Thursday, September 30, 2010

ನೀವು ಕಂಡ ಕನಸುಗಳು ಇನ್ನೂ ಹಾಗೇ ಉಳಿದಿವೆ..


ಶಂಕರ್ ನಾಗ್ ಎಂದೂ ತನಗೆ ಗೌರವ ನೀಡಿ ಎಂದು ಆಪೇಕ್ಷಿಸಿದವರೇ ಅಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ತಾನೊಬ್ಬ ಶ್ರೇಷ್ಠ ನಟ, ನಿರ್ದೇಶಕ ಎಂಬ ಹಮ್ಮು ಅವರಿಗೆ ಇರಲೇ ಇಲ್ಲ. ಆದ್ದರಿಂದ ಇಂದು ಜನ ಶಂಕರನಾಗ್ ರನ್ನು ಜನ ಪ್ರೀತಿಯಿಂದ ಏಕವಚನದಲ್ಲೆ ‘ನಮ್ಮ ಶಂಕರ್’ಹಾಗೇ ‘ಶಂಕ್ರಣ್ಣ' ಎಂದು ಸಂಬೊಧಿಸುತ್ತಾರೆ. ಏಕೆಂದರೆ ಅವರ ಪಾಲಿಗೆ ಶಂಕರ್ ನಾಗ್ ತಮ್ಮಮನೆಮಗ..

1990ರ ಸೆಪ್ಟಂಬರ್ 30, ಆ ದಿನದ ಮುಂಜಾನೆಯಲ್ಲಿ ದಾವಣಗೆರೆಯ ಕರಿ ಹೆಬ್ಬಾವಿನಂಥ ರಸ್ತೆಯ ಮೇಲೆ ಹೆಣವಾಗಿ ಬಿದ್ದ ಅವರೊಂದಿಗೆ ಚಿತ್ರಜಗತ್ತಿನ ಬಂಗಾರದ ಕನಸುಗಳು ನಡೆದು ಬಿಟ್ಟವು ಸದ್ದೇ ಇಲ್ಲದಂತೆ ! ಆತ ಅಗಲಿ ಇಪ್ಪತ್ತು ವರ್ಷವಾಯಿತು ಬೆಂಗಳೂರಿನ ಮೆಟ್ರೊ ಕಾಮಗಾರಿ ನೋಡುವಾಗಲೆಲ್ಲಾ ಆತ ನೆನಪಾಗುತ್ತಾನೆ. ಮನಸ್ಸಿಗೆ ಸುಪ್ತವಾಗಿ ಕಾಡಿ "ಅವನಿದ್ದಿದ್ದರೇ" ಎಂಬ ಭಾವ ಬರಿಸಿ, ಮರೆಯಾಗುತ್ತಾನೆ. ಆತ ಇಲ್ಲದಿರುವಾಗ ಆತನ ಬಗ್ಗೆ ಚಿಕ್ಕ ನೆನೆಪು ಮಾಡಿಕೊಳ್ಳೋಣ.

ಶಂಕರ್ ನಾಗ್‌ ಯಾನೆ ಶಂಕರ್ ನಾಗರಕಟ್ಟೆ .
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಾಗರಕಟ್ಟೆಯಲ್ಲಿ ಹುಟ್ಟಿದ ಶಂಕರ್ ನಾಗ್‌(ಇವರ ಅಣ್ಣ ಅನಂತ್‌ನಾಗ್‌) ಕನಸು ಕಂಗಳಲ್ಲಿ ಜೀವನದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದ. ನಾಟಕ, ರಂಗಭೂಮಿ, ಕಲಾತ್ಮಕ ಚಿತ್ರಗಳೆಂದರೆ ಪಂಚಪ್ರಾಣ. ಹಾಗಂತ ಕೇವಲ ಚಿತ್ರ ನಿರ್ಮಾಣ ನಿರ್ದೇಶನ ಮಾಡುತ್ತಾ ಕೂರಲಿಲ್ಲ. ತನ್ನ ಮನಸ್ಸಿಗೆ ಬಂದ ಅಭಿವೃದ್ದಿಯ ಕನಸನ್ನು ಸರ್ಕಾರದ ಮುಂದಿಡುತ್ತಿದ್ದರು. ಲಂಡನ್‌ನಲ್ಲಿ ಮೆಟ್ರೊ ರೈಲುಗಳನ್ನು ನೋಡಿದ್ದ ಶಂಕರ್ ನಾಗ್, ಇದೇ ಮಾದರಿಯ ರೈಲುಗಳು ಬೆಂಗಳೂರಿಗೆ ಸೂಕ್ತ ಎಂದವರೇ ಸರ್ಕಾರಕ್ಕೆ ಎರಡು ಪುಟಗಳ ವರದಿ ಸಲ್ಲಿದ್ದರು. ಆದರೆ ಸರ್ಕಾರ ಅದನ್ನು ಬುಟ್ಟಿಗೆಸೆಯಿತು. ಇಂದು ಅವರ ಕನಸು ನನಸಾಗುವ ಹಂತದಲ್ಲಿದೆ ಆದರೆ ಅವರೇ ಇಲ್ಲ..!
ನಟಿಸಿದ ಮೊದಲ ಚಿತ್ರಕ್ಕೆ ಪ್ರಶಸ್ತಿ
  12 ವರ್ಷಗಳ ಚಿತ್ರಜೀವನದಲ್ಲಿ ಹೆಚ್ಚು ಕಡಿಮೆ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್ ನಾಗ್ ಅವರ ಪ್ರತಿಭೆ ಮೊದಲು ಗುರುತಿಸಿದವರು ಗಿರೀಶ್‌ ಕಾನಾರ್ಡ್‌ ಅವರು ನಿರ್ದೇಶಿಸಿದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಗಂಡುಗಲಿ ಪಾತ್ರಕ್ಕೆ ಆಯ್ಕೆಯಾದ ಇವರು ಆ ಚಿತ್ರದ ನಟನೆಗಾಗಿ ಪ್ರಶಸ್ತಿ ಪಡೆದುಕೊಂಡರು. ನಂತರ ವಾಣಿಜ್ಯ ಚಿತ್ರಗಳೆಡೆ ವಾಲಿದ ಶಂಕರ್ ‘ಸೀತಾರಾಮು' ಚಿತ್ರ ಭರ್ಜರಿ ಯಶಸ್ಸು ಕಂಡಿತು. ನಂತರ ಆಟೋರಾಜ, ಸಿಬಿಐ ಶಂಕರ್, ಸಾಂಗ್ಲಿಯಾನ ಯಶಸ್ವೀಯಾದದ್ದೇ ತಡ ಸಾಲು ಸಾಲು ನಿರ್ಮಾಪಕರು ಇವರನ್ನು ನಾಯಕನಾಗಿ ಆಯ್ಕೆ ಮಾಡಿದರೂ ಅವರೇ ಕನಸೇ ಬೇರೆಯದಿತ್ತು. ಏನಾದರೂ ಹೊಸದನ್ನು ನೀಡಬೇಕು ಎನ್ನುವ ಮನಸ್ಸಾದಾಗ ನಿರ್ದೇಶಕರ ಪಾತ್ರ ನಿಭಾಯಿಸಿದರು. ಶಂಕರ್ ನಿರ್ದೇಶಿಸಿದ ಪ್ರಥಮ ಚಿತ್ರ ‘ಮಿಂಚಿನ ಓಟ’ಕ್ಕೆ ಏಳು ರಾಜ್ಯ ಪ್ರಶಸ್ತಿ ಪಡೆದು ತಮ್ಮ ಶಕ್ತಿ ತೋರಿಸಿದ್ದರು. ನಂತರ ರಾಷ್ಟ್ರ ಪ್ರಶಸ್ತಿ ಪಡೆದ ಆಕ್ಸಿಡೆಂಟ್‌, ಗೀತಾ, ಜನ್ಮ ಜನ್ಮದ ಅನುಭಂಧ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಡಾ. ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ ಒಂದು ಮುತ್ತಿನ ಕಥೆ ಇವೆಲ್ಲಾ ಶಂಕರ್ ನಾಗ್‌ ಗರಡಿಯಲ್ಲಿ ಬಂದ ಚಿತ್ರಗಳು.
    ಇಂದಿಗೂ ಶಂಕರ್ ನಾಗ್ ರನ್ನು ಹಲಾವಾರು ಕಾರಣಗಳಿಗೆ ನೆನಪಿಸಿಕೊಳ್ಳುತ್ತಾರೆ. ಆಗ ಟಿವಿ ಎಂದರೆ ದೂರದರ್ಶನ ಮಾತ್ರ. ಈಗಿನ ಹಾಗೆ ಹಳ್ಳಿಹಳ್ಳಿಗೂ ಟಿವಿ ಚಾನೆಲ್‌ಗಳು ಇರಲಿಲ್ಲ. ಅಂತದ್ದರಲ್ಲಿ ಶಂಕರ್, ಆರ್‌.ಕೆ. ನಾರಾಯಣ್‌ ಅವರ ಮಾಲ್ಗುಡಿ ಡೇಸ್‌ನ್ನು ಧಾರವಾಹಿಯನ್ನಾಗಿಸಿದರು. ಬಹು ಜನಪ್ರಿಯಗೊಂಡ ಈ ಧಾರವಾಹಿ ಶಂಕರ್ ನಾಗ್‌ ಎಂಬ ಕನ್ನಡದ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಕನ್ನಡಕೊಬ್ಬ ಸಮರ್ಥ ನಿರ್ದೇಶಕ ದಕ್ಕಿದಂತಾಯಿತು ಎಂದು ನಿಟ್ಟುಸಿರಿಟ್ಟರು. ನಂತರ ಸ್ವಾಮಿ ಎಂಬ ಧಾರವಾಹಿ ನಿರ್ದೇಶಿಸಿದರು.
ಬೆಂಗಳೂರ ಕನಸು.
 ಇಂದು ಬೆಂಗಳೂರಿನಲ್ಲಿ ವಿಶಾಲವಾದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿಗೆ ಇದು ಅನಿವಾರ್ಯವೆಂದು ಹೇಳಿದವರು ಶಂಕರ್ ನಾಗ್, ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಠಿಯಲ್ಲಿ ನಂದಿ ಬೆಟ್ಟಕ್ಕೆ ರೋಪ್ ಕಟ್ಟುವ ಯೋಜನೆ ರೂಪಿಸಿದ್ದರು ಅದನ್ನು ಒಪ್ಪಿದ್ದ ಸರ್ಕಾರ ಅದರ ಭೂಮಿಪೂಜೆಯನ್ನು ನಡೆಸಿದ್ದರು. ಆದರೆ ಶಂಕರ್ ನಾಗ್ ಮರಣದ ನಂತರ ಅವರ ಜೊತೆಯಲ್ಲಿಯೇ ಅವರ ಈ ಬಹುದೊಡ್ಡ ಕನಸು ಮಣ್ಣು ಸೇರಿತ್ತು.
 ಶಂಕರ್ ನಾಗ್ ಚಿತ್ರದಲ್ಲಿ ನಟಿಸುವುದು ಕೇವಲ ಹೊಟ್ಟೆಪಾಡಿಗಾಗಿ ಮಾತ್ರ. ಆದರೆ ಅವರ ಆಸಕ್ತಿ ರಂಗಭೂಮಿಯ ಮೇಲೆ ಇತ್ತು ಇದಕ್ಕಾಗಿಯೇ ‘ಸಂಕೇತ್’ ಎಂಬ ರಂಗಭೂಮಿ ತಂಡವನ್ನು ರಚಿಸಿದ್ದರು ಇದರ ಮೂಲಕ ಕಾರ್ನಾಡ್ ರ ‘ನಾಗಮಂಡಲ', ‘ಅಂಜುಮಲ್ಲಿಗೆ' ಹಾಗೆ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಎನ್ನುವ ನಾಟಕವನ್ನು ನಿರ್ದೇಶಿಸಿದ್ದರು. ಇಂದಿಗೂ ಸಂಕೇತ್ ತಂಡ ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಹೆಸರುಗಳಿಸಿ ಮುನ್ನಡೆಯುತ್ತಿದೆ. ಆದರೆ ಕನ್ನಡಕ್ಕೆ ಕರ್ನಾಟಕದಲ್ಲೇ ಸುಸಜ್ಜಿತವಾದ ಸ್ಟುಡಿಯೋ ಬೇಕೆಂಬ ದಿಸೆಯಲ್ಲಿ ಆರಂಭಿಸಿದ್ದ ‘ಸಂಕೇತ್' ಸ್ಟುಡಿಯೋ ಉಳಿಸಿಕೊಳ್ಳಲಾಗಲಿಲ್ಲ ಆದರೆ ಅವರ ಕನಸಿನ ಕೂಸು ರಂಗಶಂಕರ ಇಂದು ಜೆ.ಪಿ.ನಗರದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿದೆ. ಪ್ರತಿನಿತ್ಯದ ರಂಗಭೂಮಿ ಕಾಯಕದಲ್ಲಿ ತೊಡಗಿರುವ ರಂಗಶಂಕರ ಶಂಕರನಾಗ್ ನೆನಪನ್ನು ಇನ್ನೂ ಹಸಿರಾಗುಳಿಸಿದೆ.
ದೇವರು ಕರೆಸಿಕೊಂಡ
ತನ್ನ 12 ವರ್ಷಗಳ ಚಿತ್ರಜೀವನದಲ್ಲಿ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತಿತ್ತು.ಒಂದೇ ಸಮಯದಲ್ಲಿ ಮೂರ್ನಾಲ್ಕು ಕೆಲಸ ಮಾಡುತ್ತಿದ್ದ ಶಂಕರನಾಗ್  ಶರವೇಗದ ಕೆಲಸ ನೋಡಿ ಆ ದೇವರಿಗೂ ಅಸೂಯೆಯಾಗಿದ್ದಿರಬೇಕು. ಸೆಪ್ಟಂಬರ್ 30ರಂದು ಜೋಕುಮಾರಸ್ವಾಮಿ ಚಿತ್ರದ ಮಾತುಕತೆಗಾಗಿ ಬೆಂಗಳೂರಿಗೆ ಹೆಂಡತಿ ಅರುಂಧತಿ ನಾಗ್ ಮಗಳು ಕಾವ್ಯ ಜೊತೆಯಲ್ಲಿ ಬರುತ್ತಿದ್ದ ಶಂಕರನಾಗ್ ಕಾರು ದಾವಣಗೆರೆಯ ಆನುಗೋಡಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕಿಡಾಯಿತು. ಅಷ್ಟೇ, ಶಂಕರನಾಗ್ ಎಂಬ ಪಾದರಸದ ಯುವಕ ಹೆಣವಾಗಿದ್ದ..! ಆತ ಅಭಿನಯಿಸಿದ್ದ ಕೊನೆಯ ಚಿತ್ರ ನಿಗೂಢ ರಹಸ್ಯ.  
ಅಲ್ಲಿಗೆ ಕನ್ನಡ ಚಿತ್ರರಂಗದ ಅಪೂರ್ವ ಕುಡಿಯೊಂದು ಕಂಡು ಕಾಣದಂತೆ ಕಣ್ಮರೆಯಾಯಿತು. ಆದರೆ ಶಂಕರನಾಗ್ ಎಂಬ ಕನಸು ಕಂಗಳ ಯುವಕ ಇಂದಿಗೂ ಪ್ರತಿಯೊಬ್ಬ ಆಟೋ ಡ್ರೈವರ್  ಕಂಗಳಲ್ಲಿದ್ದಾನೆ. ಆತನ ಮುಗುಳ್ನಗುವಿನ ಚಿತ್ರ ಬೆಂಗಳೂರಿನ ಹೆಚ್ಚಿನ ಆಟೋಗಳ ಮೇಲೆ ರಾರಾಜಿಸುವಾಗ ಶಂಕರನಾಗ್ ಎಂಬ ಅಸಮಾನ್ಯ ಪ್ರತಿಭೆ ಹೇಗೆ ಜನಸಾಮಾನ್ಯರಲ್ಲಿ ಆಪ್ತವಾಗಿ ಬೇರೂರಿದ್ದ ಎನ್ನುವುದು ಸ್ಪಷ್ಠವಾಗುತ್ತದೆ.

