗು ಹಿಡಿದರು.

"ತಮಸ್ಸು" "ಸುಗ್ರೀವ" ಹಾಗೂ "ಚೆಲುವೆಯೇ ನಿನ್ನ ನೋಡಲು" ಈ ಮೂರು ಚಿತ್ರಗಳೂ ಶಿವರಾಜ್‌ಕುಮಾರ್ ಬಹು ನಿರೀಕ್ಷಿತ ಚಿತ್ರಗಳಾಗಿದ್ದವು. ಮೂರು ಚಿತ್ರಗಳೂ ಒಳ್ಳೆಯ ಆರಂಭ ಪಡೆದರೂ ಅದನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಲಿಲ್ಲ. ಮತ್ತೆ ಮುಂಗಾರು ಚಿತ್ರಕ್ಕೆ ಚಿತ್ರದ ಕಥೆಯೇ ಮುಳುವಾಯಿತು. ನೈಜ ಕಥೆ ಎಂಬ ನಾಮಧೇಯದಲ್ಲಿ ಬಂದರೂ ಚಿತ್ರ ಹೆಸರು ಮಾಡಲಿಲ್ಲ. ಹುಂಜ ನಿರ್ಮಾಪಕರಿಗೆ ಚಿನ್ನದ ಕೋಳಿಯಾಗಲಿಲ್ಲ. "ಜುಗಾರಿ" ಹಣದ ಕ್ರಾಸ್ ಕೂಡ ದಾಟಲಿಲ್ಲ. ಶ್ರೀನಗರ ಕಿಟ್ಟಿ, ದಿಗಂತ್, ಶರ್ಮಿಳಾ ಮುಖ್ಯ ಭೂಮಿಕೆಯಲ್ಲಿದ್ದ 'ಸ್ವಯಂವರ" ಪ್ರೊಡ್ಯೂಸರ್‌ನನ್ನು ದಿವಾಳಿ ಮಾಡಿದ ಕ್ರೆಡಿಟ್ ಪಡೆದುಕೊಂಡಿತು. ಈ ಎಲ್ಲಾ ಚಿತ್ರಗಳ ಜೊತೆ ಇನ್ನೂ ಹಲವು ಚಿತ್ರಗಳ ಇವುಗಳ ಪಟ್ಟಿಯಲ್ಲಿವೆ.

ಕೈಗಿಟ್ಟಿದ ಚಿತ್ರಗಳು

ಹಾಗೆ ಈ ವರ್ಷ ಬಂದ ಕೆಲವು ಚಿತ್ರಗಳು ಲಾಭದ ಮುಖ ಕಾಣದೆ ಜನರನ್ನು ಸಂತೃಪ್ತಿಗೊಳಿಸಿದ ಕೀರ್ತಿಗೆ ಭಾಜನವಾದವು. ಹಾಗೆ ಹಣ ಹಾಕಿದ ನಿರ್ಮಾಪಕನಿಗೆ ಲಾಸ್ ಮಾಡದೆ ಅಲ್ಲಿ"ಗಲ್ಲಿ"ಗೆ ಸಮತೂಗಿಸಿದವು. 'ಪ್ರಥ್ವಿ', 'ಪೊರ್ಕಿ' ಚಿತ್ರಗಳು ಅಲ್ಲಿಂದಲ್ಲಿಗೆ ಜೇಬು ತುಂಬಿಸಿದ ಸಾಧನೆ ಮಾಡಿದವು, "ಜೊತೆಗಾರ" ಚಿತ್ರ ಆರಂಭದಲ್ಲಿ ಪ್ರೇಕ್ಷಕರನ್ನು ಗಳಿಸಿದ್ದರಿಂದ ಚಿತ್ರಕ್ಕೆ ಹೇಳಿಕೊಳ್ಳುವಂತ ಲಾಸ್ ಆಗಲಿಲ್ಲ. "ಸಂಚಾರಿ" ಪೋಸ್ಟರ್‌ಗಳಲ್ಲಿ ಮಾತ್ರ ನೂರು ದಿನ ಎಂದು ಹಾಕಿಕೊಂಡಿದ್ದೆ ಬಂತು. ವರ್ಷದ ಕೊನೆ ಕೊನೆಯಲ್ಲಿ ಬಂದ ಡೆಡ್ಲಿ-೨, ಅಪ್ಪು ಪಪ್ಪು, ನಾರಾಯಣ್‌ರ ವೀರಪರಂಪರೆ, ಇಂದ್ರಜಿತ್ ಲಂಕೇಶ್‌ರ ಹುಡುಗ ಹುಡುಗಿ ಚಿತ್ರಗಳು ನೀರಿಕ್ಷೆಯನ್ನು ಸುಳ್ಳು ಮಾಡಿದವು. ಚಿರಂಜೀವಿ ಸರ್ಜಾ ಅಭಿನಯಿಸಿದ "ಚಿರು" ಚಿತ್ರ ಗಳಿಕೆಗೆ ಮೋಸ ಮಾಡಲಿಲ್ಲ.

ಒಟ್ಟಾರೆ ಕೈಗಿಟ್ಟಿದ ಚಿತ್ರಗಳ ಸಂಖ್ಯೆ ಈ ವರ್ಷ ಭಾರಿ ಕಡಿಮೆ. ಟಿ.ವಿ ರೈಟ್ಸ್ ಎಂಬ ಹೆಸರಲ್ಲಿ ಚಿತ್ರಗಳು ಖಾಸಗಿವಾಹಿನಿಗಳ ತೆಕ್ಕೆಗೆ ಬೀಳುವುದರಿಂದ ಇಂತಹ ಚಿತ್ರಗಳು ಲಾಭದ ಮುಖ ಮಾಡುತ್ತದೆಯೇ ಹೊರತು ಇವುಗಳನ್ನು ಲಾಭ ಮಾಡಿದ ಚಿತ್ರಗಳು ಎನ್ನಲಾಗುವುದಿಲ್ಲ. ಇನ್ನೂ ಕೆಲವು ಚಿತ್ರಗಳನ್ನು ನಿರ್ಮಾಪಕರು ಖಾಸಗಿ ಟಿ.ವಿ ವಾಹಿಗಳ ರೈಟ್ಸ್‌ಗೋಸ್ಕರವೇ ಪೋಸ್ಟರ್‌ಗಳಲ್ಲಿ towrds 50 ಎನ್ನುವ ಲಾಂಛನಗಳು ಬೀಳಲಾರಂಭಿಸಿದವು.

