Tuesday, January 4, 2011

ಹತ್ತು ವರ್ಷದ ಹತ್ತು ಚಿತ್ರಗಳು..

2000 - ಉಪೇಂದ್ರ

ಉಪೇಂದ್ರ ನಿರ್ದೇಶನದ ಈ ಚಿತ್ರ ೨೦೦೦ದಲ್ಲಿ ಬಿಡುಗಡೆಯಾಗಿ ಆ ವರ್ಷ ನಿರೀಕ್ಷಿತ ಗೆಲುವಾಗಿ ದಾಖಲಾಗಿತ್ತು. ತನ್ನ ವಿಚಿತ್ರ ಮ್ಯಾನರಿಸಂನಿಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ "" ನಂತರ ಮತ್ತೊಂದು ಹಿಟ್ ಚಿತ್ರ ಕೊಟ್ಟರು. ಆರಂಭದಲ್ಲಿಯೇ "ದಿ ಎಂಡ್" ಎಂದು ತೋರಿಸುವ ಮೂಲಕ ನಿರೂಪಣೆಯಲ್ಲಿಯೂ ಹೊಸತನಕ್ಕೆ ಸಾಕ್ಷಿಯಾಗಿದ್ದರು. ಬಾಲಿವುಡ್ ನಟಿ ರವಿನಾ ಟಂಡನ್ ಹಾಗೂ ನಟಿ ದಾಮಿನಿ ಅಭಿನಯದ ಮೊದಲ ಕನ್ನಡ ಚಿತ್ರ. ಈ ಚಿತ್ರದ ಹಾಡುಗಳು ಹಾಗೆ ಒಂದಕ್ಕಿಂತ ಒಂದು ಫೇಮಸ್ ಆದವು. ಗುರುಕಿರಣ್ ಹೊಸೆದ ಸಂಗೀತದಲ್ಲಿ"ಉಪ್ಪಿಗಿಂತ ರುಚಿ ಬೇರೆಯಿಲ್ಲ" ಗೀತೆ ಉಪೇಂದ್ರ ಸಹಸ್ರನಾಮವಾದಂತಾಯಿತು.

2001- ಮೆಜೆಸ್ಟಿಕ್

ಪಿ.ಎನ್ ಸತ್ಯಾ ನಿರ್ದೇಶನದ ಈ ಚಿತ್ರದಿಂದ ಕನ್ನಡಕ್ಕೆ ಹೊಸ ಹುಡುಗ ಪರಿಚಯವಾದ. ದಿವಂಗತ ನಟ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಅಭಿನಯದ ಮೊದಲ ಚಿತ್ರ. "ಓಂ" ನಂತರ ಮರೆಯಾಗಿದ್ದ ಮಚ್ಚು-ಲಾಂಗುಗಳು ಈ ಚಿತ್ರದಿಂದ ಮತ್ತೆ ವಿಜೃಂಭಿಸಿದವು. ಈ ದಶಕದ ಮಚ್ಚು-ಲಾಂಗಿಗೆ ಈ ಚಿತ್ರವೇ ಮುನ್ನುಡಿ.

2002- ಅಪ್ಪು

ಪುನೀತ್ ರಾಜ್‌ಕುಮಾರ್ ನಾಯಕನಾಗಿ ಅಭಿನಯಿಸಿದ ಮೊದಲ ಕನ್ನಡ ಚಿತ್ರ. ನಟಿ ರಕ್ಷಿತಾಗೂ ಕೂಡ ಇದು ಮೊದಲ ಚಿತ್ರ. ಇಬ್ಬರ ಮನೋಜ್ಞ ಅಭಿನಯದಿಂದ ಚಿತ್ರ ಸೂಪರ್ ಹಿಟ್ ಆಯಿತು. ಅಲ್ಲಿಂದ ಪುನೀತ್ ರಾಜ್‌ಕುಮಾರ್ ಎಂಬ ನಟ ಕನ್ನಡಕ್ಕೆ ಚಿರ ಪರಿಚಿತನಾದ. ಉಪೇಂದ್ರ ಬರೆದ "ತಾಲಿಬಾನ್ ಅಲ್ಲಾ..ಅಲ್ಲಾ.. ಬಿನ್ ಲಾಡೆನ್ ಅಲ್ವೇ ಅಲ್ಲ" ಗೀತೆಯೂ ಕೂಡ ಬಹು ಪ್ರಸಿದ್ಧಿ ಆಯಿತು.