ಅಯೋಧ್ಯೆ ತೀರ್ಪು..ಸುದ್ದಿಮನೆಯ ಹಾಡು...

ಬಹು ನಿರೀಕ್ಷಿತ ಅಯೊಧ್ಯೆ ತೀರ್ಪು ಹೊರಬಿದ್ದಿದೆ..ಮಾಧ್ಯಮ ಮಂದಿ ಎಚ್ಚರಿಸುವಂತೆ ಏನೂ ಆಗಿಲ್ಲ. ಅದಕ್ಕೆ ಕೇಂದ್ರ ಸರ್ಕಾರ ಮೂಗು ದಾರ ಹಾಕಿದ್ದು ಕಾರಣವಾದರೂ, ಪತ್ರಿಕೆಗಿಂತ, ಟಿವಿ ಮಾದ್ಯಮದವರ ಅವಸ್ಥೆ ಕಂಡು ನಮ್ಮ ಸುದ್ದಿಮನೆಯಲ್ಲಿ ನಗುವುದೊಂದೆ ಬಾಕಿ..ಕನ್ನಡದ ಪ್ರತಿಷ್ಟತ ನ್ಯೂಸ್ ಚಾನೆಲ್ ಒಂದು ಬೆಳಗಿನ್ನಿಂದಲೆ ಒದರುತ್ತಾ ಸಾಗುತ್ತಿತ್ತು..ಅದಕ್ಕೆ ಲೆಕ್ಕವಿಲ್ಲ ದಷ್ಟು ಬ್ರೇಕಿಂಗ್ ನ್ಯೂಸ್ ಗಳು ಬರುತ್ತಿದ್ದವು. ಬೆಳಿಗ್ಗೆ ಬೆಳಿಗ್ಗೆ ನಿರೂಪಕಿ ಮೀನ್ಸ್ ಆಂಕರ್ ಕೆಳಿದ ಪ್ರಶ್ನೆ ಅಭಾಸದ ಪರಮಾವಧಿ ಎಂದರೆ ತಪ್ಪಾಗಲಿಕ್ಕಿಲ್ಲ.. ಎಲ್ಲಾ ಕಡೆ ಗಲಾಟೆ, ದೊಂಬಿ ಆಗಬಾರದು ಎಂದು ಪೋಲೀಸ್ ಸರ್ಪಗಾವಲು ಇದ್ದಿದ್ದರೆ..ಆಕೆ ಪೋನ್ ಇನ್ ಕಾಲ್ ಅಲ್ಲಿ ಇವತ್ತು ಗಲಾಟೆ ಆಗುವ ಸಂಭವ ಕಾಣುತ್ತಿದೆಯಾ ಎಂದು ಮೂರು-, ನಾಲ್ಕು ಬಾರಿ ಕೆಳಿದಳು. ಆಕೆಯ ಪ್ರಕಾರ ಗಲಾಟೆ ಆದರೆ ಮತ್ತೊಂದು ಬ್ರೆಕಿಂಗ್ ನ್ಯೂಸ್ ಆಗುತ್ತದೆ ಎಂದು ಭಾವಿಸಿರಬೇಕು..ಮೀಡಿಯಾಗಳು ದುರಂತದ ಹಾದಿಯಲ್ಲಿ ಸಾಗುತ್ತಿರುವ ಉದಾಹರಣೆ ಗೆ ಈದು ಹೊಸ ಸೆರ್ಪಡೆ..ಅಷ್ಟೆ.
ಇನ್ನು ನಮ್ಮ ಸುದ್ದಿ ಮನೆಯಲ್ಲಿ...
ಅಯೋಧ್ಯೆ ಎಂದರೆ ಬಹಳ ದೊಡ್ಡ ನ್ಯೂಸ್ ಆಗುವ ಪೇಪರ್..ಆ ದಿನ ನನ್ನ ಪ್ರತಿನಿತ್ಯದ ಪೇಜ್ನ್ನು ಅಯೋಧ್ಯೆ ಗಾಗಿ ಮೀಸಲಿಟ್ಟಿದದರಿಂದ ಸ್ವಲ್ಪ ಆರಾಮದಿಂದಿದ್ದೆ ಆದರೆ ಗಂಟೆ 12 ದಾಟುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಧಾವಂತ ಆರಂಭವಾಗಿತ್ತು. ಇಂದು ಅಯೋಧ್ಯೆ ತೀರ್ಪು ಏನಾಗಲಿದೆಯೂ..ಎಂಬ ಬಗ್ಗೆ ಆಲೋಚಿಸುತ್ತಿದ್ದೆ..ಹಾಗಾಗಿ ನನ್ನಿಂದ ಒಂದ್ಕ್ಷರವನ್ನು ಬರೆಯಲಾಗಲಿಲ್ಲ..ಆಫೀಸಿನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದೆ..ಎಲ್ಲರ ಕಂಪ್ಯೂಟರ್ ಮೇಲೂ (ಅದರ ಅಕ್ಕ-ಪಕ್ಕದಲ್ಲೂ) ಅಯೋಧ್ಯೆಯ ನ್ಯೂಸ್ ಗಳ ಪುರಾಣಗಳು..ಜನರಲ್ ಡೆಸ್ಕ್ನಲ್ಲಿದ್ದ ಎಲ್ಲರೂ ಅದರ ಬಗ್ಗೆ ಉತ್ಸುಕರಾಗಿದ್ದರು. ಇಂದು ಆಫೀಸ್ ನಲ್ಲಿ ಯಾರಿಗೂ ರಜಾ ನೀಡದ್ದರಿಂದ ಕಚೇರಿ ತುಂಬಿ ತುಳುಕುತ್ತಿತ್ತು.
3.30 ಆದಾಗ ಎಲ್ಲರ ಕಂಪ್ಯೂಟರ್ ನಲ್ಲೂ ಅಯೋಧ್ಯೆಗೆ ಸಂಬಂಧ ಪಟ್ಟ ವೆಬ್ ತಾಣಗಳು ಕಂಪ್ಯೂಟರ್ ಮೇಲೆ ರಾರಾಜಿಸಿದ್ದವು. ನಾನು ಸಿಎನ್ಎನ್ ಐಬಿನ್ ಚಾನೆಲ್ಗಳ ಮೇಲೆ ಕಣ್ಣಿಟ್ಟಿದ್ದೆ. ಪ್ರತಿಕ್ಷಣ ಹೊಸ ಹೊಸ ಸುದ್ದಿಗಳು ಬಿತ್ತರಗೊಳ್ಳುತ್ತಿದ್ದವು. 4 ಗಂಟೆಗೆ ತೀರ್ಪು ಪ್ರಕಟಗೊಳ್ಳುತ್ತದೆ ಎಂದಾಗ ಸ್ವಲ್ಪ ನಿರಾಳ. ಹಾಗೆ ನನ್ನ ಸಪ್ಲಿಮೆಂಟ್  ಪೇಜ್ ನೋಡಿ ಮುಗಿಸಿದಾಗ ಗಂಟೆ ಸರಿಯಾಗಿ 4 ಆಗಿತ್ತು.. ರಿಪೋರ್ಟಿಂಗ್ ಸೆಕ್ಷನ್ ನಲ್ಲಿ ಆಗಲೇ ಯಾರ್ಯಾರ ಪ್ರತಿಕ್ರಿಯೆ ತೆಗೆದುಕೊಳ್ಳಬೇಕೆಂಬ ಚರ್ಚೆ ಆರಂಭವಾಗಿತ್ತು.. ಪ್ರತಿದಿನ 5 ಗಂಟೆಗೆ ಸಭೆಸೇರುವ ಸೀನಿಯರ್ಗಳ ತಂಡ ಅಂದು ಬೇಗನೇ ಸಭೆ ಸೇರಿ ಆಗಬೇಕಾದ ಕೆಲಸಗಳ ಬಗ್ಗೆ ತಿರ್ಮಾನಿಸಿತ್ತು. ಅಲ್ಲಿಗೆ. ಟಿವಿಯಲ್ಲಿ ಅಯೋದ್ಯೆ ಕುರಿತಾದ ತೀರ್ಪು ಹೊರಬಂದಿತ್ತು.
ತಮ್ಮ ಸ್ವಸ್ಥಾನ ದಿಂದ ಎಲ್ಲರೂ ಎದ್ದು ಡೆಸ್ಕ್ ವಿಭಾಗದಲ್ಲಿರುವ ಟಿವಿ ಹತ್ತಿರ ಸೇರಿದ್ದರು. ಕ್ಷಣ ಕ್ಷಣವೂ ಕುತೂಹಲ. ಅದರಲ್ಲಿ ಡಿಶಿಶನ್ ಎನಂತ ಹಾಕಿದ್ದಾರೆ ಆ ಚಾನೆಲ್ ಹಾಕಿ, ಈ ಚಾನೆಲ್ ಹಾಕಿ ಎಂಬ ಸಣ್ಣ ಧ್ವನಿಗಳು ಕೇಳಿಬರುತ್ತಿದ್ದರೂ..ಅಂತೂ ಎನ್ ಡಿಟಿವಿ ಯಲ್ಲಿ, ಆಜ್ ತಕ್ ಚಾನೆಲ್ ನಲ್ಲಿ ಡಿಶಶನ್ ಹೊರಬಿದ್ದದ್ದು ಕೆಳಿಸಿಕೊಂಡಾಗ ಒಂದು ಸಾರಿ ಚಪ್ಪಾಳೆ ತಟ್ಟಿ ಖುಷಿ ಪಟ್ಟೆವು. ನಂತರ ಟೀ ಕುಡಿದು ತೀರ್ಪು ಬಗ್ಗೆ ಚರ್ಚೆಗಳಾದವು ಕೆಲವರಿಗೆ ಸಮಾದಾನವಾಗಲಿಲ್ಲ.."ನನಗೂ ಸೇರಿ", ನಂತರ ಕೆಲಸದ ಸಮಯ..ಅಂತೂ ರಾಮನ ಭೂಮಿ ರಾಮನಿಗೆ ಸಿಕ್ಕತು ಅನ್ನೊದಷ್ಟೆ ಸಂತೋಷ.