೨೫ ವಾರ ಒಂದು ಚಿತ್ರ ಮಾತ್ರ

ಈ ವರ್ಷ ಗೆದ್ದ ಚಿತ್ರಗಳ ಸಾಲಿನ ಪಟ್ಟಿ ತುಂಬಲು ಫೆಬ್ರುವರಿ ತಿಂಗಳ ವರೆಗೆ ಕಾಯಬೇಕಾಯಿತು. ಸಾಹಸಸಿಂಹನ ಕೊನೆಯ ಚಿತ್ರ ಆಪ್ತರಕ್ಷಕ ಈ ವರ್ಷದ ಮೇಜರ್ ಯಶಸ್ಸು. ಪ್ರದರ್ಶನ ೨೫ ವಾರಗಳ ಕಾಲ ನಡೆಯಿತು. ಕೊನೆಯ ಚಿತ್ರದಲ್ಲಿ ವಿಷ್ಣು ಅಭಿನಯ ಕಣ್ತುಂಬಿಕೊಳ್ಳಲು ಜನ ಥೇಟರ್‌ಗಳಿಗೆ ಮುಗಿಬಿದ್ದರು. ಚಿತ್ರ ೨೫ ವಾರಗಳ ಭರ್ಜರಿ ಪ್ರದರ್ಶನ ಕಂಡು ನಿರ್ಮಾಪಕ ಕೃಷ್ಣ ಪ್ರಜ್ವಲ್‌ಗೆ ಹಣದ ಹೊಳೆಯೇ ಹರಿಸಿತು. ಚಿತ್ರದ ೨೫ ವಾರದ ಸಮಾರಂಭಕ್ಕೆ ಭಾರತಿ ವಿಷ್ಣುವರ್ಧನ್ ಬರುವುದಿಲ್ಲ ಎನ್ನುವುದು ವಿವಾದವಾಗಿ ಕೊನೆಯಲ್ಲಿ ಅವರಿಲ್ಲದೆ ಆ ಸಮಾರಂಭ ನಡೆಯಿತು. ಭಾರತೀ ವಿಷ್ಣುವರ್ಧನ್ ಕೃಷ್ಣ ಪ್ರಜ್ವಲ್ ಮೇಲೆ ಆರೋಪ ಹೊರಿಸಿದ್ದು ಸುದ್ದಿಯಾಗಿ ಮರೆಯಾಯಿತು.

ಗೆದ್ದತ್ತಿನ ಬಾಲಗಳು

ಗೆದ್ದೆತ್ತಿನ ಬಾಲ ಹಿಡಿದು ಯಶಸ್ಸಿನ ದಾರಿಯಲ್ಲಿ ಈ ವರ್ಷ ತುಂಬಾ ಚಿತ್ರಗಳು ನಡೆದಿವೆ. 'ಆಪ್ತರಕ್ಷಕ' ಭರ್ಜರಿ ಯಶಸ್ಸಿನ ನಂತರ, ಮೇ ತಿಂಗಳಿನಲ್ಲಿ ಬಿಡುಗಡೆಯಾದ "ನಾನು ನನ್ನ ಕನಸು" ನೂರು ದಿನಗಳ ಸಾಧನೆ ಮಾಡಿತು ಆದರೂ ಚಿತ್ರ ತಮಿಳಿನಷ್ಟು ಯಶಸ್ಸು ಕನ್ನಡದಲ್ಲಿ ಕಾಣಲಿಲ್ಲ ಅನ್ನುವ ಬೇಸರ ಪ್ರಕಾಶ್ ರೈ ಅವರಲ್ಲಿತ್ತು. ಎಪ್ರಿಲ್ ೧೮ ರಂದು ಬಿಡುಗಡೆಗೊಂಡ ಶಶಾಂಕ್‌ರ "ಕೃಷ್ಣನ್ ಲವ್ ಸ್ಟೋರಿ" ಯಶಸ್ಸು, ಗೆದ್ದ ಚಿತ್ರಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿತು. "ಎರಡನೆ ಮದುವೆ"ಅಚ್ಚರಿಯ ಯಶಸ್ಸೂ ಕೂಡ ಈ ವರ್ಷ ಸಾಧ್ಯವಾಯಿತು. "ಲಿಫ್ಟ್‌ಕೊಡ್ಲಾ" ಕೂಡ ಈ ಪಟ್ಟಿಗೆ ಸೇರಿತು. ವರ್ಷದ ಕೊನೆಯಲ್ಲಿ ಬಂದ ಕೆಲವು ಚಿತ್ರಗಳು ಚಿತ್ರರಂಗವನ್ನು ಉಸಿರಾಡುವಂತೆ ಮಾಡಿದವು. ಯೋಗರಾಜ್ ಭಟ್ಟರ ಬಹು ನೀರೀಕ್ಷಿತ ಚಿತ್ರ "ಪಂಚರಂಗಿ" ಚಿತ್ರ ನೋಡಿ ಜನ ಖುಷಿ ಪಟ್ಟ. ಚಿತ್ರ ನೋಡಿ ಬಂದವರ ಬಾಯಲ್ಲಿ "ಲೈಫು ಇಷ್ಟೇನೇ" ಹಾಡು ಶಾಯರಿಯಾಗಿ ಕುಣಿದಾಡುತ್ತಿತ್ತು. ಚಿತ್ರಕ್ಕೆ ಕಥೆಯೇ ಬೇಕಿಲ್ಲ ಸಂಭಾಷಣೆ ಹಾಗೂ ಹಾಡುಗಳಿಂದ ಕೂಡ ಚಿತ್ರವನ್ನು ಗೆಲ್ಲಿಸಬಹುದೆಂದು ಭಟ್ಟರು ತೋರಿಸಿಕೊಟ್ಟರು. ಲೈಫು ಇಷ್ಟೇನೇ ಮುಗಿಯುವಷ್ಟರಲ್ಲಿ "ಶಿವಾ ಅಂತ.." "ಜಾಕಿ"ಬಂದು ಥೇಟರ್‌ನ ಪುಡಿ ಮಾಡುತ್ತಿದ್ದ. ತಮಿಳಿನ್ ಎಂಧಿರನ್ ಚಿತ್ರದ ಎದುರು "ಜಾಕಿ" ಸಮರ್ಥವಾಗಿ ಹೋರಾಡಿ ಗೆದ್ದ. ಜಾಕಿ ಚಿತ್ರದ ಗೆಲುವು ಸೂರಿಯ ಮುಖದಲ್ಲಿ ಕಳೆ ಕೊಟ್ಟಿತು. ಈಗಾಗಲೇ ಕೋಟಿ ಲೆಕ್ಕದಲ್ಲಿ ವ್ಯವಹಾರ ನಡೆಸಿರುವ ಜಾಕಿ ಇನ್ನೂ ಓಡುತ್ತಲೆ ಇದ್ದಾನೆ.