2003-ಚಂದ್ರಚಕೊರಿ

ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರ 2003ರಲ್ಲಿ ಬಿಡುಗಡೆಯಾಯಿತು. ಈಗಿನ ಫ್ಲಾಪ್ ನಟ ಮುರುಳಿ ಅಭಿನಯದ ಮೊದಲ ಚಿತ್ರ. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಇನ್ನೊಂದು ವಿಶೇಷ. ಬೆಳಗಾವಿಯ ಒಂದು ಥಿಯೇಟರ್ ಅಲ್ಲಿ ಈ ಚಿತ್ರ ಒಂದು ವರ್ಷ ಪ್ರದರ್ಶನದ ಸಾಧನೆ ಮಾಡಿತ್ತು. ಮುರುಳಿ ಈ ಚಿತ್ರದಲ್ಲಿ ಮಾತು ಬಂದರೂ ಮಾತುಬಾರದವನಾಗಿ ಅಭಿನಯಿಸಿದ್ದ.

2004- ಆಪ್ತಮಿತ್ರ

ಮಲಯಾಳಂನ ಯಶಸ್ವೀ ಚಿತ್ರ ಮಣಿ ಚಿತ್ರತಾಳ್ ಕಥೆ ಹೊಂದಿದ್ದ ಈ ಚಿತ್ರ ಸಾಹಸಸಿಂಹನಿಗೆ ಅಗತ್ಯ ಬ್ರೇಕ್ ನೀಡಿತ್ತು. ಈ ಚಿತ್ರದ ನಾಗವಲ್ಲಿ ಪಾತ್ರ ಬಹಳ ಫೇಮಸ್ ಆಯಿತು. ಆದರೆ ಚಿತ್ರ ಬಿಡುಗಡೆಗೂ ಮುಂಚೆ ನಾಗವಲ್ಲಿ ಪಾತ್ರದಲ್ಲಿ ಅಭಿನಯಿಸಿದ್ದ ಸೌಂದರ್ಯ ವಿಧಿವಶರಾದರು. ವಿಶೇಷ ಕಥೆ ಹೊಂದಿದ್ದ ಈ ಚಿತ್ರ ಈ ವರ್ಷದಲ್ಲಿ ಭರ್ಜರಿ ಹಣ ಮಾಡಿತು. ಇದರ ಮೇಕಿಂಗ್ ಬಗ್ಗೆ ಪತ್ರಕರ್ತರೊಬ್ಬರು ಬುಕ್ ಬರೆಯುವಷ್ಟರ ಮಟ್ಟಿಗೆ ಚಿತ್ರ ಹಿಟ್ ಆಗಿಹೋಗಿತ್ತು.

2005- ಜೋಗಿ

ಯಶಸ್ವೀ ಚಿತ್ರ ಕರಿಯದಿಂದ ಗಾಂಧೀನಗರದಲ್ಲಿ ಹೆಸರು ಮಾಡಿದ್ದ ಪ್ರೇಮ್ ನಿರ್ದೇಶಿಸಿದ ಮೂರನೇ ಚಿತ್ರ. ಶಿವರಾಜ್‌ಕುಮಾರ್, ಬಾಂಬೆ ಹುಡುಗಿ ಜೆನ್ನಿಫರ್ ಅಭಿನಯದ ಈ ಚಿತ್ರ. ಆ ವರ್ಷ ಪೂರ್ತಿ ಭರಪೂರ ಹಣವೆತ್ತಿತ್ತು. ಬಾಲಿವುಡ್ ಬೆಡಗಿ ಯಾನಾ ಗುಪ್ತಾ "ಬಿನ್ ಲಾಡೆನ್ನು ನನ್ ಮಾವಾ.." ಎಂಬ ಗೀತೆಗೆ ಹೆಜ್ಜೆ ಹಾಕಿ ಚಿತ್ರವನ್ನು ಇನ್ನಷ್ಟು ಪ್ರಚಾರ ನೀಡಿದರು. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ತಾಯಿ ಪಾತ್ರದಲ್ಲಿದಲ್ಲಿ ಅಭಿನಯಿಸಿದ್ದ ಅರುಂಧತಿ ನಾಗ್‌ಗೆ ಪ್ರಶಸ್ತಿಯೂ ಒಲಿದು ಬಂತು.