Tuesday, September 28, 2010

ದಿಕ್ಕಿಲ್ಲದ ‘ಗಜ'ರಾಜ..

 ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಉಳಿಸಿಕೊಳ್ಳಲು ನಾವು ಹರಸಾಹಸ ಪಡುತ್ತಿದ್ದೆವೆ. ಇಂದು ಆನೆಗಳ ಗತಿ ಅದೇ ದಾರಿಯಲ್ಲಿ ಸಾಗುತ್ತಿದೆ. ಪಾರಂಪರಿಕ ಪ್ರಾಣಿ ಎಂದು ಘೋಷಿಸಿದರೂ ಆನೆಗಳ ಉಳಿವಿಗೆ ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲ.

ಆನೆಗಳ ಸಾವು ಮಾಮೂಲಿಯಾಗಿರುವಾಗ ದೇಶದಲ್ಲಿ ಇನ್ನೊಂದು ಬಹುದೊಡ್ಡ ಘಟನೆ ಸಂಭವಿಸಿದೆ. ಪಶ್ಚಿಮ ಬಂಗಾಳದಲ್ಲಿ ರೈಲಿಗೆ ಸಿಲುಕಿ ಬರೋಬ್ಬರಿ ಏಳು ಆನೆಗಳು ಮೃತಪಟ್ಟಿವೆ..
ಹಾಗಾದರೆ ಇದಕ್ಕೆಲ್ಲ ಕೊನೆ ಎಂದು.
 ಎಲಿಫೆಂಟ್ ಟಾಸ್ಕ್ ಫೋರ್ಸ ಬಿಡುಗಡೆಗೊಳಿಸಿದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 1987ರಿಂದ ಇಲ್ಲಿಯವರೆಗೆ ಒಟ್ಟು 150 ಆನೆಗಳು ರೈಲಿಗೆ ಆಹಾರವಾಗಿವೆ..! ಆದರೆ ಭಾರತದ ರಾಜಕಾರಣಿಗಳು ಇದೆಲ್ಲ ಮಾಮೂಲಿ ಎಂಬಂತೆ ಹೇಳುತ್ತಿರುವುದು ನಿಜಕ್ಕೂ ದುರಂತ. ಆನೆಗಳು ರೈಲಿಗೆ ಸಿಲುಕಿ ಸಾವೀಗೀಡಾಗುತ್ತಿರುವ ವಿಚಾರದಲ್ಲಿ ಪಶ್ಚಿಮ ಬಂಗಾಳ ದ್ವಿತೀಯ ಸ್ಥಾನಿಯಾಗಿದ್ದರೆ ಮೊದಲ ಸ್ಥಾನದಲ್ಲಿರುವ ಅಸ್ಸಾಂನಲ್ಲಿ ಶೇ.36 ಆನೆಗಳು ರೈಲಿಗೆ ಸಿಲುಕಿ ಸಾವಿಗೀಡಾಗುತ್ತಿದೆ.
ಎಲ್ಲೆಲ್ಲಿ ಎಷ್ಟೆಷ್ಟು..
 ಹಾಗೆ ಉತ್ತರ ಖಂಡದಲ್ಲಿ ಶೇ. 14, ಜಾರ್ಖಂಡ್ ನಲ್ಲಿ ಶೇ.10, ತಮಿಳುನಾಡಿನಲ್ಲಿ ಶೇ.6 ಉತ್ತರ ಪ್ರದೇಶದಲ್ಲಿ ಹಾಗು ಕೇರಳದಲ್ಲಿ ಶೇ.3 ರಷ್ಟು ಆನೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಆದರೆ ಇದಾವುದರ ಪರಿವೇ ಇಲ್ಲದ ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವಲ್ಲಿ ಸುಖ ಕಂಡು ಕೊಳ್ಳುತ್ತಿದ್ದಾರೆ. ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಿದ ಮರುದಿನವೇ ಏಳು ಆನೆಗಳ ಮೃತಪಟ್ಟರಿವುದಕ್ಕೆ ನಮ್ಮ ಕೇಂದ್ರ ಪರಿಸರ ಸಚಿವ ರೈಲ್ವೆ ಮಂಡಳಿ ಜೊತೆ ಮಾತನಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಪಾಪ ರೈಲ್ವೇ ಅಧಿಕಾರಿಗಳು ಏನು ತಾನೆ ಮಾಡಿಯಾರು..?
ಆ ಪ್ರದೇಶದಲ್ಲಿ ಆನೆಗಳ ಸಾವು ಇದೆ ಮೊದಲಲ್ಲ ಹಲವಾರು ಬಾರಿ ಸಂಭವಿಸಿದೆ ಎಂದು ಸಚಿವರೇ ಹೇಳಿದ್ದಾರೆ. ಮೊದಲ ಬಾರಿ ಇಂತಹ ಘಟನೆ ಸಂಭವಿಸಿದ್ದಾಗ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲವೇನೋ.
ಇಷ್ಟಲ್ಲದೇ..
ಆನೆಗಳು ಹೀಗೆ ಅಚಾತುರ್ಯದಿಂದ ಸಾಯುವುದಲ್ಲದೇ ಇನ್ನು ಹಲವಾರು ಕಾರಣಗಳಿಗೆ ಸಾಯುತ್ತವೆ. ಕಾಡುಗಳ್ಳ ವೀರಪ್ಪನ್ ಮರೆಯಾದರೇನಂತೆ ಇಂದಿಗೂ ಅರಣ್ಯಗಳಲ್ಲಿ ಹಲವಾರು ವೀರಪ್ಪನ್ ಗಳು ದಂತಕ್ಕಾಗಿ ಆನೆಯನ್ನು ಭೇಟೆಯಾಡುತ್ತಲೆ ಇದ್ದಾರೆ. ಅಲ್ಲದೇ ಕಾಡುಗಳ ನಾಶದಿಂದ ಆನೆಗಳು ನಾಡಿಗೆ ದಾಳಿ ಇಡುವ ವರದಿಗಳು ಹೆಚ್ಚುತ್ತಲಿವೆ ಕರ್ನಾಟಕದಲ್ಲಿ ಹಾಸನ, ಮಡಿಕೇರಿ, ವೀರಾಜಪೇಟೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತವೆ. ರಾಜ್ಯದಲ್ಲಿ ಬನ್ನೇರುಘಟ್ಟ, ಬಂಡೀಪುರ, ಬಿಳಿಗಿರಿರಂಗಸ್ವಾಮಿ, ಕೊಳ್ಳೆಗಾಲದಲ್ಲಿ ಆನೆಗಳು ಹೆಚ್ಚಿವೆ. ಭದ್ರಾ ಹಾಗೂ ದಾಂಡೇಲಿಯಲ್ಲಿ ಆನೆಗಳ ಸಂತತಿ ತುಂಬಾ ಕಡಿಮೆ ಇದೆ. ಆನೆಗಳು ನಾಡಿಗೆ ದಾಳಿ ಮಾಡುತ್ತದೆ ಎನ್ನುವುದನ್ನೆ ನೆಪ ಮಾಡಿಕೊಂಡ ಹಲವರು ಕಾಡಾನೆಗಳನ್ನು ದಂತಕ್ಕಾಗಿ ಉಪಯೋಗಿಸುತ್ತಿದ್ದಾರೆ.
ಸರ್ಕಾರದ ಹೊಣೆ ಏನು?
ಆನೆಗಳ ಸಂತತಿ ರಕ್ಷಣೆಯ ಕಾರ್ಯವನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.
ಕರ್ನಾಟಕದಲ್ಲಿ ಅರಣ್ಯ ಇಲಾಖೆ ಹಾಕಿರುವ ವಿದ್ಯುತ್ ಬೇಲಿ 12ವೋಲ್ಟನದ್ದಾಗಿದ್ದು ಇದರಿಂದ ಆನೆ ಸಾವು ಸಂಭವಿಸುವುದಿಲ್ಲ ಆದರ ಇಂದು ಇದರ ನಿರ್ವಹಣೆಯ ಕೊರತೆಯೇ ಜಾಸ್ತಿಯಾಗಿ ಕಣ್ಣಿಗೆ ಕಾಣುತ್ತಿದೆ. ಆದರೆ ಗ್ರಾಮಗಳಲ್ಲಿ ತಂತಿ ಬೇಲಿಗೆ ನೇರವಾಗಿ ವಿದ್ಯತ್ ಪ್ರವಹಿಸುತ್ತಾರೆ. ಇದರಲ್ಲಿ 230 ವೋಲ್ಟ್ ವಿದ್ಯುತ್ ಇರುವುದರಿಂದ ಇದನ್ನು ಸರ್ಶ್ಪಿಸುವ ಆನೆಗಳು ಸಾವನಪ್ಪುತ್ತವೆ ಇದನ್ನು ಮೊದಲು ತಡೆಯಬೇಕು.
ವಿದೇಶದಲ್ಲಿ ಈ ಕಾರ್ಯ
*ಆಫ್ರಿಕಾ ಆನೆಗಳ ತವರೂರು. ಇಲ್ಲಿ ಹೆಚ್ಚಾಗಿ ಕಂದಕಗಳನ್ನು ನಿರ್ಮಾಣ ಮಾಡುವ ಉಪಾಯ ಕಂಡುಕೊಂಡಿದ್ದಾರೆ.
 * ಜೇನು ಗೂಡು ಇರುವ ಮರಗಳಿಗೆ ಆನೆಗಳು ದಾಳಿ ಮಾಡುವುದಿಲ್ಲ ಹಾಗಾಗಿ ಕೀನ್ಯಾ ಮತ್ತು ಜಿಂಬಾಬ್ವೆಗಳಲ್ಲಿ ಜೇನುಹುಳು ಸಾಕಾಣಿಕೆ ಮಾಡುವ ಮೂಲಕ ಆನೆಗಳ ದಾಳಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.
* ಹಾಗೆ ಅಲ್ಲಿ ಹಗ್ಗವನ್ನು ಬೇಲಿಗಳಿಗೆ ಕಟ್ಟಿ ಅದಕ್ಕೆ ಮೆಣಸಿನ ಪುಡಿಯನ್ನು ಹಚ್ಚುತ್ತಾರೆ.
* ಹಾಗೆ ಕೆಲವು ಕಡೆ ರೈತರು ತಮ್ಮ ಬೇಲಿಗಳಿಗೆ ಕನ್ನಡಿಯ ಚೂರುಗಳನ್ನು ಹಾಗೆ ‘ಸೀಡಿ'ಗಳನ್ನು ಕಟ್ಟುತ್ತಾರೆ. ಚಂದ್ರನ ಬೆಳಕಲ್ಲಿ ಅದು ಹೊಳೆಯುವುದರಿಂದ ಆನೆಗಳು ದಾಳಿ ಮಾಡುವುದಿಲ್ಲ ಎಂಬ ನಂಬಿಕೆ ಅವರಲ್ಲಿದೆ.
ಎಲ್ಲವೂ ದಂತಕ್ಕಾಗಿ..
 70 ರಿಂದ 80 ಸಾವಿರದಷ್ಟು ಬೆಲೆಬಾಳುವ ಆನೆದಂತಗಳ ಕಳ್ಳಸಾಗಾಣಿಕೆ ಇಂದು ಅವ್ಯಾಹತವಾಗಿದೆ.ಎಲ್ಲರೂ ದಂತ ಸಾಗಿಸುವಾಗ ಸಿಕ್ಕಿ ಬೀಳುತ್ತಾರೆಯೆ ಹೊರತು ಆನೆಯನ್ನು ಸಾಯಿಸುವಾಗ ಸಿಕ್ಕಿ ಬೀಳುವುದಿಲ್ಲ. ಸರಾಸರಿ 20ಕೆ.ಜಿ ತೂಕದ ಆನೆಯ ದಂತ ಹಲಾವರು ಕರಕುಶಲ ವಸ್ತುಗಳ ಉತ್ಪಾದನೆಗಾಗಿ ಬಳಕೆ ಆಗುತ್ತವೆ. ಕೆಲವರಿಗೆ ಆನೆಯ ದಂತಗಳನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿರುವುದರಿಂದ ಹಾಗಾಗಿ ಇಂದು ನಮಗೆ ಆನೆಗಳು ಕಾಣ ಸಿಗುವುದು ಬಾರಿ ಕಡಿಮೆ ಆದರೆ ಆನೆಯ ದಂತಗಳು ಪ್ರತಿನಿತ್ಯ ಸುದ್ದಿಯಾಗುತ್ತವೆ.
ರಕ್ಷಿಸುವ ಹೊಣೆ ಎಲ್ಲರದ್ದಾಗಿರಲಿ..
ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಉಳಿಸಿಕೊಳ್ಳಲು ನಾವು ಹರಸಾಹಸ ಪಡುತ್ತಿದ್ದೆವೆ. ಇಂದು ಆನೆಗಳ ಗತಿ ಅದೇ ದಾರಿಯಲ್ಲಿ ಸಾಗುತ್ತಿದೆ. ಪಾರಂಪರಿಕ ಪ್ರಾಣಿ ಎಂದು ಘೋಷಿಸಿದರೂ ಆನೆಗಳ ಉಳಿವಿಗೆ ಹಾಗೂ ಅದರ ರಕ್ಷಣೆಗೆ ಸರ್ಕಾರ ಯಾವೊಂದು ಕ್ರಮವನ್ನು ಕೈಗೊಳ್ಳದಿರುವುದು ಬೇಸರದ ಸಂಗತಿಯೇ. ರೈಲಿಗೆ ಸಿಲುಕಿ ಸತ್ತದ್ದಕಾಗಿಯೇ ಏನೂ ಸಚಿವ ಜೈರಾಂ ರಮೇಶ್ ಆನೆಗಳ ರಾಷ್ಟ್ರೀಯ ಸಂರಕ್ಷಣಾ ಪ್ರಾಧಿಕಾರ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗೆ ರೈಲ್ವೆ ಸಚಿವೆ ಕೆಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಗಳ ಜೊತೆ ಮುಂದಿನವಾರ ಮಾತನಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರೂ ಅವರ ಮಾತುಕತೆಗಳು ಹಾಗೂ ಇನ್ಯಾವುದೋ ಅಧಿವೇಶನಗಳು ಆನೆಗಳ ಜೀವವನ್ನು ಕಾಪಾಡುವುದಿಲ್ಲ ಹಾಗಾಗಿ ಆನೆಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ. ಪ್ರಾಧಿಕಾರ ಸ್ಥಾಪನೆ ಮಾಡುವ ಭರವಸೆ ನೀಡಿ ನಂತರ ಜಾರಿಕೊಳ್ಳುವ ಬದಲು ಇಂತಹ ಹೇಳಿಕೆಗಳು ನೀಡದೇ ಇರುವಂತಹ ಸೌಜನ್ಯವನ್ನು ರಾಜಕಾರಣಿಗಳು ಬೆಳೆಸಿಕೊಳ್ಳಲಿ.