ಹತ್ತು ವರ್ಷಗಳ ನಂತರ ನಿರ್ದೇಶನಕ್ಕೆ ಇಳಿದ ಉಪೇಂದ್ರ ಸೂಪರ್ ಚಿತ್ರವನ್ನು ಜನ ಸೂಪರ್ ಆಗಿಯೇ ಇಷ್ಟಪಟ್ಟರು. ವರ್ಷದ ಕೊನೆ ಕೊನೆಗೆ ಬಂದ ಹಲವು ಚಿತ್ರಗಳು ಚಿತ್ರರಂಗದ ಭರವಸೆಯನ್ನು ಇನ್ನಷ್ಟು ಗಟ್ಟಿಗೊಳಿಸಿದವು. 'ಮೈಲಾರಿ' ಚಿತ್ರ ಭರ್ಜರಿ ಓಪನಿಂಗ್ ಪಡೆದು ಯಶಸ್ಸಿನ ದಾರಿಯಲ್ಲಿ ಸಾಗುತ್ತಿದೆ. ಇನ್ನು ವರ್ಷದ ಕೊನೆಯ ಚಿತ್ರವಾಗಿ ಯಶ್ ಮುಖ್ಯ ಭೂಮಿಕೆಯಲ್ಲಿನ "ಮೊದಲಾ ಸಲ"ಕ್ಕೆ ಅಖಾಡಕ್ಕೆ ಸಜ್ಜಾಗಿದೆ.

ಒಟ್ಟಾರೆ ಈ ವರ್ಷಕ್ಕೆ ಹೋಲಿಸಿದ್ದಲ್ಲಿ ಹೊಸ ವಿಷಯಗಳು ಚಿತ್ರಗಳು, ಹೊಸ ತಂತ್ರಜ್ಞಾನದ ಚಿತ್ರಗಳು ಹೆಚ್ಚಾಗಿ ಬಂದವು. ಇವೆ ತಂತ್ರಜ್ಞಾನಗಳು ಮುಂದುವರಿದರೆ ಮುಂದಿನ ಭರವಸೆಯ ದಿನಗಳಿಗೆ ನಾವು ಸಜ್ಜಾಗಬಹುದು. ಕೆಲವು ಚಿತ್ರಗಳು ಕನ್ನಡ ಚಿತ್ರವನ್ನು ಯಶಸ್ಸಿನ ದಾರಿಯಲ್ಲಿ ಸಾಗಲು ಶ್ರಮಿಸಿದರೆ ಇನ್ನೂ ಕೆಲವು ಚಿತ್ರಗಳೂ ನಾವಿರುವುದೇ ಹೀಗೆ ಎಂದು ಸಿದ್ಧ ಸೂತ್ರಗಳಿಗೆ ಅಂಟಿಕೊಂಡರು. ಹಾಗಾಗಿ ಈ ವರ್ಷ ಎತ್ತು ಏರಿಗೆ ಕೊಣ ನೀರಿಗೆ ಎನ್ನಬಹುದೇನೋ.


ಪುನೀತ್, ರಾಧಿಕಾ..

ಯಶಸ್ವಿ ನಟನ ಸಾಲಿನಲ್ಲಿ ಪುನೀತ್ ನಂಬರ್‌ವನ್. ಗಣೇಶ್ ಅಭಿನಯದ ಎರಡೂ ಚಿತ್ರಗಳು ಹೀನಾಯವಾಗಿ ಸೋತಿತು. ದರ್ಶನ್ ಧಮಾಕ "ಪೊರ್ಕಿ" "ಶೌರ್ಯ" ಎರಡರಲ್ಲೂ ನಡೆಯಲಿಲ್ಲ.ಕಳೆದ ವರ್ಷದ ಅಂತ್ಯಕ್ಕೆ ರಾಮ್‌ನಲ್ಲಿ ಗೆದ್ದಿದ್ದ ಪುನೀತ್ ಈ ವರ್ಷ ಪೃಥ್ವಿ ಮೂಲಕ ಮತ್ತೆ ಅಖಾಡಕ್ಕಿಳಿದರು. ಸಮಕಾಲಿನ ರಾಜಕೀಯ ವಿಷಯಗಳನ್ನು ಕೇಂದ್ರವಾಗಿರಿಸಿಕೊಂಡಿದ್ದ ಪುನೀತ್ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಅಕ್ಟೋಬರ್ ೧೦ರಂದು ಬಿಡುಗಡೆಗೊಂಡ "ಜಾಕಿ": ಮೂಲಕ ಪುನೀತ್ ಈ ವರ್ಷದ ನಂಬರ್‌ವನ್ ಸ್ಥಾನಕ್ಕೆ ಲಗ್ಗೆಯಿಟ್ಟರು. ವೇಶ್ಯಾವಾಟಿಕೆ, ಭೂತಕ್ಕೆ ಬಲಿಕೊಡುವಂತ ಸಂಪ್ರದಾಯಗಳು ಇನ್ನೂ ನಮ್ಮ ನಡುವಿದೆ ಎನ್ನುವ ಸ್ಥೂಲ ಎಳೆಯಲ್ಲಿ ಸೂರಿ ಜಾಕಿಯನ್ನು ನಿರ್ದೇಶಿಸಿದ್ದರು. ಪುನೀತ್ ಅಭಿನಯ ಇದರಲ್ಲೂ ಫಸ್ಟ್‌ಕ್ಲಾಸ್.