2006-ಮುಂಗಾರು ಮಳೆ

ಹನಿ ಹನಿ ಪ್ರೇಮ್ ಕಹಾನಿ ಎಂದು ಬಂದ ಈ ಚಿತ್ರ ಯೋಗರಾಜ್ ಭಟ್ ನಿರ್ದೇಶನದ್ದು. ಬಹುನೀರೀಕ್ಷಿತ ಎರಡೂ ಚಿತ್ರಗಳು(ಮಣಿ ಮತ್ತು ರಂಗ ಎಸ್‌ಎಸ್‌ಎಲ್‌ಸಿ)ಸೋತ ನೆನಪಲ್ಲಿ ಭಟ್‌ಕಟ್ಟಿದ ಅದ್ಭುತ ಪ್ರೇಮ ಕಾವ್ಯ. ವರ್ಷಾಂತ್ಯದಲ್ಲಿ (ಡಿಸೆಂಬರ್-29) ಬಿಡುಗಡೆಯಾದ ಈ ಚಿತ್ರ. 2007ಕ್ಕೆ ಕ್ರೆಡಿಟ್ ಕೊಟ್ಟಿತು. ಚೆಲ್ಲಾಟ ಎಂಬ ಸಾಮಾನ್ಯ ಚಿತ್ರದಲ್ಲಿ ನಟಿಸಿದ್ದ ಗಣೇಶ್ ಈ ಚಿತ್ರದಿಂದ ಮನೆಮನೆಯೂ ಗುರುತಿಸುವಂತಾದರು. ಕನ್ನಡದ ಪ್ರೇಕ್ಷಕರು ಮತ್ತೇ ಪ್ರೇಮದ ಗುಂಗಿಗೆ ಬಿದ್ದರು. ಈ ಚಿತ್ರದಿಂದ ಪೂಜಾ ಗಾಂಧಿ ಮಳೆ ಹುಡುಗಿ ಎಂದೇ ಖ್ಯಾತಳಾದಳು. ಎಸ್.ಕೃಷ್ಣ ಜೋಗ ಜಲಪಾತವನ್ನು ಬೇರೆ ರಿತಿಯೇ ತೋರಿಸಿ ಖ್ಯಾತರಾದರು.

2007- ದುನಿಯಾ

ಯೋಗಾರಾಜ್ ಭಟ್ ಅವರ ಮೊದಲ ಚಿತ್ರ "ಮಣಿ"ಗೆ ಸಂಭಾಷಣೆ ಬರೆದಿದ್ದ "ಸೂರಿ" ದುನಿಯಾ ನಿರ್ದೇಶಿಸುವ ಮೂಲಕ ಗಾಂಧಿನಗರದ ಅಖಾಡಕ್ಕಿಳಿದರು. ವಿಲನ್ ಸಹಚರನಾಗಿಯೂ ಅಥವಾ ವಿಲನ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಈ ಚಿತ್ರದಿಂದ ನಾಯಕ ನಟನಾದರು. ಕರಾವಳಿ ಹುಡುಗಿ ರಶ್ಮಿ ನಾಯಕಿಯಾಗಿ ಅಭಿನಯಿಸಿದ್ದ ಈ ಚಿತ್ರ 2007ರ ದಾಖಲೆಯಾಗಿ ಸಾಬೀತಾಯಿತು.