ಹೊಸದಿಗಂತ ಪತ್ರಿಕೆಯ ವಿಶೇಷ ಪುಟದಲ್ಲಿ ಸೆಪ್ಟಂಬರ್ 26 ರಂದು ಪ್ರಕಟವಾದ ಬರಹ

Sunday, September 19, 2010

ನಾಲ್ಕು ಚಿತ್ರ, ನೂರಾರು ಚರ್ಚೆಗಳು...

ತನ್ನ ರಾಜ್ಯಕ್ಕೆ ಇರುವ ಸಮಸ್ಯೆಗಳನ್ನೇ ಚಿತ್ರ ಮಾಡಲು ಆಸಕ್ತಿ ತೋರಿಸಿ, ಅದನ್ನು ಸರ್ಕಾರದ ಮನಗಾಣಿಸುವುದರಿಂದಲೇ ದೇಶದ ಹೆಸರಾಂತ ನಿರ್ದೇಶಕರಿಗಿಂತ  ಶೆಟ್‌ಗಾಂವಕರ್ಎಂಬ ಯುವಕ  ಆಪ್ತವಾಗುತ್ತಾನೆ.
ಮುರಿದು ಹೋದ ಬದುಕು....

"ಪಾಲ್ತಡಾಚೋ ಮುನಿಸ್‌". ಗೋವಾದ ಯುವ ನಿರ್ದೇಶಕ ಲಕ್ಷ್ಮೀಕಾಂತ್‌ ಶೆಟ್‌ಗಾಂವಕರ್ ಚಿತ್ರ. 2002ರಲ್ಲಿ ಚಿತ್ರರಂಗಕ್ಕೆ ಬಂದರೂ  ಇಲ್ಲಿಯವರೆಗೂ ಆತ ಮಾಡಿದ್ದು ನಾಲ್ಕೇ ಚಿತ್ರ.ಆದರೆ ಯಾವ ಚಿತ್ರವೂ ತೆಗೆದು ಹಾಕುವಂತಿಲ್ಲ. ಕಮರ್ಶಿಯಲ್‌ ಮಸಾಲಾ ಮಿಶ್ರಣಗಳಿಂದ ದೂರವುಳಿದಿರುವ  ಈತನ ಚಿತ್ರಗಳು ಆಪ್ತವಾಗುತ್ತವೆ.
ಬಯಾಗ್ರಫಿ...
ಗೋವಾದ ಸಾಲ್ಸೆಟ್‌ನ ಕನ್‌ಕೊಲಿಮ್‌ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಶೆಟ್‌ಗಾಂವಕರ್‌ಗೆ  ಸಿನಿಮಾ ಮಾಧ್ಯಮದ ಮೇಲೆ ವಿಪರೀತ ಆಸಕ್ತಿ. ಹಾಗಾಗಿಯೇ  ಗೋವಾದ ಕಲಾ ಅಕಾಡೆಮಿಯಲ್ಲಿ ಥಿಯೇಟರ್ ಆಟ್ì  ಕುರಿತಂತೆ ಪದವಿ ಪೂರೈಸಿ, ನಂತರ ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ ನಟ ಹಾಗೂ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾನೆ. ಅಷ್ಟರಲ್ಲಾಗಲೇ ಸಮಾಜದಲ್ಲಿರುವ ಸಮಕಾಲೀನ ಸಮಸ್ಯೆಗಳಿಗೆ ಸಿನಿಮಾ ಮಾಧ್ಯಮದ ಮೂಲಕ ಉತ್ತರಿಸಬೇಕು ಎಂದು ಬಹುಕಾಲದಿಂದ ಕಾಡುತ್ತಿದ್ದ ಕನಸು ನನಸಾಗಲು ಮಹೂರ್ತ ಕೂಡಿ ಬರುತ್ತದೆ. ಇದೇ ಕಾರಣಕ್ಕೆ  ಮುಂಬೈಗೆ ಜಿಗಿಯುತ್ತಾರೆ. ಅಲ್ಲಿ ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕ, ಚಿತ್ರಕಥೆ ಬರೆಯುವವರಾಗಿ ಪಡೆದ ಅನುಭವಕ್ಕೆ ಅವರು ಈಗಲೂ ಕೃತಜ್ಞತೆ ಸಲ್ಲಿಸುತ್ತಾರೆ.
ನಾಲ್ಕು ವರ್ಷದ ಅನುಭವದ ಮೊದಲ ಚಿತ್ರ..
ಈ ದಿಸೆಯಲ್ಲಿ ತನ್ನ ಸ್ವಂತ ಊರು ಗೋವಾಕ್ಕೆ ಆಗಮಿಸಿದ ಲಕ್ಷ್ಮೀಕಾಂತ್‌ ಅಲ್ಲಿ ತನ್ನದೇ ಮನಸ್ಥಿತಿಯುಳ್ಳ  ಸ್ನೇಹಿತರನ್ನು ಸೇರಿಸಿಕೊಂಡು "ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಆಫ್‌ ಗೋವಾ" ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಗೋವಾದಲ್ಲಿ ಸಿನಿಮಾ ಕ್ರಾಂತಿಯನ್ನೇ ಎಬ್ಬಿಸಿತು. ತನ್ನ ಸುತ್ತಮುತ್ತಲ ಘಟನೆಗಳನ್ನು ತನ್ನ ಕಲ್ಪನೆಯ ಮೂಲಕ ದೃಶ್ಯ ಸಂಯೋಜಿಸಿ "ಸೀ ಸೈಡ್‌ ಸ್ಟೋರಿ" ಚಿತ್ರ ಮಾಡಿದರು. ಈ ಚಿತ್ರ ಮುಂಬೈ ಇಂಟರ್ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಉತ್ತಮ ಕಲ್ಪನಾತ್ಮಕ ಚಿತ್ರೆವೆಂದು ಪ್ರಶಸ್ತಿ ಗಳಿಸಿತು. ಕೇವಲ 45 ನಿಮಿಷದ ಚಿತ್ರವಾಗಿದ್ದ  ಇದು  ಅಲ್ಲಿನ ಜನರ ಮನಸೂರೆಗೊಂಡಿತು. ಗೋವಾದಲ್ಲಿ ಈ ಚಿತ್ರದಿಂದ ಶೆಟ್‌ಗಾಂವಕರ್ ಜನಮನ್ನಣೆಗೆ ಪಾತ್ರರಾದರು.

ವೇಶ್ಯಾವಾಟಿಕೆ ಬಗ್ಗೆ , ಸಮಾಜದಲ್ಲಿ ಈ ಕತ್ತಲವೃತ್ತಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ  ಕಥೆ ಹೊಂದಿದ್ದ  Let's talk about it..ಚಿತ್ರವನ್ನು ಗೋವಾದ ಕಾಲೇಜುಗಳಲ್ಲಿ, ಪಂಚಾಯತ್‌ಗಳಲ್ಲಿ, ಹಾಗೇ ಸರ್ಕಾರಿ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ  ಪ್ರದರ್ಶನ ಮಾಡಲಾಯಿತು.
ಅಂತಾರಾಷ್ಟ್ರೀಯ ಭಾರತೀಯ ಚಿತ್ರೋತ್ಸವ 2004ರಿಂದ ಗೋವಾದಲ್ಲಿ ಪ್ರತೀ ವರ್ಷ ನಡೆಸಬೇಕೆಂದು  ಅಲ್ಲಿನ ಸರ್ಕಾರ ತೀರ್ಮಾನಿಸಿದಾಗ  ಗೋವಾದಲ್ಲಿ ಮೊದಲ ಬಾರಿಗೆ ಚಲನಚಿತ್ರಗಳ ಬಗ್ಗೆ ಚರ್ಚೆ ಆರಂಭವಾಯಿತು. ಕೊಂಕಣಿ ಚಿತ್ರಗಳ ಸಣ್ಣ ಮಾರುಕಟ್ಟೆಯಿಂದ ಶೆಟ್‌ಗಾಂವಕರ್ 2004ರಲ್ಲೇ ಮಾಡಿದ್ದ ಚಿತ್ರವನ್ನು ಬಿಡುಗಡೆ ಮಾಡಲಾಗಲಿಲ್ಲ.
ಎಷ್ಟೋ ಬಾರಿ ಶೆಟ್‌ಗಾಂವಕರ್ ಚಿತ್ರಕಥೆಗಳು ಸರ್ಕಾರದ ಮನಗೆಲ್ಲಲು ವಿಫಲವಾಯಿತು.ಕಷ್ಟಪಟ್ಟಿದ್ದಕ್ಕೆ ಬೆಲೆ ಇದೆ ಎನ್ನುವಂತೆ 2009 ರಲ್ಲಿ ನಿರ್ದೇಶಿಸಿದ ಪಾಲ್ತಡಾಚೋ ಮಾನಿಸ್‌ ಇಡಿ ಜಗತ್ತಿನ ಗಮನ ಸೆಳೆದಿದೆ. ಈ ಚಿತ್ರಕ್ಕೆ 2009ರ ಟೋರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ FIPRESCI ಪ್ರಶಸ್ತಿ ಗಳಿಸಿತು. ಕೊಂಕಣಿ ಭಾಷೆಯ ಚಿತ್ರಗಳು ಪ್ರದರ್ಶನಗೊಳ್ಳುವುದೆ ಸಾಧನೆ ಅನ್ನುವಂತಿದ್ದ ಕಾಲದಲ್ಲಿ ಶೆಟ್‌ಗಾಂವಕರ್ ಚಿತ್ರ ಪ್ರಶಸ್ತಿ ಸಹ ಗಳಿಸಿತ್ತು. ನಂತರ ಹಾಂಗ್‌ಕಾಂಗ್‌,ಕೈರೋ, ಮುಂಬೈ ಮುಂತಾದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರದಿಂದ ಗೋವಾದಲ್ಲಿ ಸಿನಿಮಾ ಕುರಿತಾದ ಹೊಸ ಚಳುವಳಿಯೆ ಆರಂಭವಾಯಿತು. ಸಿನಿಮಾಗಳ ಬಗ್ಗೆ ಗೋವಾದ ಜನತೆ ಆಸಕ್ತಿ ಹಚ್ಚಿಸಿದ ಹಾಗೂ ಆ ಕ್ಷೇತ್ರದಲ್ಲಿನ ಆತನ ಸಾಧನೆಗೆ 2009ರ ಅಕ್ಟೋಬರ್ 2 ರಂದು ಗೋವಾ ಸರ್ಕಾರ ಆತನಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಪಾಲ್ತಡಾಚೋ ಚಿತ್ರ 2009ರ ಇಂಡಿಯನ್‌ ಪನೋರಮಾದಲ್ಲಿ ಮೊದಲ ಚಿತ್ರವಾಗಿ ಪ್ರದರ್ಶಿತವಾಯಿತು. ಇದರಿಂದ ಭಾರತದಲ್ಲಿ ಹೊಸ ಸಿನಿಮಾ ಕಲ್ಚರ್ ಬೆಳವಣಿಗೆಗೊಂಡಿತು.
ಪಾಲ್ತಡಾಚೋ ಮಾನಿಸ್‌ನಲ್ಲಿ  ಅಂಥದ್ದೇನಿದೆ...
ಗೋವಾ ಮತ್ತು  ಕರ್ನಾಟಕದ ಗಡಿ ಭಾಗದ ಪಶ್ಚಿಮಘಟ್ಟದ ಸುಂದರ ಪರಿಸರದಲ್ಲಿ  ಚಿತ್ರಿತವಾದ ಈ ಚಿತ್ರ, ಸಭ್ಯ ರೋಮ್ಯಾನ್ಸ್ ನ ಕಲಾತ್ಮಕ ಸಿನಿಮಾ. ಚಿತ್ರದ ನಾಯಕ ವಿನಾಯಕ್‌ ಫಾರೆಸ್ಟ್ ಗಾರ್ಡ್‌ ಪಶ್ಚಿಮ ಘಟ್ಟದ ಕಾಡುಗಳನ್ನು ನೋಡಿಕೊಳ್ಳುತ್ತಾ ಒಬ್ಬಂಟಿಯಾಗಿ ಬರಡು ಜೀವನ ಬಾಳುತ್ತಿದ್ದಾನೆ. ಆ ಕಾಡಿಗೆ ಸಾಗುವಾನಿ ಮರದ ಕೆಲಸಕ್ಕಾಗಿ ಬರುವ ಕೆಲಸಗಾರರೊಂದಿಗೆ ಮಾತ್ರ ಆತನ ಮಾತುಕತೆ... ಜನರ ಒಡನಾಟವೇ ಆತನಿಗಿಲ್ಲ. ಆ ದಟ್ಟ  ಆ ಕಾಡಿನಲ್ಲಿ ಆತನಿಗೆ ನೆನಪುಗಳೆಂದು ಉಳಿದುಕೊಂಡಿರುವುದು  ಸತ್ತ ತನ್ನ ಹೆಂಡತಿಯ ಬಗ್ಗೆ ಮಾತ್ರ.ಆ ನೆನಪೇ ಆತನನ್ನು ಇನ್ನೂ ಬದುಕಿಸಿದೆ.
ಆತ ಉಳಿದುಕೊಂಡಿರುವ ಮನೆಯಲ್ಲಿ ಅಕ್ಕ ಪಕ್ಕ ಮಾನಸಿಕ ಹತೋಟಿ ಕಳೆದುಕೊಂಡ ಹುಡುಗಿ. ಮನುಷ್ಯರ ಸಂಪರ್ಕವೇ ಇಲ್ಲದ ಆತನಿಗೆ ಅವಳ ಸಂಪರ್ಕ ಸಹ್ಯವಾಗುತ್ತದೆ. ತನ್ನ ಊಟದಲ್ಲಿ ಅವಳಿಗೂ ಅರ್ಧ ನೀಡುತ್ತಾನೆ. ಒಂಚೂರು..ಒಂಚೂರು ಎಂಬಷ್ಟು ಆಪ್ತರಾಗುವ ವೇಳೆಗೆ ಅಲ್ಲಿಯೇ ಪಕ್ಕದ ಊರಿನಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಗುಸು ಗುಸು ಆರಂಭವಾಗಿರುತ್ತದೆ. ಆದರೆ ವಿನಾಯಕ್‌ ಅದಕ್ಕೆ ಗಮನ ನೀಡುವುದಿಲ್ಲ ಇವರ ಸಂಬಂಧ ಆಕೆ ಗರ್ಭೀಣಿಯಾಗುವಲ್ಲಿಗೆ ತಲುಪುತ್ತದೆ. ಮುಂದೆ ಜನ ಆತನನ್ನು ಕಾಣುವ ಪರಿ ಇವೆಲ್ಲವನ್ನು ಶೆಟ್‌ಗಾಂವಕರ್ ಸುಂದರ ಚಿತ್ರವಾಗಿಸಿದ್ದಾರೆ.
ಈ ಚಿತ್ರದಲ್ಲಿ ಒಂದು ಹಗ್ಗದ ಸೇತುವೆಯ ದೃಶ್ಯ ಇದೆ. ಈ ನಾಜೂಕು ಸೇತುವೆಯೇ ಆ ದಟ್ಟ ಕಾಡಿಗೂ ಸೋ ಕಾಲ್ಡ್ ನಾಗರೀಕತೆ ಇರುವ ಜನಾಂಗಕ್ಕೂ ಇರುವ ಏಕೈಕ ಕೊಂಡಿ. ಈ ಚಿತ್ರದ ಚಿತ್ರಕಥೆಗಾಗಿ ಬ್ರಿಟಿಷ್‌ ಕೌನ್ಸಿಲ್‌ ಪ್ರಶಸ್ತಿ ನೀಡಿದೆ.
ಇಲ್ಲಿಯವರೆಗೂ ಮಾಡಿದ್ದು ನಾಲ್ಕು ಚಿತ್ರಗಳು..ಗೋವಾದಲ್ಲಿ ಚಿತ್ರ ಮಾಡಿದರೆ ಅಲ್ಲಿ ಚಿತ್ರಮಂದಿರದ್ದೇ ಸಮಸ್ಯೆ ಆದರೆ ಶೆಟ್‌ಗಾಂವಕರ್ ತಮ್ಮ ಚಿತ್ರವನ್ನು ಹಳ್ಳಿ ಮಂದಿಗೆ ವೀಡಿಯೋ ಪ್ರೊಜೆಕ್ಷನ್‌ ಮೂಲಕ ತೋರಿಸುತ್ತಾರೆ. ಪ್ರತಿ ಹಳ್ಳಿಗಳಲ್ಲೂ ತನ್ನ ಚಿತ್ರಗಳ ಬಗ್ಗೆ ಮಾತನಾಡುವಂತಾಗಬೇಕು, ಹಾಗೇ ಸಿನಿಮಾಗಳ ಬಗ್ಗೆ ಅವರಲ್ಲೂ ಕನಸುಗಳು ಮೂಡಬೇಕು ಎಂದು ಶೆಟ್‌ಗಾಂವಕರ್ ಹೇಳುತ್ತಾರೆ.
ಆತ ಮಾಡಿದ್ದು ನಾಲ್ಕೇ ಚಿತ್ರ ಅದರೆ ಅತನ ಚಿತ್ರಗಳ ಬಗ್ಗೆ ಗೋವಾದಲ್ಲಿ ದಿನವೂ ನೂರಾರು ಚರ್ಚೆಗಳು ನಡೆಯುತ್ತವೆ. ಒಂದು ಭಾಷೆ ಬೆಳೆಯುವಲ್ಲಿ ಸಿನಿಮಾ ಮಾಧ್ಯಮದ ಬೆಳವಣಿಗೆ ಅಷ್ಟೇ ಪ್ರಮುಖವಾದದ್ದು,ತನ್ನ ರಾಜ್ಯಕ್ಕೆ ಇರುವ ಸಮಸ್ಯೆಗಳನ್ನೇ ಚಿತ್ರ ಮಾಡಲು ಆಸಕ್ತಿ ತೋರಿಸಿ, ಅದನ್ನು ಸರ್ಕಾರದ ಮನಗಾಣಿಸುವುದರಿಂದಲೇ ದೇಶದ ಹೆಸರಾಂತ ನಿರ್ದೇಶಕರಿಗಿಂತ  ಶೆಟ್‌ಗಾಂವಕರ್ಎಂಬ ಯುವಕ  ಆಪ್ತವಾಗುತ್ತಾನೆ.

ಹೊಸ ದಿಗಂತ ಪತ್ರಿಕೆಯಲ್ಲಿ ಸೆಪ್ಟಂಬರ್ 19 ರಂದು ಬರೆದ ಬರಹ

Sunday, September 5, 2010

ಗಾಂದಿ ನಗಗರದ ಸಿದ್ಧ ಸೂತ್ರಗಳಿಗೆ ಸೆಡ್ಡು ಹೊಡೆದ ಚಿತ್ರ..