ಹಾಗೆ ನಟಿಯರಲ್ಲಿ ಈ ವರ್ಷ ಅಷ್ಟೇನೂ ಹಿಟ್ ಕೊಟ್ಟವರು ಯಾರೂ ಕಾಣಲಿಲ್ಲ. ರಮ್ಯಾ ಅಭಿನಯದ "ಜೊತೆಗಾರ" ಸುಮಾರು "ಕಿಚ್ಚಹುಚ್ಚ", "ಜಸ್ಟ್ ಮಾತ್‌ಮಾತಲ್ಲಿ" ಸೋಲಿನಿಂದ ಈ ವರ್ಷ ರಮ್ಯಾ ಲಾಸ್ಟ್ ಸೀಟ್. ಐಂದ್ರಿತಾ ರೈ ಇವರಿಗೆ ಸಾಥ್ ಕೊಡುವುದಷ್ಟೆ ಕೆಲಸ. ರಾಧಿಕಾ ಪಂಡಿತ್ ಕೃಷ್ಟನ್ ಲವ್ ಸ್ಟೋರಿ ಹಾಗೂ ಗಾನಾ ಬಜಾನಾ ಚಿತ್ರದ ಮೂಲಕ ಈ ವರ್ಷ ನಾನೇ ನಂಬರ್ ವನ್ ಎಂದು ಸಾಬೀತು ಪಡಿಸಿದರು. ಕೃಷ್ಣನ್ ಲವ್‌ಸ್ಟೋರಿಯ ಪಾತ್ರದಲ್ಲಿ ವರ್ಷವಿಡೀ ಉಳಿದರು. ಗಾನಾಬಜಾನಾ ಬಾಕ್ಸಾಫಿಸ್‌ನಲ್ಲಿ ಬ್ಯಾಂಡ್ ಬಜಾಯಿಸಲಿಲ್ಲವಾದರೂ ಚಿತ್ರದಲ್ಲಿ ಹೊಸತನವಿತ್ತು. ರಾಧಿಕಾ ನಟನೆಗೂ ಇಲ್ಲಿ ಅಗ್ರಪಟ್ಟ. ಹಾಗಾಗಿ ಈ ವರ್ಷ ಪುನೀತ್ ರಾಧಿಕಾ ನಂಬರ್ ವನ್.

new ಮೇನಿಯಾಗಳು...

ಫ್ಲಾಪ್ ಚಿತ್ರಗಳ ಪಟ್ಟಿ ದೊಡ್ಡದಿದ್ದರು ಈ ವರ್ಷದ ಆರಂಭದಲ್ಲಿ ಹೊಸಬರ ಹೊಸತನದ ಚಿತ್ರಗಳು ಹಲವು ಬಂದವು. ರವಿಕಿರಣ್ ನಿರ್ದೆಶನದ ದಿಲ್ದಾರ.. ಚಿತ್ರ ತೋಪಾದರು..ಇದರಲ್ಲಿ ಹೊಸಬರ ಪ್ರಯತ್ನವಿತ್ತು.. ಹಾಗೆ ಪ್ರತಿ ಫ್ರೇಮ್‌ನಲ್ಲೂ ಚಿತ್ರದ ಬಗ್ಗೆ ಪ್ರೀತಿಯಿತ್ತು. ಹಾಗೆ ನಂತರ ಬಂದ ಜುಗಾರಿ ಮೈಂಡ್‌ಗೇಮ್ ಬಗೆಗಿನ ಚಿತ್ರ. ಕಥೆ ಉತ್ತಮವಾಗಿದ್ದರೂ ಚಿತ್ರ ಜನರಿಗೆ ಇಷ್ಟವಾಗಲಿಲ್ಲ. ಹಾಗೆ ೩೫/೧೦೦ ಜಸ್ಟ್ ಪಾಸ್ ಚಿತ್ರ, ಸುದಿಪ್ ನಿರ್ದೇಶನದ ಜಸ್ಟ್ ಮಾತ್‌ಮಾತಲ್ಲಿ ಚಿತ್ರದಲ್ಲಿ ಆಡಂಬರಕ್ಕಿಂತ ಮೌನವೇ ಆಭರಣವಾಗಿತು. ಪ್ರತಿ ದೃಶ್ಯದಲ್ಲೂ ಫ್ರೆಶ್‌ನೆಸ್‌ಗೆ ಜಾಗ ನೀಡಲಾಗಿತ್ತು. ಕಪ್ಪು ಬೆಳಕಿನ ಸೆರೆಮನೆಯಲ್ಲಿ ಮೂಡಿದ ಕೆಲವು ದೃಶ್ಯಗಳು ಜನರಿಗೆ ಇಷ್ಟವಾಗುವಂತಿದ್ದರೂ ಚಿತ್ರ ಸೋತಿದ್ದು ಹೇಗೆ ಎನ್ನುವುದು ಇನ್ನೂ ಉತ್ತರ ಸಿಗದ ಪ್ರಶ್ನೆ. ಮಾಧುರ್ಯ ಭರಿತ ಗೀತೆಗಳಿದ್ದರೂ ಕನ್ನಡದ ಜನ ಇಷ್ಟಪಡಲಿಲ್ಲ.

