Thursday, September 30, 2010

ನೀವು ಕಂಡ ಕನಸುಗಳು ಇನ್ನೂ ಹಾಗೇ ಉಳಿದಿವೆ..


ಶಂಕರ್ ನಾಗ್ ಎಂದೂ ತನಗೆ ಗೌರವ ನೀಡಿ ಎಂದು ಆಪೇಕ್ಷಿಸಿದವರೇ ಅಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ತಾನೊಬ್ಬ ಶ್ರೇಷ್ಠ ನಟ, ನಿರ್ದೇಶಕ ಎಂಬ ಹಮ್ಮು ಅವರಿಗೆ ಇರಲೇ ಇಲ್ಲ. ಆದ್ದರಿಂದ ಇಂದು ಜನ ಶಂಕರನಾಗ್ ರನ್ನು ಜನ ಪ್ರೀತಿಯಿಂದ ಏಕವಚನದಲ್ಲೆ ‘ನಮ್ಮ ಶಂಕರ್’ಹಾಗೇ ‘ಶಂಕ್ರಣ್ಣ' ಎಂದು ಸಂಬೊಧಿಸುತ್ತಾರೆ. ಏಕೆಂದರೆ ಅವರ ಪಾಲಿಗೆ ಶಂಕರ್ ನಾಗ್ ತಮ್ಮಮನೆಮಗ..

1990ರ ಸೆಪ್ಟಂಬರ್ 30, ಆ ದಿನದ ಮುಂಜಾನೆಯಲ್ಲಿ ದಾವಣಗೆರೆಯ ಕರಿ ಹೆಬ್ಬಾವಿನಂಥ ರಸ್ತೆಯ ಮೇಲೆ ಹೆಣವಾಗಿ ಬಿದ್ದ ಅವರೊಂದಿಗೆ ಚಿತ್ರಜಗತ್ತಿನ ಬಂಗಾರದ ಕನಸುಗಳು ನಡೆದು ಬಿಟ್ಟವು ಸದ್ದೇ ಇಲ್ಲದಂತೆ ! ಆತ ಅಗಲಿ ಇಪ್ಪತ್ತು ವರ್ಷವಾಯಿತು ಬೆಂಗಳೂರಿನ ಮೆಟ್ರೊ ಕಾಮಗಾರಿ ನೋಡುವಾಗಲೆಲ್ಲಾ ಆತ ನೆನಪಾಗುತ್ತಾನೆ. ಮನಸ್ಸಿಗೆ ಸುಪ್ತವಾಗಿ ಕಾಡಿ "ಅವನಿದ್ದಿದ್ದರೇ" ಎಂಬ ಭಾವ ಬರಿಸಿ, ಮರೆಯಾಗುತ್ತಾನೆ. ಆತ ಇಲ್ಲದಿರುವಾಗ ಆತನ ಬಗ್ಗೆ ಚಿಕ್ಕ ನೆನೆಪು ಮಾಡಿಕೊಳ್ಳೋಣ.