ತುಂಬಾ ದಿನಗಳ ನಂತರ ನೋಡುವಂತ ಒಂದು ಚಿತ್ರ ಬಂದಿದೆ ಕೊಟ್ಟ ಕಾಸಿಗಂತೂ ಮೋಸವಿಲ್ಲ


ಯೋಗರಾಜ್ ಭಟ್ ರಿಗೆ ಸಿನಿಮಾ ಬಗ್ಗೆ ಪ್ರೀತಿ ಇದೆ ಏನಾದರೂ ವಿಭಿನ್ನ ವಾದುದನ್ನು ಚಿತ್ರರಂಗಕ್ಕೆ ನೀಡಬೇಕು ಎನ್ನುವ ಹಂಬಲವೇ ಪಂಚರಂಗಿ ಎಂಬ ಸಿನಿಮಾ ಆಗಿದೆ..
ಮುಂಗಾರು ಮಳೆ ಮೂಲಕ "ಮಳೆ" ಎಂಬ ಫಾರ್ಮುಲಾ ಕೊಟ್ಟ ಬಟ್ಟರು ಪಂಚರಂಗಿ ಮೂಲಕ " ಮಾತುಗಾರಿಕೆ"ಯ ಫಾರ್ಮುಲಾ ಬಳಸಿದ್ದಾರೆ..ಆಫ್ ಕೋರ್ಸ ಅದು ಇಲ್ಲಿ ಯಶಸ್ವೀಯಾಗಿದೆ...ಇನ್ನು ಉಳಿದ ನಿದೇಶಕರಿಗೆ ಫಾರ್ಮುಲಾ ಹಳತು ಮಾಡುವ ಕೆಲಸ.
ಇಲ್ಲಿ, ಸುಂದರ ಪರಿಸರಗಳು, ಮನಸ್ಸಿಗೆ ಮುದ ನೀಡುವ ಹಾಸ್ಯಗಳು,ಭರಪೂರಿತ ಸಾಂಗುಗಳು, ಯಡವಟ್ಟು ಹೀರೋಗಳು, ಆಕೆಗೊಬ್ಬ ಹೀರೋಯಿನ್ಗಳು...ಎಲ್ಲವೂ ಗಳುಗಳು..ಎಲ್ಲವೂ ನಿರ್ಜಿವ ನಾಯಕಿ " ನಿನ್ಯಾಕೆ ಎಲ್ಲರಿಗೂ ಗಳು ಎಂದು ಸೇರಿಸುತ್ತೀಯ" ಎಂದು ಕೇಳಿದ ಪ್ರಶ್ನೇಗೆ ಕೊನೆಯಲ್ಲಿ ಸಮುದ್ರ ದಂಡೆಯಲ್ಲಿ ನಾಯಕ ನೀಡುವ ಉತ್ತರ ಮನಸ್ಸಿಗೆ ಕಾಡುತ್ತದೆ..
ಇಲ್ಲಿ ಹಾಸ್ಯ ಇದೆ ಹಾಗೆ ಬದುಕಿನ ಸುಂದರ ವಿಡಂಬನೆ ಇದೆ..ಹುಡುಗರ ಪರಿತಾಪಗಳಿವೆ..ಬದುಕಿನ ಬಗ್ಗೆ ಆಸಕ್ತಿ ಇಲ್ಲದೆ ಎಲ್ಲರನ್ನು ಬಯ್ಯುವ ನಾಯಕನ ಬಗ್ಗೆ ಭಟ್ಟರು ಎರಡುವರ ತಾಸಿನಲ್ಲಿ ಎಲ್ಲವೂ ಬಿಟ್ಟಿಡುತ್ತಾರೆ. ನಾಯಕನಿಗೆ ಜಗತ್ತು ಒಂದು ಗುಜರಿ ಅಂಗಡಿ ಇಂತಹ ನಾಯಕನಿಗೆ ಜೊತೆಯಾಗುವವಳು ಅಂಬು

ಕಥೆಗಳು.
ನಾಯಕ ಭರತ್(ದಿಗಂತ್) ಬೊಂಬೆಗಳಿಗೆ ಸೀರೆ ಉಡಿಸುವ ಹಾಗೆ ಕನ್ನಡ ಎಂ.ಎ ಮಾಡುತ್ತಿರುವ ಬೀರುಬೀಸನೇ ಹುಡುಗ..ಅಪ್ಪ..ಅಮ್ಮ,ಅಣ್ಣ, ತನ್ನ ಜ್ಯೊತಿಷಿ ಮಾವ, ನಾಯಿ ಹಾಗೆ ಬಸ್ ಚಾಲಕ ಹಾಗೂ ಆತನ ಕುರುಡು ತಂದೆ ಎಲ್ಲರೂ ಇಬ್ಬರು ಹೆಣ್ಮಕ್ಕಳಿರುವ ಸಮುದ್ರ ಕಿನಾರೆಯಲ್ಲಿರುವ ಮನೆಗೆ ಹೆಣ್ಣು ನೋಡಲು ಬರುತ್ತಾರೆ..ಭರತ್ ನಿಗೆ ನಿದ್ರಾರೋಗದ ಕಾಯಿಲೆ
ಪಕ್ಕದಲ್ಲಿ ಬಾಂಬ್ ಬಿದ್ದರೂ ಆತನಿಗೆ ಅರಿವಾಗುವುದಿಲ್ಲವಂತೆ..ಇನ್ನೊಬ್ಬಳನ್ನು ಪ್ರೀತಿಸುತ್ತಿದ್ದರೂ ಅಪ್ಪ&ಅಮ್ಮನಿಗೆ ತಿಳಿಸದೆ ಅವರ ಒತ್ತಾಯಕ್ಕೆ ಹೆಣ್ನು(ಲತಾ) ನೋಡುವ ಲಕ್ಕಿ..ಎಲ್ಲವೂ ಸಾಂಗ ಎನ್ನುವಾಗ ಲಕ್ಕಿಯ ಮನದನ್ನೆಯ ಎಂಟ್ರಿ... ಇವಿಷ್ಟರ ನಡುವೆ ನಡೆಯುವ ನಾಯಕ (ಭರತ್) ನಾಯಕಿ( ಅಂಬಿಕಾ) ನಡುವೆ ನಡೆಯುವ ಪ್ರೀತಿ ಎಲ್ಲವೂ ಬೊಂಬಾಟ್.. ಸಮುದ್ರ ದಂಡೆಯ ಮೇಲೆ ತನ್ನ ನಾಯಕಿ ನಿಧಿ ಸುಬ್ಬಯ್ಯ ಪ್ರೇಮ ನಿವೇದನೆ ಮಾಡುವಾಗ ಥೇಟರ್ ನಲ್ಲಿ ಕೂತ ಹುಡುಗರಿಗೆ ತಮ್ಮ ಗೆಳತಿಯ ನೆನಪಾಗುವುದರಲ್ಲಿ ಮಾತೇ ಇಲ್ಲ. ಚಿತ್ರದ ಮೊದಲಾಧ ಮೊದಮೊದಲು ಬೋರ್ ಅನಿಸಿದರೂ ಅದು ನಮ್ಮ ಅರಿವಿಗೆ ಬರುವಷ್ಠರಲ್ಲಿ ಕಥೆ ಹಿಡಿತ ಪಡೆದುಕೊಳ್ಳುತ್ತದೆ. ಒಂದು ಸಿಂಪಲ್ ಸ್ಟೋರಿಗೆ ಭಟ್ಟರು ಸುಣ್ಣ ಬಣ್ಣ ಬಳಿದಿದ್ದಾರೆ..ಆದರೆ ಅದು ನಮಗೆ ಆಪ್ತವಾಗುತ್ತದೆ. ಇಲ್ಲಿಯವರೆಗಿನ ಎಲ್ಲಾ ಚಿತ್ರಗಳಲ್ಲಿ ಮನೆಗಳನ್ನು ಒಂದುಗೂಡಿಸಿ ಪ್ರೇಮಿಗಳನ್ನು ದೂರ ಮಾಡುವ ಪರಿಪಾಠ ಬೆಳೆಸಿದ್ದ ಅವರು ಬದಲಾಗಿದ್ದಾರೆ.
ಅನಂತನಾಗ್ ಎರಡೇ ಸೀನ್ ಗಳಲ್ಲಿ ಕಾಣುತ್ತಾರಾದರೂ ತುಂಬಾ ಸುಂದರವಾಗಿ ಪಾತ್ರ ನಿಭಾಯಿಸಿದ್ದಾರೆ ಕೊನೆಗೆ ಲಕ್ಕಿ ಮನದನ್ನೆ ಬಂದ ನಂತರ ಆಗುವ ಅವಾಂತರಗಳೆನು? ಲತಾ ಲಕ್ಕಿ ಮದುವೆ ಆಗುತ್ತದೆಯೆ? ನಾಯಕ,ನಾಯಕಿ ಏನಾಗುತ್ತರೆ ಇವೆಲ್ಲ ನೋಡಲು ಚಿತ್ರಮಂದಿರ ನಿಮಗಾಗಿ ಕಾಯುತ್ತಿದೆ.ಮನೋಮುರ್ತಿ ಸಂಗೀತದಲ್ಲಿ ಮೂಡಿಬಂದ ಹೆಚ್ಚಿನ ಹಾಡುಗಳು ಸುಂದರ..ಬಲು ಸುಂದರ..ಲೈಫು ಇಷ್ಟೇನೆ..ಗೀತೆಯಲ್ಲಿ ಸಂಗೀತಕ್ಕಿಂತ ಭಟ್ಟರ ಪದಗಳು ಆಪ್ತವಾಗುತ್ತದೆ." ಉಡಿಸುವೇ ಬೆಳಕಿನ ಸೀರೆಯ", "ಹುಡುಗರು ಬೇಕು..." " ಪಂಚರಂಗಿ ಹಾಡುಗಳು" ಎಲ್ಲವೂ ಮುದ ನೀಡುತ್ತದೆ. ಒಂದೇ ಬಾರಿಗೆ ಹೇಳುವುದಾದರೆ ಸಂಭಾಷಣೆ ಚಿತ್ರದ ಹೀರೂ..ಹಿರೋಯಿನ್ ಎಲ್ಲಾ. ವಿ.ತ್ಯಾಗರಾಜನ್ ಕ್ಯಾಮರಾ ಕೆಲಸ ಸುಂದರವಾಗಿದೆ..ಸುಮುದ್ರದಾಚೆ ಬಾಗಿದ ತೆಂಗಿನ ಮರದ ಮೇಲೆ ಕುಳಿತ ನಾಯಕ ,ನಾಯಕಿಯನ್ನು ತೋರಿಸುವಾಗ ಅವರ ಶ್ರಮಕ್ಕೆ ಭೇಷ್ ಎನ್ನಲೇಬೆಕು. ಉಡಿಸುವೆ ಬೆಳಕಿನ ಸೀರೆಯ ನ್ರತ್ಯ ಸಂಯೋಜನೆ ಹಾಗೂ ಕಲಾ ನಿರ್ದೇಶನ ಶಶಿಧರ ಅಡಪ ಶ್ರಮಕಾಣುತ್ತದೆ.
ಭಟ್ಟರ ಅಶರೀರವಾಣಿ...ಹಾಗೆ ಅವರ ಪದಗಳು..ಶಾಲಿವಾಹನ ಶಕೆ ಮನೆಗಳು..ಹೆಂಗಳೆಯರು..ಹೆಂಗಸುಗಳು..ಕೆಮ್ಮಿದರೆ ಬೀಳುವ ಮನೆಗಳು..ಕೆಂಪು ಹೆಂಚು ಗಳು..ಸಮುದ್ರಕ್ಕೆ ಬಾಗಿರುವ ಮನೆಗಳು...ಮುದ್ದು ಜಡೆಗಳು...ಒದ್ದೆ ಕೊಡೆಗಳು ಎಲ್ಲವೂ ಆಪ್ತವಾಗುತ್ತದೆ. ಜಯಂತ್ ಕಾಯ್ಕಿಣಿ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಒಟ್ಟಾರೆ ಚಿತ್ರ ಕಾಡುವುದಂತೂ ಸುಳ್ಳಲ್ಲ. ಕೊನೆಯಲ್ಲಿ ನಾಯಕನ ಸಂದಿಗ್ಧತೆಯನ್ನು ಉತ್ತಮವಾಗಿ ನಿರೂಪಿಸಿದ್ದಾರೆ.

ನೀನು ನಮ್ಮವನಲ್ಲ... ನಿನ್ನ ಗೆಲುವು ಮಾತ್ರವೇ ನಮ್ಮದು !