ವರ್ಷದ ಕೊನೆಯಲ್ಲಿ ಬಂದ "ನಾಯಕ" ಹೊಸಬರ, ಹೊಸನಾಯಕನ ಚಿತ್ರವಾಗಿತ್ತು. ತಂತ್ರಜ್ಞಾನ, ಛಾಯಾಗ್ರಹಣ ಎಲ್ಲದರಲ್ಲೂ ಅಚ್ಚುಕಟ್ಟುತನ ಇದ್ದರೂ ಜನರ ಪ್ರತಿಕ್ರಿಯೆ ಉತ್ತಮವಾಗಿಲ್ಲ. ಹೊಸ ಹೊಸ ಸಂಗೀತ ನಿರ್ದೇಶಕರು ಈ ವರ್ಷ ಗಾಂಧಿನಗರಕ್ಕೆ ಬಂದರು. ಹಾಗಾಗಿಯೆ ಇದು ಗೀತೆಗಳ ವರ್ಷ ಎಂದರು ಅತಿಶಯೋಕ್ತಿ ಅಲ್ಲ. ಚಿತ್ರ ಸೋತರು ಗೀತೆಗಳು ಯಶಸ್ವಿಯಾದವು. ಹರಿಕೃಷ್ಣ ಏಳು ಚಿತ್ರಗಳಿಗೆ ಸಂಗಿತ ನಿಡಿ ವರ್ಷದ ಸಂಗೀತ ನಿರ್ದೇಶಕ ಎನ್ನಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಸಂಗೀತ ನೀಡಿದ ಚಿತ್ರಗಳ ಹಾಡೆಲ್ಲವೂ ಸೂಪರ್ ಹಿಟ್. ಭಟ್ಟರು ಪಂಚರಂಗಿಯಲ್ಲಿ ಹಾಡುವ ಮೂಲಕ ಹಾಡುಗಾರರಾದರು. ಜಾಕಿ ಚಿತ್ರದ ಎಲ್ಲಾ ಹಾಡುಗಳಿಗೆ ಪೆನ್ನು ಹಿಡಿಯುವ ಮೂಲಕ ಪಕ್ಕಾ ಗೀತ ಸಾಹಿತಿಯಾದರು.

ಇಲ್ಲಿಯೂ ನೋಡಬಹುದು....

http://www.hosadigantha.in/epaper.php?date=12-31-2010&name=12-31-2010-13




Friday, December 31, 2010

ನದಿಗಳನ್ನು ಪ್ರೀತಿಸುವವನು!

ಚಾರಣ, ಪ್ರವಾಸ ಎಂದ ತಕ್ಷಣ ಬೆಟ್ಟ, ಗುಡ್ಡ ಹತ್ತೋದು. ಯಾವುದೋ ವಿಶೇಷ ಜಾಗಕ್ಕೆ ಹೋಗಿ ಒಂದೆರಡು ದಿನ ಹಾಯಾಗಿ ಇದ್ದು ಬರೋದು...ಇವಿಷ್ಟು ಬಿಟ್ಟರೆ, ಇನ್ನೇನೂ ನೆನಪಾಗದು. ಆದರೆ, ಸ್ವಿಜ್ಜರ್ಲೆಂಡಿನ ಆಂಡಿ ಲೆಹ್ಮನ್‌ಗೆ ಪ್ರವಾಸ ಎಂದರೆ ನದಿಗಳನ್ನು ದಾಟುವುದು, ಅವುಗಳ ವಿಶೇಷತೆಯನ್ನು ತಿಳಿಯುವುದು, ಅಲ್ಲಿನ ನಾಗರಿಕತೆಯನ್ನು ಕಲಿಯುವುದು...! ಈಗಾಗಲೇ ಪ್ರಪಂಚದಾದ್ಯಂತ ನದಿಗಳ ಪ್ರವಾಸ ಮಾಡಿರುವ ಈತ ಭಾರತದ ನದಿಗಳನ್ನೂ ಬಿಟ್ಟಿಲ್ಲ.


ನದಿಯೊಂದು ಸತ್ತರೆ, ನಾಗರೀಕತೆಯೇ ಸತ್ತಂತೆ. ರಸ್ತೆಗಳು ಸಾವುಗಳನ್ನು ಸೃಷ್ಟಿಸುತ್ತವೆ. ನದಿಗಳು ಜೀವಗಳನ್ನು ಉಳಿಸುತ್ತವೆ. ಈ ಪ್ರಪಂಚವನ್ನು ಮುಕ್ಕಾಲು ಭಾಗ ನೀರು ಆವರಿಸಿದ್ದರೂ, ಕುಡಿಯುವ ನೀರಿಗಾಗಿ ಹಾಹಾಕಾರ ಇಂದಿಗೂ ಇದೆ. ಎಲ್ಲಿ ತನಕ ಮನುಷ್ಯನಿಗೆ ನೀರು ಮುಖ್ಯವೋ, ಅಲ್ಲಿ ತನಕ ನನ್ನ ಪಯಣ -ಆಂಡಿ ಲೆಹ್ಮನ್