ಶಂಕರ್ ನಾಗ್‌ ಯಾನೆ ಶಂಕರ್ ನಾಗರಕಟ್ಟೆ .
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಾಗರಕಟ್ಟೆಯಲ್ಲಿ ಹುಟ್ಟಿದ ಶಂಕರ್ ನಾಗ್‌(ಇವರ ಅಣ್ಣ ಅನಂತ್‌ನಾಗ್‌) ಕನಸು ಕಂಗಳಲ್ಲಿ ಜೀವನದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದ. ನಾಟಕ, ರಂಗಭೂಮಿ, ಕಲಾತ್ಮಕ ಚಿತ್ರಗಳೆಂದರೆ ಪಂಚಪ್ರಾಣ. ಹಾಗಂತ ಕೇವಲ ಚಿತ್ರ ನಿರ್ಮಾಣ ನಿರ್ದೇಶನ ಮಾಡುತ್ತಾ ಕೂರಲಿಲ್ಲ. ತನ್ನ ಮನಸ್ಸಿಗೆ ಬಂದ ಅಭಿವೃದ್ದಿಯ ಕನಸನ್ನು ಸರ್ಕಾರದ ಮುಂದಿಡುತ್ತಿದ್ದರು. ಲಂಡನ್‌ನಲ್ಲಿ ಮೆಟ್ರೊ ರೈಲುಗಳನ್ನು ನೋಡಿದ್ದ ಶಂಕರ್ ನಾಗ್, ಇದೇ ಮಾದರಿಯ ರೈಲುಗಳು ಬೆಂಗಳೂರಿಗೆ ಸೂಕ್ತ ಎಂದವರೇ ಸರ್ಕಾರಕ್ಕೆ ಎರಡು ಪುಟಗಳ ವರದಿ ಸಲ್ಲಿದ್ದರು. ಆದರೆ ಸರ್ಕಾರ ಅದನ್ನು ಬುಟ್ಟಿಗೆಸೆಯಿತು. ಇಂದು ಅವರ ಕನಸು ನನಸಾಗುವ ಹಂತದಲ್ಲಿದೆ ಆದರೆ ಅವರೇ ಇಲ್ಲ..!
ನಟಿಸಿದ ಮೊದಲ ಚಿತ್ರಕ್ಕೆ ಪ್ರಶಸ್ತಿ
  12 ವರ್ಷಗಳ ಚಿತ್ರಜೀವನದಲ್ಲಿ ಹೆಚ್ಚು ಕಡಿಮೆ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್ ನಾಗ್ ಅವರ ಪ್ರತಿಭೆ ಮೊದಲು ಗುರುತಿಸಿದವರು ಗಿರೀಶ್‌ ಕಾನಾರ್ಡ್‌ ಅವರು ನಿರ್ದೇಶಿಸಿದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಗಂಡುಗಲಿ ಪಾತ್ರಕ್ಕೆ ಆಯ್ಕೆಯಾದ ಇವರು ಆ ಚಿತ್ರದ ನಟನೆಗಾಗಿ ಪ್ರಶಸ್ತಿ ಪಡೆದುಕೊಂಡರು. ನಂತರ ವಾಣಿಜ್ಯ ಚಿತ್ರಗಳೆಡೆ ವಾಲಿದ ಶಂಕರ್ ‘ಸೀತಾರಾಮು' ಚಿತ್ರ ಭರ್ಜರಿ ಯಶಸ್ಸು ಕಂಡಿತು. ನಂತರ ಆಟೋರಾಜ, ಸಿಬಿಐ ಶಂಕರ್, ಸಾಂಗ್ಲಿಯಾನ ಯಶಸ್ವೀಯಾದದ್ದೇ ತಡ ಸಾಲು ಸಾಲು ನಿರ್ಮಾಪಕರು ಇವರನ್ನು ನಾಯಕನಾಗಿ ಆಯ್ಕೆ ಮಾಡಿದರೂ ಅವರೇ ಕನಸೇ ಬೇರೆಯದಿತ್ತು. ಏನಾದರೂ ಹೊಸದನ್ನು ನೀಡಬೇಕು ಎನ್ನುವ ಮನಸ್ಸಾದಾಗ ನಿರ್ದೇಶಕರ ಪಾತ್ರ ನಿಭಾಯಿಸಿದರು. ಶಂಕರ್ ನಿರ್ದೇಶಿಸಿದ ಪ್ರಥಮ ಚಿತ್ರ ‘ಮಿಂಚಿನ ಓಟ’ಕ್ಕೆ ಏಳು ರಾಜ್ಯ ಪ್ರಶಸ್ತಿ ಪಡೆದು ತಮ್ಮ ಶಕ್ತಿ ತೋರಿಸಿದ್ದರು. ನಂತರ ರಾಷ್ಟ್ರ ಪ್ರಶಸ್ತಿ ಪಡೆದ ಆಕ್ಸಿಡೆಂಟ್‌, ಗೀತಾ, ಜನ್ಮ ಜನ್ಮದ ಅನುಭಂಧ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಡಾ. ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ ಒಂದು ಮುತ್ತಿನ ಕಥೆ ಇವೆಲ್ಲಾ ಶಂಕರ್ ನಾಗ್‌ ಗರಡಿಯಲ್ಲಿ ಬಂದ ಚಿತ್ರಗಳು.
    ಇಂದಿಗೂ ಶಂಕರ್ ನಾಗ್ ರನ್ನು ಹಲಾವಾರು ಕಾರಣಗಳಿಗೆ ನೆನಪಿಸಿಕೊಳ್ಳುತ್ತಾರೆ. ಆಗ ಟಿವಿ ಎಂದರೆ ದೂರದರ್ಶನ ಮಾತ್ರ. ಈಗಿನ ಹಾಗೆ ಹಳ್ಳಿಹಳ್ಳಿಗೂ ಟಿವಿ ಚಾನೆಲ್‌ಗಳು ಇರಲಿಲ್ಲ. ಅಂತದ್ದರಲ್ಲಿ ಶಂಕರ್, ಆರ್‌.ಕೆ. ನಾರಾಯಣ್‌ ಅವರ ಮಾಲ್ಗುಡಿ ಡೇಸ್‌ನ್ನು ಧಾರವಾಹಿಯನ್ನಾಗಿಸಿದರು. ಬಹು ಜನಪ್ರಿಯಗೊಂಡ ಈ ಧಾರವಾಹಿ ಶಂಕರ್ ನಾಗ್‌ ಎಂಬ ಕನ್ನಡದ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಕನ್ನಡಕೊಬ್ಬ ಸಮರ್ಥ ನಿರ್ದೇಶಕ ದಕ್ಕಿದಂತಾಯಿತು ಎಂದು ನಿಟ್ಟುಸಿರಿಟ್ಟರು. ನಂತರ ಸ್ವಾಮಿ ಎಂಬ ಧಾರವಾಹಿ ನಿರ್ದೇಶಿಸಿದರು.
ಬೆಂಗಳೂರ ಕನಸು.
 ಇಂದು ಬೆಂಗಳೂರಿನಲ್ಲಿ ವಿಶಾಲವಾದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿಗೆ ಇದು ಅನಿವಾರ್ಯವೆಂದು ಹೇಳಿದವರು ಶಂಕರ್ ನಾಗ್, ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಠಿಯಲ್ಲಿ ನಂದಿ ಬೆಟ್ಟಕ್ಕೆ ರೋಪ್ ಕಟ್ಟುವ ಯೋಜನೆ ರೂಪಿಸಿದ್ದರು ಅದನ್ನು ಒಪ್ಪಿದ್ದ ಸರ್ಕಾರ ಅದರ ಭೂಮಿಪೂಜೆಯನ್ನು ನಡೆಸಿದ್ದರು. ಆದರೆ ಶಂಕರ್ ನಾಗ್ ಮರಣದ ನಂತರ ಅವರ ಜೊತೆಯಲ್ಲಿಯೇ ಅವರ ಈ ಬಹುದೊಡ್ಡ ಕನಸು ಮಣ್ಣು ಸೇರಿತ್ತು.
 ಶಂಕರ್ ನಾಗ್ ಚಿತ್ರದಲ್ಲಿ ನಟಿಸುವುದು ಕೇವಲ ಹೊಟ್ಟೆಪಾಡಿಗಾಗಿ ಮಾತ್ರ. ಆದರೆ ಅವರ ಆಸಕ್ತಿ ರಂಗಭೂಮಿಯ ಮೇಲೆ ಇತ್ತು ಇದಕ್ಕಾಗಿಯೇ ‘ಸಂಕೇತ್’ ಎಂಬ ರಂಗಭೂಮಿ ತಂಡವನ್ನು ರಚಿಸಿದ್ದರು ಇದರ ಮೂಲಕ ಕಾರ್ನಾಡ್ ರ ‘ನಾಗಮಂಡಲ', ‘ಅಂಜುಮಲ್ಲಿಗೆ' ಹಾಗೆ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಎನ್ನುವ ನಾಟಕವನ್ನು ನಿರ್ದೇಶಿಸಿದ್ದರು. ಇಂದಿಗೂ ಸಂಕೇತ್ ತಂಡ ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಹೆಸರುಗಳಿಸಿ ಮುನ್ನಡೆಯುತ್ತಿದೆ. ಆದರೆ ಕನ್ನಡಕ್ಕೆ ಕರ್ನಾಟಕದಲ್ಲೇ ಸುಸಜ್ಜಿತವಾದ ಸ್ಟುಡಿಯೋ ಬೇಕೆಂಬ ದಿಸೆಯಲ್ಲಿ ಆರಂಭಿಸಿದ್ದ ‘ಸಂಕೇತ್' ಸ್ಟುಡಿಯೋ ಉಳಿಸಿಕೊಳ್ಳಲಾಗಲಿಲ್ಲ ಆದರೆ ಅವರ ಕನಸಿನ ಕೂಸು ರಂಗಶಂಕರ ಇಂದು ಜೆ.ಪಿ.ನಗರದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿದೆ. ಪ್ರತಿನಿತ್ಯದ ರಂಗಭೂಮಿ ಕಾಯಕದಲ್ಲಿ ತೊಡಗಿರುವ ರಂಗಶಂಕರ ಶಂಕರನಾಗ್ ನೆನಪನ್ನು ಇನ್ನೂ ಹಸಿರಾಗುಳಿಸಿದೆ.
ದೇವರು ಕರೆಸಿಕೊಂಡ
ತನ್ನ 12 ವರ್ಷಗಳ ಚಿತ್ರಜೀವನದಲ್ಲಿ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತಿತ್ತು.ಒಂದೇ ಸಮಯದಲ್ಲಿ ಮೂರ್ನಾಲ್ಕು ಕೆಲಸ ಮಾಡುತ್ತಿದ್ದ ಶಂಕರನಾಗ್  ಶರವೇಗದ ಕೆಲಸ ನೋಡಿ ಆ ದೇವರಿಗೂ ಅಸೂಯೆಯಾಗಿದ್ದಿರಬೇಕು. ಸೆಪ್ಟಂಬರ್ 30ರಂದು ಜೋಕುಮಾರಸ್ವಾಮಿ ಚಿತ್ರದ ಮಾತುಕತೆಗಾಗಿ ಬೆಂಗಳೂರಿಗೆ ಹೆಂಡತಿ ಅರುಂಧತಿ ನಾಗ್ ಮಗಳು ಕಾವ್ಯ ಜೊತೆಯಲ್ಲಿ ಬರುತ್ತಿದ್ದ ಶಂಕರನಾಗ್ ಕಾರು ದಾವಣಗೆರೆಯ ಆನುಗೋಡಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕಿಡಾಯಿತು. ಅಷ್ಟೇ, ಶಂಕರನಾಗ್ ಎಂಬ ಪಾದರಸದ ಯುವಕ ಹೆಣವಾಗಿದ್ದ..! ಆತ ಅಭಿನಯಿಸಿದ್ದ ಕೊನೆಯ ಚಿತ್ರ ನಿಗೂಢ ರಹಸ್ಯ.  
ಅಲ್ಲಿಗೆ ಕನ್ನಡ ಚಿತ್ರರಂಗದ ಅಪೂರ್ವ ಕುಡಿಯೊಂದು ಕಂಡು ಕಾಣದಂತೆ ಕಣ್ಮರೆಯಾಯಿತು. ಆದರೆ ಶಂಕರನಾಗ್ ಎಂಬ ಕನಸು ಕಂಗಳ ಯುವಕ ಇಂದಿಗೂ ಪ್ರತಿಯೊಬ್ಬ ಆಟೋ ಡ್ರೈವರ್  ಕಂಗಳಲ್ಲಿದ್ದಾನೆ. ಆತನ ಮುಗುಳ್ನಗುವಿನ ಚಿತ್ರ ಬೆಂಗಳೂರಿನ ಹೆಚ್ಚಿನ ಆಟೋಗಳ ಮೇಲೆ ರಾರಾಜಿಸುವಾಗ ಶಂಕರನಾಗ್ ಎಂಬ ಅಸಮಾನ್ಯ ಪ್ರತಿಭೆ ಹೇಗೆ ಜನಸಾಮಾನ್ಯರಲ್ಲಿ ಆಪ್ತವಾಗಿ ಬೇರೂರಿದ್ದ ಎನ್ನುವುದು ಸ್ಪಷ್ಠವಾಗುತ್ತದೆ.

No comments:

Post a Comment

ನಿಮಗನಿಸಿದ್ದು....