ಹಣ, ವರ್ಚಸ್ಸು, ರಾಜಕೀಯ ಪ್ರಭಾವ ಇಷ್ಟು ಇದ್ದ ಮಾತ್ರಕ್ಕೆ ಡಾಕ್ಟರ್‌ಗಳೆನ್ನಿಸಿಕೊಳ್ಳುತ್ತಿರುವ ರಾಜಕಾರಣಿಗಳ ಪಟಾಲಂನ ನಡುವೆ ನಿಜಕ್ಕೂ ಅರ್ಹತೆಯಿರುವ ಶ್ರಮಿಕ, ಪ್ರತಿಭಾನ್ವಿತ ವ್ಯಕ್ತಿಗಳು ತೆರೆಯ ಹಿಂದೆಯೇ ಉಳಿಯುತ್ತಿದ್ದಾರೆ. ಯಾವುದೋ ವಿದೇಶೀ ವಿಶ್ವವಿದ್ಯಾಲಯ ಈ ಅಪ್ಪಟ ಪ್ರತಿಭೆಗಳನ್ನೇ  ಬೊಟ್ಟು ಮಾಡಿ ಡಾಕ್ಟರೇಟ್‌ ನೀಡಿದಾಗ, ಪ್ರತಿಭೆಗಳನ್ನು ಗುರುತಿಸಲಾಗದೇ ಕೈಕಟ್ಟಿ ಕೂತು,ಯಾರದೋ ವಶೀಲಿಯ ಕಡತ ತಿದ್ದುತ್ತಿರುವ  ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿಗಳಿಗೆ  ಮಂಗಳಾರತಿ ಆಗಬಹುದು; ವಿಶ್ವನಾಥನ್‌ ಆನಂದ್‌ ಗೆ ಡಾಕ್ಟರೇಟ್‌ ಸಿಕ್ಕಬಹುದು !


ವಿಶ್ವ ಚೆಸ್‌ ರಂಗದಲ್ಲಿ ಆತನದ್ದು ಧೀಮಂತ ಹೆಸರು.. ತನ್ನೀಡಿ ಬಾಳ್ವೆಯನ್ನು ಚೆಸ್‌ಗಾಗಿಯೆ ಮೀಸಲಿಟ್ಟ. ಭಾರತದ ಒಂದು ಆಟಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟವನಿಗೆ ಡಾಕ್ಟರೇಟ್‌ ಕೊಡಬೇಕು ಎಂದು ಒಂದು ವಿ.ವಿ ನಿರ್ಧರಿಸಿದ್ದು  ತಪ್ಪಾ?
ವಿಶ್ವ ನಾಥನ್‌ ಆನಂದ್‌, ಮೂರು ಬಾರಿ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಗೆದ್ದು ಭಾರತದ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ  ಶ್ರೇಷ್ಟ ಕ್ರೀಡಾಪಟು. ಸ್ಪೇನ್‌ ದೇಶದಲ್ಲಿ ನೆಲೆಸುವ ಆತ  ಭಾರತದ ಪ್ರಜೆಯೇ ಅಲ್ಲ ಎಂದು ಅನುಮಾನಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಆರ್‌.ಡಿ.ಸಹಾಯ್‌ ನಂತವರಿಗೆ  ಏನೆನ್ನಬೇಕು ಗೊತ್ತಾಗುತ್ತಿಲ್ಲ!
ಡಿಸೆಂಬರ್‌ 11,1969 ರಂದು ಚೆನೈನಲ್ಲಿ ಜನಿಸಿದ ಆನಂದ್‌ಗೆ ಮೊದಲಿನಿಂದಲೂ ಚೆಸ್‌ ಎಂದರೇ ಜೀವ. ಆನಂದ್‌ ಹೇಳುತ್ತಾರೆ,‘ ನಾನು ಚೆಸ್‌ ಪಂದ್ಯಗಳನ್ನು ಆಡುವಾಗ  ನಾನು ಇಡೀ ದೇಶದ ಪ್ರತಿನಿಧಿಯಾಗಿರುತ್ತೇನೆ. ನನ್ನ ಸೋಲು, ಗೆಲುವು ಎಲ್ಲಾ ಈ ರಾಷ್ಟ್ರಕ್ಕೆ ಮೀಸಲಾಗಿರುತ್ತದೆ. ಆದ್ದರಿಂದ ಪ್ರತಿ ಪಂದ್ಯ ಆಡುವಾಗಲೂ ನಾನು ನನ್ನ  ದೇಶದ ಗೆಲುವನ್ನೇ ಬಯಸುತ್ತೇನೆ ...’ ಈ ಮಾತುಗಳಿಗೆ ಕನಿಷ್ಠ ಗೌರವವನ್ನು ಕೊಡುವ ಸೌಜನ್ಯವೂ ನಮ್ಮವರಿಗಿಲ್ಲವಲ್ಲಾ... ಇಂತಹ ಅಪ್ಪಟ ದೇಶಪ್ರೇಮಿ ಕ್ರೀಡಾಪಟುವಿಗೆ  ಸರ್ಕಾರ  ಆತನ ಪೌರತ್ವದ ಬಗ್ಗೆ ಗುಮಾನಿ ವ್ಯಕ್ತಪಡಿಸಿ ನೀನು ನಮ್ಮವನೇ ಅಲ್ಲ ಎಂದುಬಿಡುತ್ತದಲ್ಲಾ... ಓಲಿಂಪಿಕ್‌ ಮೊದಲಾದ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತೀಯ ಸ್ಪರ್ಧಾಳುಗಳ ಹಿನ್ನೆಡೆಯಾಗುತ್ತಿರುವುದಕ್ಕೆ ಕಾರಣ ಇಲ್ಲಿಯೇ ಇದೆ ಅನಿಸುತ್ತದೆ.
ಮೊನ್ನೆ ಮಂಗಳವಾರ ಹೈದರಾಬಾದ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್‌ ಕಾಂಗ್ರೆಸ್‌ ಆಫ್‌ ಮ್ಯಾಥಾಮೆಟಿಕ್ಸ್ ನಲ್ಲಿ ನೀಡಲು ಉದ್ದೇಶಿಸಲಾಗಿದ್ದ ಹೈದರಾಬಾದ್‌ ವಿವಿಯ ಗೌರವ ಡಾಕ್ಟರೇಟ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎಚ್‌ಆರ್‌ಡಿ ಅಧಿಕಾರಿಗಳ ಇಂತಹ ಹೇಳಿಕೆಯಿಂದಾಗಿ ಪ್ರಶಸ್ತಿ ನೀಡಲಾರದಂತಾಯಿತು.
ಇಂತಹ ಪ್ರಶಸ್ತಿಗಳಿಂದಾಗಿ ಆತನಿಗೆ ಎನೂ ಆಗಬೇಕಾದದ್ದಿಲ್ಲ. ಆದರೆ ಎಷ್ಟೇ ಪ್ರಶಸ್ತಿ ಬಂದರೂ ತವರಿನ ಪ್ರಶಸ್ತಿ ಒಂದು ಪಟ್ಟು ಹೆಚ್ಚೇ ಗೌರವ ಮೂಡಿಸುತ್ತದೆ. ಆ ಕಾರಣಕ್ಕಾಗಿಯೇ ಆನಂದ್‌ ಇದನ್ನು  ಸ್ವೀಕರಿಸಲು ಒಪ್ಪಿಕೊಂಡಿದ್ದರು. ಈಗ ಕೊಟ್ಟರೂ ಬೇಡ ಎನ್ನುವ ಸ್ಥಿತಿ ಅವರದ್ದು...
ಪದವಿಯ ನೀಡುವ ಬಗ್ಗೆ   ಆ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಒಂದು ಕ್ಷಣ ಆನಂದ್‌ ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಆಶ್ಚರ್ಯಚಕಿತವಾಗುವುದರ ಜೊತೆಗೆ ಬೆಚ್ಚಿಬಿದ್ದರು.  ಇದೇ ಪ್ರಶ್ನೆಯನ್ನು ನಿಮ್ಮ  ಸೋನಿಯಾ ಗಾಂಧಿಗೆ ಕೇಳಿ ಎಂದು  ಚೆಸ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು... ಮತ್ತೂ ಆನಂದ್‌ ಭಾರತೀಯನೆಂಬುದನ್ನು ಖಾತ್ರಿ ಮಾಡಲು ಇನ್ನೂ ಸಮಾಲೋಚನೆ ನಡೆಸಬೇಕು ಎಂದು ಅಧಿಕಾರಿಗಳು ಕೈಚೆಲ್ಲಿ ಕುಳಿತಾಗ ,ಆನಂದ್‌ ಪತ್ನಿ ಅರುಣಾ ಭಾರತೀಯ  ಪೌರತ್ವದ ದಾಖಲೆಗಳನ್ನು ಹೇಳುವ  ಭಾರತೀಯ ಪಾಸ್‌ಪೋರ್ಟ್‌ ವಿವರಗಳನ್ನು ಫ್ಯಾಕ್ಸ್ ಮೂಲಕ ಕಳುಹಿಸಿದರೂ ಅತ್ತ ಗಮನ ಹರಿಸುವ ತಾಳ್ಮೆಯನ್ನು ತೋರಲಿಲ್ಲ ಅಧಿಕಾರಿಗಳು.
 ತಿರಂಗಾ ನೆರಳಲ್ಲಿ ಆಡುವುದೇ ಖುಷಿ...
 ‘ನನಗೆ ಪ್ರಶಸ್ತಿ ಪುರಸ್ಕಾರ ಎಲ್ಲವೂ ನಂತರದ ಪ್ರಶ್ನೆ. ನನ್ನ ದೇಶದ ತಿರಂಗಾ ಅಡಿಯಲ್ಲಿ ಆಡುತ್ತಿರುವುದಕ್ಕೆ ನನಗೆ ಸಂತಸವಿದೆ. ಮತ್ಯಾವುದೂ ನನಗೆ  ಇಷ್ಟು ಖುಷಿ ಕೊಡಲಾರದು. ನನ್ನ ದೇಶವೇ ನನಗೆ ಬಹು ದೊಡ್ಡ ಪ್ರಶಸ್ತಿ’ ಎನ್ನುತ್ತಾರೆ ಆನಂದ್‌.
ಇಷ್ಟೆಲ್ಲಾ ಆದ ಬಳಿಕ  ಕ್ಷಮೆ ಕೇಳಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್‌ ಸಿಬಲ್‌ ‘ಮತ್ತೊಂದು ಕಾರ್ಯಕ್ರಮದಲ್ಲಿ  ಪದವಿ ನೀಡುತ್ತೇವೆ ’ ಎಂದು ಎಳೆಮಕ್ಕಳ ಕಣ್ಣೀರೊರೆಸುವಂತೆ ಮಾತನಾಡಿದ್ದಾರೆ. ಅಷ್ಟಕ್ಕೂ ಎಂದಿಗೂ ಪ್ರಶಸ್ತಿ, ಪದವಿಗಳ ಆಸೆಗೆ ಬಿದ್ದು  ಆಟದ ನಿಜವಾದ ಸಂತಸವನ್ನು ಹಾಳು ಮಾಡಿಕೊಳ್ಳಲು ಒಪ್ಪದ ಮಾಸ್ಟರ್‌ ಸಹಜವಾಗಿಯೇ ತನಗೆ ಆ ಪದವಿಯೇ ಬೇಡ ಎಂದರೂ, ಅಭಿಮಾನಿಗಳ ಒತ್ತಾಯದ ಮೇಲೆ ಸ್ವೀಕರಿಸುವ ಮಾತನಾಡಿದ್ದಾರೆ.
ಇಲ್ಲಿರುವುದು ನಮ್ಮನೆ ಅಲ್ಲಿರುವುದು ಸುಮ್ಮನೆ...
ಆನಂದ್‌ ಹೆಚ್ಚಾಗಿ ಸ್ಪೇನ್‌ ದೇಶದಲ್ಲಿ ವಾಸಿಸಲು ಕಾರಣವೂ ಇದೆ. ವಿಶ್ವ ಚೆಸ್‌ನ ಹೆಚ್ಚಿನ ಚಾಂಪಿಯನ್‌ ಷಿಪ್‌ ಪಂದ್ಯಾಟಗಳು ನಡೆಯುವುದು, ಬೆಲ್ಜಿಯಂ(ಫಿಡೆ ವಿಶ್ವ ಚಾಂಪಿಯನ್‌ ಟೂರ್ನಮೆಂಟ್‌), ಮ್ಯಾಡ್ರಿಡ್‌,ಸ್ವಿಜರ್‌ಲ್ಯಾಂಡ್‌ ಸೇರಿದಂತೆ ಮುಂತಾದ ಕೆಲವು ಯೂರೋಪ್‌ ದೇಶಗಳು ಹಾಗೂ ರಷ್ಯಾ,ಅಮೇರಿಕದಲ್ಲಿ ನಡೆಯುತ್ತದೆ. ಆ ಕಾರಣಕ್ಕಾಗಿ ಅವರು ಆ ದೇಶದಲ್ಲಿ ನೆಲೆಸಿದ್ದಾರೆಯೇ ಹೊರತೂ ಬೇರೇ ಯಾವ ಮೋಜಿಗೂ ಅಲ್ಲ. ಇದನ್ನು ಈ ರಾಜಕಾರಣಿಗಳು ಅರಿತ್ತದ್ದರೆ ಆತನಿಗೆ ಅವಮಾನವಾಗುವ ಸಂದರ್ಭವೆ ಬರುತ್ತಿರಲಿಲ್ಲ.
ಜಾಗತೀಕರಣದಲ್ಲಿ ಇದೆಲ್ಲಾ ಮಾಮೂಲಿ
ಇಂದು ವಿಶ್ವವೆ ಒಂದು ಗ್ರಾಮವಾಗಿರುವ ಸಂದರ್ಭದಲ್ಲಿ  ದೇಶ- ದೇಶಗಳ ನಡುವಿನ ಗಡಿ ಶಿಥಿಲವಾಗುತ್ತಿದೆ.   ಇನ್ನೊಂದು ದೇಶದಲ್ಲಿದ್ದುಕೊಂಡು ಸ್ವಂತ ದೇಶಕ್ಕೆ ಆಡುವ ಪರಿಪಾಠ ಸಾಮಾನ್ಯವಾಗಿದೆ. ಅದಕ್ಕಾಗಿ ದೇಶದ ಹೆಸರಾಂತ ಕ್ರೀಡಾಪಟುಗಳನ್ನು  ಆತ ನಮ್ಮ ದೇಶದ ಪ್ರಜೆಯೇ ಅಲ್ಲ ಎಂದು ಅವಮಾನಿಸುವುದು ಸರಿಯಲ್ಲ.