ಅವನ ಅಪ್ಪ ಮೀನುಗಾರ. ನದಿ, ಸಮುದ್ರಗಳು ಇವರಿಗೆ ಅನ್ನದ ಬಟ್ಟಲು. ಅಪ್ಪ ನದಿ ದಂಡೆಯಲ್ಲಿ ಮೀನಿಗಾಗಿ ಬಲೆ ಬೀಸುತ್ತಿದ್ದಾಗ ಆ ಪುಟ್ಟ ಹುಡುಗ ಅಚ್ಚರಿಯ ಕಣ್ಣುಗಳಿಂದ ಅಪ್ಪನನ್ನೇ ದಿಟ್ಟಿಸುತ್ತಿದ್ದ. ಆ ನದಿಗಳಲ್ಲಿ ಬದುಕುವ ಮೀನುಗಳ ಕುರಿತು, ತನ್ನ ಪಾಡಿಗೆ ತಾನು ಹರಿಯುವ ಆ ನದಿಗಳ ಕುರಿತು ಆತನಲ್ಲಿ ಸಹಜ ಕುತೂಹಲ. ತಾನೂ ನದಿಯಲ್ಲಿ ಈಜಬೇಕು. ಆ ನದಿಗಳ ಕುರಿತು ತಿಳಿದುಕೊಳ್ಳಬೇಕು, ಆ ನದಿಗಳ ಸುತ್ತಮುತ್ತ ಬೆಳೆದಿರಿವ ನಾಗರೀಕತೆ ಕುರಿತು ತಿಳಿಯಬೇಕು...ಹೀಗೇ ಆ ಪುಟ್ಟ ವಯಸ್ಸಿನಲ್ಲಿ ಅವನಲ್ಲಿ ನೂರಾರು ಕನಸುಗಳು.
ಅವನೇ ಪ್ರಪಂಚದ ಪ್ರಪಂಚದ ಪ್ರಸಿದ್ಧ ರಿವರ್ ರೈಡರ್ ಆಂಡಿ ಲೆಹ್ಮನ್.

ಇಂದು ಈತನ ಹೆಸರು ಪ್ರಪಂಚಕ್ಕೆ ಚಿರಪರಿಚಿತ. ಸಾವಿರಾರು "ಹುಟ್ಟು" ಹರಿದ ನದಿಗಳಲ್ಲಿ ಈತನ ಪಯಣ ಸಾಗಿದೆ. ಪ್ರಪಂಚದ ಭಯಾನಕ, ಅಪಾಯಕಾರಿ ನದಿಗಳ ಮೇಲೆ ಈತನ ದೋಣಿ ಹರಿದು ಹೋಗಿದೆ. ದಕ್ಷಿಣ ಅಮೇರಿಕಾದ ಜೀವನದಿಗಳಾದ ಆರ್ ನಿಕೋ ಹಾಗೂ ಅಮೆಜಾನ್, ದಕ್ಷಿಣ ಪೂರ್ವ ಏಷ್ಯಾದ ಮೆಕಾಂಗ್, ಚೀನಾದ ಯಾಂಗ್ಟಿ, ಆಫ್ರಿಕಾದ ಜಾಮೆಂಜಿ... ಹಾಗೇ ಭಾರತದ ನದಿಗಳಾದ ಗಂಗಾ, ಬ್ರಹ್ಮಪುತ್ರ ನದಿಗಳಲ್ಲಿ ಈತ ಸಾಗಿ ಬಂದಿದ್ದಾನೆ. ಬರುವ ಹಾದಿಯಲ್ಲೆಲ್ಲಾ ಸಿಗುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿದ್ದಾನೆ. ನದಿಗಳ ಪ್ರಾಮುಖ್ಯತೆ ಬಗ್ಗೆ ಅವರಿಗೆ ವಿವರಿಸಿದ್ದಾನೆ. ನದಿಗಳ ಉಳಿವಿಗೆ ನಾವೇನು ಮಾಡಬೇಕು ಎಂಬುದರ ಬಗ್ಗೆಯು ಈತ ತಿಳಿಸುತ್ತಾನೆ.
ಹೀಗಾಗಿಯೇ ಆಂಡಿಯನ್ನು ವರ್ಲ್ಡ್ ಬ್ಯಾಂಕ್ ಹಾಗೂ ವಿಶ್ವಸಂಸ್ಥೆಯು ನದಿಗಳ ಸಂರಕ್ಷಣೆ ಬಗ್ಗೆ ಹಾಗೂ ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸುವ ರಾಯಭಾರಿಯನ್ನಾಗಿ ನೇಮಿಸಿದೆ.


ಸಾಗಿದ್ದು ಹೇಗೆ?
ಆಂಡಿ ಹುಟ್ಟಿದ್ದು ೧೯೫೪ರಲ್ಲಿ ಸ್ವಿಜರ್‌ಲ್ಯಾಂಡ್‌ನ ಜ್ಯೂರಿಚ್ ಪ್ರಾಂತದಲ್ಲಿ . ನದಿಗಳಲ್ಲಿ ಈಜುವ ಹವ್ಯಾಸ ಈತನಿಗೆ ಅಚ್ಚುಮೆಚ್ಚು, ಸರ್ಫಿಂಗ್, ಹಾಯಿದೋಣಿಯಂತಹ ಸ್ಪರ್ಧೆಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದ. ಕಲಿತ ವಿದ್ಯೆಗೆ ತಕ್ಕ ಕೆಲಸ ಸಿಕ್ಕಿದರೂ ಸಿಕ್ಕ ಕೆಲಸಕ್ಕೆಲ್ಲಾ ಗೋಲಿ ಹೊಡೆದ. ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಒಂದಲ್ಲಾ ಒಂದು ನೆಪ ಹೇಳಿ ಕಾಲು ಕಿತ್ತಿದ್ದ. ಬ್ಯಾಂಕಾಕ್‌ನಲ್ಲಿ ಪುರುಷರ ಬಟ್ಟೆಗಳ ಮಾಡೆಲ್ ಆಗಿ ಕೈತುಂಬಾ ಹಣ ಸಿಗುತ್ತಿದ್ದರೂ ಆ ಕೆಲಸವನ್ನೂ ಬಿಟ್ಟ. ಹವಾಯಿ, ಸ್ವಿಜರ್‌ಲ್ಯಾಂಡ್, ಕೊಲಂಬಿಯಾ, ಅರ್ಜಿಂಟೀನಾ, ಕೆರಿಬಿಯನ್ ಹೀಗೆ ಹಲವಾರು ದೇಶ ಸುತ್ತಾಡಿದರೂ ಮನಸ್ಸಿಗೆ ಒಪ್ಪುವ ಕೆಲಸ ಸಿಗಲಿಲ್ಲ.