2008-ಗಾಳಿಪಟ

ಮುಂಗಾರು ಮಳೆ ನಂತರ ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ 2008ರಲ್ಲಿ ಜಾಕ್ ಪಾಟ್ ಹೊಡೆಯಿತು. ಮೂವರು ಗೆಳೆಯರ ಪ್ರೇಮಕಾವ್ಯವನ್ನು ಭಟ್ಟರು ಅಷ್ಟೆ ಅಚ್ಚುಕಟ್ಟಾಗಿ ಬಿಡಿಸಿಟ್ಟಿದ್ದರು. ಕೊಡಚಾದ್ರಿ, ಮುಗಿಲ್‌ಪೇಟೆಯನ್ನು ಕ್ಯಾಮರಾಮೆನ್ ರತ್ನವೇಲು ಬೇರೆಯ ಕಣ್ಣಲ್ಲಿ ತೋರಿಸಿದರು. ಚಿತ್ರದ ಎಲ್ಲಾ ಗೀತೆಗಳು ಜನರ ಬಾಯಲ್ಲಿ ಗುನುಗುನಿಸಿದವು.

2009- ಎದ್ದೇಳು ಮಂಜುನಾಥ

ಮಠದಂತಹ ಡಿಫರೆಂಟ್ ಆಂಗಲ್‌ನ ಚಿತ್ರ ನೀಡಿ ಆಗಲೇ ಪ್ರಸಿದ್ಧಿಗೆ ಬಂದಿದ್ದ ಗುರುಪ್ರಸಾದ್ ಎದ್ದೇಳು ಮಂಜುನಾಥ ಚಿತ್ರವನ್ನು ನಿರ್ದೇಶಿಸುವ ಮೂಲಕ ಮತ್ತೆ ಅಖಾಡಕ್ಕಿಳಿದರು. ಹಾಗಂತ ಎದ್ದೇಳು ಮಂಜುನಾಥ ಹೇಳಿಕೊಳ್ಳುವಂಥ ಹಿಟ್ ಅಲ್ಲದಿದ್ದರೂ ತನ್ನ ಸಂಭಾಷಣೆಗಳಿಂದ ಗುರುತಿಸಿಕೊಂಡಿತು. ತಬಲಾನಾಣಿ, ಜಗ್ಗೇಶ್ ಪಾತ್ರಜನರಿಂದ ಮೆಚ್ಚುಗೆ ಪಡೆಯಿತು.

2010- ಸೂಪರ್

ಉಪೇಂದ್ರ ನಿರ್ದೇಶನದ ಬಹುನೀರೀಕ್ಷಿತ ಚಿತ್ರ ದಿಸೆಂಬರ್ 5 ರಂದು ಬಿಡುಗಡೆಗೊಂಡಿತು. ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಈ ಚಿತ್ರದಿಂದ ಸ್ಯಾಂಡಲ್‌ವುಡ್‌ಗೂ ಎಂಟ್ರಿಯಾದರು. ವಿ. ಹರಿಕೃಷ್ಣ ಸಂಗೀತ ಜನರನ್ನು ಹುಚ್ಚೆಬ್ಬಿಸುವಂತೆ ಮಾಡಿತ್ತು. ಬಿಡುಗಡೆಯಾದ ಎಲ್ಲಾ ಥಿಯೇಟರ್‌ಗಳಲ್ಲೂ ಸೂಪರ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಕಥಾ ಹಂದರವುಳ್ಳ ಈ ಚಿತ್ರದಲ್ಲಿ ಉಪ್ಪಿ ಸುಭಾಷ್ ಗಾಂಧಿಯಾಗಿ ನಟಿಸಿದ್ದರು. ಹಾಗಾಗಿ ಈ ಚಿತ್ರ ಈ ವರ್ಷದ ಚಿತ್ರ.

ಪೂರ್ತಿ ಪೇಜ್ ನೋಡುವುದಾದರೆ.. ಇಲ್ಲಿನ ಲಿಂಕ್ ಉಪಯೋಗಿಸಿ...

http://www.hosadigantha.in/epaper.php?date=01-01-2011&name=01-01-2011-14

No comments:

Post a Comment

ನಿಮಗನಿಸಿದ್ದು....