ಚಿತ್ರವೆಂದರೆ..ಮಾತನಾಡುತ್ತಿರಬೇಕು..ಇದರ ಹಾಗೆ...

ಶಿಲ್ಪಕಲೆಗಳು ನಮ್ಮ ಪಾರಂಪರಿಕ ಆಸ್ತಿಗಳು.. ಅದನ್ನು ಅಲ್ಲಿಯೇ ಹೋಗಿ ನೋಡಬೇಕು.ಅದಾಗದಿದ್ದರೆ, ಅಂತಹ ಪ್ರದೇಶಗಳ ಚಿತ್ರ ಪ್ರದರ್ಶನ ನಡೆದಾಗ ಅದನ್ನು ನೋಡುವ ಮನಸ್ಸಿರಬೇಕು..ಹಂಪಿಯ ವಿಠ್ಠಲ ದೇವಸ್ಥಾನದ ಪಡಸಾಲೆಯಲ್ಲಿ ಕುಳಿತು ಭಕ್ತನ ಜೊತೆ ಪೂಜಾರಿ ಮಾತನಾಡುತ್ತಿರುವ ಚಿತ್ರ. ಇನ್ನೋಂದು ಚಿತ್ರದಲ್ಲಿ...ಹಂಪಿಯ ಭವ್ಯ ಕಲ್ಲಿನ ರಥದ ಎದುರು ರಾಜ ತನ್ನ ಸಾಮ್ರಾಜ್ಯದ ಮುಂದಿನ ಹಾದಿಯ ಬಗ್ಗೆ ಯೊಜನೆ ರೂಪಿಸುತ್ತಿದ್ದಾನೆ...
ತಮ್ಮ ಜೀವನದ 64 ವರ್ಷಗಳನ್ನು ಚಿತ್ರಗಳ ಬ್ಯಾನರ್  ಬರೆಯುವುದು, ಚಿತ್ರಮಂದಿರದ ಎದುರು ಹಾಕುವ ನಾಯಕರ ದೊಡ್ಡ ಕಟೌಟ್ ಗಳನ್ನು ಬಿಡಿಸುವುದರಲ್ಲೇ ಕಳೆದ ಕೆ.ಚೆನ್ನಪ್ಪ ಅವರ ಕುಂಚದಿಂದ ಮೂಡಿಬಂದ ಅದ್ಭುತ ಚಿತ್ರಗಳಿವು...
  ಚಿತ್ರಕಲಾ ಪರಿಷತ್ ನಲ್ಲಿ ನಡೆದ ಇವರ ಕುಂಚಕಲಾ ಪ್ರದರ್ಶನದಲ್ಲಿ 25 ಚಿತ್ರಗಳು ವೀಕ್ಷಕರನ್ನು ಆಕರ್ಷಿಸುತ್ತಿತ್ತು.
ಎಲ್ಲಿಯೂ ಏಕತಾನತೆಯನ್ನು ಸೃಷ್ಟಿಸದ ಇಲ್ಲಿಯ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. ನೆರಳು ಬೆಳಕಿನ ಸೆಳೆತದಲ್ಲಿ ದೇವಸ್ಥಾನದ ಎದುರು ಆನೆಯೊಂದು ದಾಟಿ ಹೊಗುತ್ತಿರುವ ಚಿತ್ರದಲ್ಲಿ ಅವರ ಕಲಾವಂತಿಕೆಯ ಪ್ರದರ್ಶನವಾಗುತ್ತದೆ.
    ಇಲ್ಲಿನ ಚಿತ್ರಗಳ ಬಗ್ಗೆ ಚೆನ್ನಪ್ಪ ಅವರನ್ನು  ಮಾತನಾಡಿಸಿದಾಗ, ತುಂಬಾ ಆಸ್ಥೆ ವಹಿಸಿ ಚಿತ್ರ ಬರೆದಿದ್ದೆನೆ.. ಪ್ರತಿಯೊಂದು ಚಿತ್ರ ಬರೆಯುವಾಗಲೂ ಹಲವಾರು ತಿಂಗಳುಗಳ ಶ್ರಮ ಹಾಕಿದ್ದೇನೆ. ಕೆಲವೇ ದಿನದಲ್ಲಿ ಮೂಡಿ ಬಂದ ಚಿತ್ರಗಳೂ ಇವೆ... ಎನ್ನುತ್ತಾರೆ.
   
ಚಿತ್ರಗಳನ್ನು ರಚಿಸುವಾಗ ಇದನ್ನು ಪ್ರದರ್ಶನ ಮಾಡಬೇಕೆಂಬ ಯಾವ ಉದ್ದೇಶವೂ ಇರಲಿಲ್ಲ ಆದರೆ ಈಗ ಪ್ರದರ್ಶನ ವಾಗುತ್ತಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ತಮ್ಮ ಧನ್ಯವಾದ ಸಲ್ಲಿಸುತ್ತಾರೆ.
ಕಲೆಗೆ ಯಾಕೆ ಹಣದ ಟ್ಯಾಗ್..
  ಇಲ್ಲಿನ ಎಲ್ಲಾ ಚಿತ್ರಗಳು ಮಾರಾಟಕ್ಕಿವೆ.ಆದರೆ ಯಾವ ಚಿತ್ರಗಳ ಮೇಲೂ ಅದರ ಬೆಲೆಯ ಸೂಚನೆಯಿರಲಿಲ್ಲ... ಹೀಗೇಕೆ ಎಂದು ಕೇಳಿದಾಗ ಅವರು ನೀಡಿದ ಉತ್ತರ ಸೊಗಸಾಗಿತ್ತು.
   ನಾನು ಯಾವ ಚಿತ್ರಗಳಿಗೂ ಬೆಲೆ ಕಟ್ಟಲು ಇಷ್ಟಪಡುವುದಿಲ್ಲ. ಏನಾದರೂ ಬೆಲೆ ಕಟ್ಟದರೆ ನನ್ನ ಶ್ರಮ ಇಷ್ಟೇನಾ ಎಂದು ಬೇಸರವಾಗುತ್ತದೆ...ಕಲೆಗೆ ಬೆಲೆ ಕಟ್ಟಲು ಎಂದಿಗೂ ಸಾಧ್ಯವಾಗುವುದಿಲ್ಲ . ಚಿತ್ರರಸಿಕರೇ ಕಟ್ಟಿದ ಬೆಲೆ ನನಗೆ ಒಪ್ಪಿಗೆಯಾದರೆ ಆ ಚಿತ್ರವನ್ನು ಅವರಿಗೆ ನೀಡುತ್ತೇನೆ....

ಮನಸಾರೆ...   
ಮಹಾರಾಷ್ಟ್ರದ ಎಲಿಫೆಂಟಾ ಗುಹೆಯಲ್ಲಿರುವ ತ್ರಿಮೂರ್ತಿ ಶಿಲ್ಪಕಲೆ ಚಿನ್ನಪ್ಪ ಅವರ ಕೈಯಿಂದ ಕ್ಯಾನ್ವಾಸ್ ನಲ್ಲಿ ಮೂಡಿದೆ. ಹಾಗೆಯೇ ಮದವುಕ್ಕಿದ ಆನೆಯ ಚಿತ್ರ, ಒರಿಸ್ಸಾದ ಕೊನಾರ್ಕ್ ದೇಗುಲದ ಎದುರು ಭರತನಾಟ್ಯ ಮಾಡುತ್ತಿರುವ ಯುವತಿ, ಹಂಪಿಯ ಮುಖ್ಯದ್ವಾರದ ಎದುರು ನೀರು ತೆಗೆದುಕೊಂಡು ಹೊಗುತ್ತಿರುವ ಹೆಂಗಸರ ಚಿತ್ರ,ಕೇರಳದ ತ್ರಿಚಿಯಲ್ಲಿರುವ ದೇವಸ್ಥಾನದ ಒಳಾವರಣದ ದಿವ್ಯ ಚಿತ್ರ...ಹೀಗೆ ಮನಸಾರೆ ಬಿಡಿಸಿದ ಚಿತ್ರಗಳೆಲ್ಲವೂ ಮನಸ್ಸಿಗೆ ತಾಕುತ್ತವೆ; ಮನಸಲ್ಲುಳಿಯುತ್ತವೆ.  
ಮಾಸ್ಟರ್ ಪೀಸ್..
 ಪ್ರದರ್ಶನಕ್ಕೆ ಬಂದಿದ್ದ ಕಲಾ ವಿದ್ಯಾರ್ಥಿಯೊಬ್ಬನನ್ನು ಮಾತಿಗೆಳೆದರೆ, ಈ ಚಿತ್ರಗಳೆಲ್ಲಾ ಮಾಸ್ಟರ್ ಫೀಸ್ ಗಳು ಸಾರ್.. ಸುಲಭಕ್ಕೋಲಿಯೋ ಕಲೆಯಲ್ಲ ಇದು... ಎನ್ನುತ್ತಾನೆ.
ಪ್ರತಿ ಚಿತ್ರಗಳಲ್ಲೂ ಅವರಿದ್ದಾರೆ...
 ಚಿತ್ರಗಳನ್ನು ವೀಕ್ಷಿಸಿದ ರಂಗಭೂಮಿ ಕಲಾವಿದೆ ಬಿ.ಜಯಶ್ರೀ... ಇಲ್ಲಿನ ಎಲ್ಲಾ ಚಿತ್ರಗಳಲ್ಲೂ ನನಗೆ ಚಿನ್ನಪ್ಪ ಅವರು ಇದ್ದ ರೀತಿಯೆ ಕಾಣುತ್ತಿದೆ.. ಇಲ್ಲಿನ ಕೆಲವು ಚಿತ್ರಗಳಲ್ಲಿ ಬೌಧ್ಧ ಬಿಕ್ಕುಗಳಿದ್ದಾರೆ..ರಾಜನಿದ್ದಾನೆ..ಪೂಜಾರಿ ಇದ್ದಾನೆ..ಆದರೆ ಅವರೆಲ್ಲರೂ ನೆಪ ಮಾತ್ರ ನಿಜವಾಗಿಯೂ ಅಲ್ಲಿರುವುದು ಚಿನ್ನಪ್ಪ ಎಂದು ಹೇಳುತ್ತಾರೆ.