ಇದರ ನಡುವೆ ರಸ್ತೆ ಅಫಘಾತವಾಗಿ ಎಂಟು ತಿಂಗಳು ಬೆಡ್‌ರೆಸ್ಟ್. ನಂತರ ಕ್ಯೂಬಾಗೆ ಪಯಣ. ಅಲ್ಲಿ ಬೋಟ್ ತಯಾರಿಕಾ ಕಂಪನಿಯಲ್ಲಿ ಕೆಲಸ. ನದಿಗಳು ಸಮುದ್ರಗಳ ಬಗ್ಗೆ ಮತ್ತೆ ಹೆಚ್ಚಿನ ಆಸಕ್ತಿ."ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು" ಎಂಬಂತೆ ಸಲ್ಲದ ನೆಪ ಹೇಳಿ ಅಲ್ಲಿನ ಕೆಲಸ ಬಿಟ್ಟು ಸ್ಪೇನ್‌ನಲ್ಲಿ ಸಮುದ್ರಯಾನಿಗಳಿಗೆ ಸಹಾಯವಾಗುವ ಪರಿಕರಗಳ ತನ್ನದೇ ಒಂದು "ಶಾಪ್" ಸ್ಥಾಪಿಸಿದ. ಆಗ ಹುಟ್ಟಿದ್ದೇ ವಿಶ್ವ ಪರ್ಯಟನೆಯ ಕನಸು. ಆದರೆ ಸಮುದ್ರದಲ್ಲಿ ಸುಮ್ಮನೆ ಪ್ರಯಾಣ ಮಾಡುವುದಕ್ಕಿಂತ ನದಿಗಳಲ್ಲಿ ಪಯಣಿಸಿ ನದಿಗಳ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವ ನಿರ್ಧಾರ ತಳೆದ. ೨೦೦೩ರಲ್ಲಿ ಆತನ ಕನಸುಗಳು ರೂಪುಗೊಳ್ಳುವ ತನ್ನ ನದಿ ಪರ್ಯಟನೆಯ ಆಸೆ ಈಡೇರುವ ಹಂತ ತಲುಪಿತು.

೨೦೦೩ರಲ್ಲಿ ದಕ್ಷಿಣ ಅಮೆರಿಕಾದ ಆರ್ ನಿಕೋ ನದಿಯಲ್ಲಿ ಹಾಯಿ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ. ಅದರಲ್ಲಿ ಮೂರನೇ ಸ್ಥಾನ ಗಳಿಸಿದ. ಸ್ಪರ್ಧಾತ್ಮಕ ರೇಸ್‌ಗಳಲ್ಲಿ ಭಾಗವಹಿಸಿ ಗೆದ್ದ ಮೊದಲ ಯುರೋಪಿಯನ್ ಎಂಬ ಕೀರ್ತಿಗೂ ಭಾಜನನಾದ. ಮುಂದಿನ ವರ್ಷ ವೆನಿಜುವೆಲಾದಲ್ಲಿ ನಡೆಯಬೇಕಾಗಿದ್ದ ಸ್ಪರ್ಧೆ ರಾಜಕೀಯ ಕಾರಣಗಳಿಗಾಗಿ ಮುಳುಗಿತ್ತು. ಆದರೆ ಆಂಡಿ "ಆರ್ ನಿಕೋ" ನದಿಯಲ್ಲಿ ಅದಾಗಲೇ ಪಯಣ ಆರಂಭಿಸಿದ್ದ. ವಿಶ್ವದ ಅತಿ ಅಪಾಯಕಾರಿ ನದಿಯಲ್ಲಿ ೧೭೦೦ಕಿ.ಮೀ ಕ್ರಮಿಸಿದ. ಈ ನದಿಯಲ್ಲಿ ಕೊಲಂಬಿಯಾ, ವೆನಿಜುವೆಲಾ, ಹಾಗೂ ಬ್ರೆಜಿಲ್ ದೇಶಗಳನ್ನು ಸುತ್ತಿದ. ಈತನ ಇಂತಹ ಹುಚ್ಚಾಟಗಳೇ ಆತನಿಗೆ ಬದುಕಿನಲ್ಲಿ ನೆಲೆ ಕಲ್ಪಿಸಿತು. ಆತನ ಯಾನಗಳಿಗೆ ಸ್ಪಾನ್ಸರ್ ಗಳು ದೊರೆತರು. ನಂತರ ೬ ವಿವಿಧ ದೇಶಗಳನ್ನು ಸಂಪರ್ಕಿಸುವ ೨ ಸಾವಿರ ಕಿ.ಮೀ ಉದ್ಧದ ನದಿಯಲ್ಲಿ ಪಯಣಿಸಿದ. ೨೦೦೮ರಲ್ಲಿ ಆಫ್ರಿಕಾ ದೇಶಗಳಾದ ಜಾಂಬಿಯಾ, ನಮಿಬಿಯಾ, ಬೋಟ್ಸವಾನಾ, ಜಿಂಬಾಬ್ವೆ, ಮೊಜಾಂಬಿಕ್ ದೇಶಗಳನ್ನು ಸಂಪರ್ಕಿಸುವ ೨,೯೦೦ಕಿ.ಮೀ ಉದ್ದದ ಜಾಮೆಂಜಿ ನದಿಯಲ್ಲಿ ಪಯಣಿಸಿ, ನದಿಯಲ್ಲಿ ಪಯಣಿಸುವಾಗ ಕಂಡ ವಿಚಾರಗಳನ್ನೆಲ್ಲಾ ಆ ದೇಶಕ್ಕೆ ತಿಳಿಸಿದ. ಜಾಮೆಂಜಿಯಂತಹ ಸುಂದರ ನದಿಯಿದ್ದರೂ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿಕಂಡು ಮುಮ್ಮಲ ಮರುಗಿದ.

ಗಂಗಾ ಪಯಣ
ಈತನ ನದಿ ಪಯಣ ೨೦೦೯ರಲ್ಲಿ ಗಂಗಾ ನದಿಯಲ್ಲಿ ನಡೆಯಿತು. ಈ ಸಮಯದಲ್ಲಿ ಈತನ ಯಾನಕ್ಕೆ ಇನ್ನಷ್ಟು ಜನ ಕೈಜೋಡಿಸಿದ್ದರು. ಗಂಗಾ ನದಿ ಬಗ್ಗೆ ಹೇಳುವ ಆತ " ನಾ ಕಂಡ ವಿಶ್ವದ ಅತೀ ಸುಂದರ ನದಿಗಳಲ್ಲಿ ಗಂಗಾ ನದಿಗೆ ಮೊದಲ ಸ್ಥಾನ. ಆದರೆ ಈ ನದಿಯಲ್ಲಿ ಸಾಗುವಾಗ ಸಿಕ್ಕ ಶವಗಳು ನಮ್ಮನ್ನು ಸ್ವಲ್ಪ ಭಯಗ್ರಸ್ಥರನ್ನಾಗಿ ಮಾಡಿತು. ನಂತರ ಇದು ಪುರಾಣ ಪ್ರಸಿದ್ಧಿ ಎಂದು ತಿಳಿದಾಗ ಸಂತೋಷವಾಯಿತು. ಆದರೆ ಇದೇ ರಿತಿಯಲ್ಲಿ ಕಲುಷಿತವಾಗಿ ನದಿ ಮುಂದುವರಿದರೇ ಮುಂದಿನ ದಶಕದಲ್ಲಿ ಗಂಗಾ ನೀರು ಕುಡಿಯುವ ಭಾಗ್ಯ ಇರಲಾರದು" ಎಂದು ಎಚ್ಚರಿಸುತ್ತಾನೆ.

ಈ ವರ್ಷ ಬ್ರಹ್ಮಪುತ್ರ
2010ರಲ್ಲಿ ಆಂಡಿಯ ನದಿ ವಿಹಾರ ಭಾರತದ ಇನ್ನೊಂದು ಪ್ರಸಿದ್ಧ ನದಿ ಬಹ್ಮಪುತ್ರದಲ್ಲಿ. ೫೫ ದಿನಗಳ ಈ ಯಾತ್ರೆ ಈ ವರ್ಷದ ನವೆಂಬರ್ ಗೆ ಕೊನೆಗೊಂಡಿದೆ. ಟಿಬೆಟ್‌ನಲ್ಲಿನ ಬ್ರಹ್ಮಪುತ್ರ ನದಿ ಮೂಲದಿಂದ ಬಂಗಾಳ ಕೊಲ್ಲಿ ವರೆಗಿನ ಸಂಗಮದವರೆಗಿನ ೨,೮೦೦ಕಿ.ಮೀ. ದೂರವನ್ನು ಆಂಡಿ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ತಲುಪಿದ್ದಾನೆ. ಹೆಚ್ಚಿನ ಯಾನಿಗಳು ಬೆಳಗಿನ ಸಮಯದಲ್ಲಿ ಪಯಣಿಸಿದರೆ ಆಂಡಿ ತಂಡ ಮಾತ್ರ ರಾತ್ರಿ ೮ ರಿಂದ ಬೆಳಿಗ್ಗೆ ೪ರವರೆಗೆ ಪಯಣಿಸುತ್ತಾರೆ. ಬೆಳಿಗ್ಗೆ ವಿಶ್ರಾಂತಿ. ಆಹಾರ ತಯಾರಿಸಲು ಒಬ್ಬನಿದ್ದಾನೆ. ತಾನು ಸಾಗುವ ಹಾದಿಯಲ್ಲಿ ನದಿಗಳ ರಕ್ಷಣೆ ಬಗ್ಗೆ ಹೇಳಿದ್ದಾನೆ. ಆಫ್ರಿಕಾದಲ್ಲಿ ನದಿಯಿದ್ದರೂ ನೀರಿಗಾಗಿ ಹಾಹಾಕಾರ ಪಡುವ ವ್ಯಥೆಯನ್ನು, ನೀರಿನ ಹಸಿವನ್ನು, ಅಲ್ಲಿ ರೆಕಾರ್ಡ್ ಮಾಡಿದ ಚಿತ್ರಣವನ್ನು ಜನರಿಗೆ ತೋರಿಸಿ ನಿಮ್ಮ ನದಿ ಹೀಗಾಗಬಾರದಾದರೇ ನದಿಗಳ ಬಗ್ಗೆ ಎಚ್ಚರ ವಹಿಸಿ ಎನ್ನುತ್ತಾನೆ. ಬ್ರಹ್ಮಪುತ್ರ ನದಿಯ ಪಯಣ ಮಾಡಿ ಈ ನದಿಯನ್ನು ಯಶಸ್ವಿಯಾಗಿ ಯಾನ ಮಾಡಿದ ಮೊದಲಿಗ ಎಂಬ ಕೀರ್ತಿಗೂ ಭಾಜನನಾಗಿದ್ದಾನೆ ಆಂಡಿ. "ನಾನು ನದಿಗಳನ್ನು ಪ್ರೀತಿಸುತ್ತೇನೆ. ನದಿಗಳೇ ನನಗೆ ಜೀವ. ನದಿಗಳ ಸ್ಪರ್ಶವಿಲ್ಲದಿರುವ ಜನಾಂಗ ಜಗತ್ತಿನಲ್ಲೇ ಇಲ್ಲ" ಇದು ಆಂಡಿ ಹೋದಲ್ಲೆಲ್ಲಾ ಜನರಿಗೆ ಹೇಳುವ ಮಾತು.



ವಿಹಾರ ಪುರವಣಿಯಲ್ಲಿ ಜನವರಿ 1 ರಂದು ಪ್ರಕಟವಾದ ಬರಹ... ಇಲ್ಲಿ ನೋಡಿ..