ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಉಳಿಸಿಕೊಳ್ಳಲು ನಾವು ಹರಸಾಹಸ ಪಡುತ್ತಿದ್ದೆವೆ. ಇಂದು ಆನೆಗಳ ಗತಿ ಅದೇ ದಾರಿಯಲ್ಲಿ ಸಾಗುತ್ತಿದೆ. ಪಾರಂಪರಿಕ ಪ್ರಾಣಿ ಎಂದು ಘೋಷಿಸಿದರೂ ಆನೆಗಳ ಉಳಿವಿಗೆ ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲ.
ಆನೆಗಳ ಸಾವು ಮಾಮೂಲಿಯಾಗಿರುವಾಗ ದೇಶದಲ್ಲಿ ಇನ್ನೊಂದು ಬಹುದೊಡ್ಡ ಘಟನೆ ಸಂಭವಿಸಿದೆ. ಪಶ್ಚಿಮ ಬಂಗಾಳದಲ್ಲಿ ರೈಲಿಗೆ ಸಿಲುಕಿ ಬರೋಬ್ಬರಿ ಏಳು ಆನೆಗಳು ಮೃತಪಟ್ಟಿವೆ..
ಹಾಗಾದರೆ ಇದಕ್ಕೆಲ್ಲ ಕೊನೆ ಎಂದು.
ಎಲಿಫೆಂಟ್ ಟಾಸ್ಕ್ ಫೋರ್ಸ ಬಿಡುಗಡೆಗೊಳಿಸಿದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 1987ರಿಂದ ಇಲ್ಲಿಯವರೆಗೆ ಒಟ್ಟು 150 ಆನೆಗಳು ರೈಲಿಗೆ ಆಹಾರವಾಗಿವೆ..! ಆದರೆ ಭಾರತದ ರಾಜಕಾರಣಿಗಳು ಇದೆಲ್ಲ ಮಾಮೂಲಿ ಎಂಬಂತೆ ಹೇಳುತ್ತಿರುವುದು ನಿಜಕ್ಕೂ ದುರಂತ. ಆನೆಗಳು ರೈಲಿಗೆ ಸಿಲುಕಿ ಸಾವೀಗೀಡಾಗುತ್ತಿರುವ ವಿಚಾರದಲ್ಲಿ ಪಶ್ಚಿಮ ಬಂಗಾಳ ದ್ವಿತೀಯ ಸ್ಥಾನಿಯಾಗಿದ್ದರೆ ಮೊದಲ ಸ್ಥಾನದಲ್ಲಿರುವ ಅಸ್ಸಾಂನಲ್ಲಿ ಶೇ.36 ಆನೆಗಳು ರೈಲಿಗೆ ಸಿಲುಕಿ ಸಾವಿಗೀಡಾಗುತ್ತಿದೆ.
ಎಲ್ಲೆಲ್ಲಿ ಎಷ್ಟೆಷ್ಟು..
ಹಾಗೆ ಉತ್ತರ ಖಂಡದಲ್ಲಿ ಶೇ. 14, ಜಾರ್ಖಂಡ್ ನಲ್ಲಿ ಶೇ.10, ತಮಿಳುನಾಡಿನಲ್ಲಿ ಶೇ.6 ಉತ್ತರ ಪ್ರದೇಶದಲ್ಲಿ ಹಾಗು ಕೇರಳದಲ್ಲಿ ಶೇ.3 ರಷ್ಟು ಆನೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಆದರೆ ಇದಾವುದರ ಪರಿವೇ ಇಲ್ಲದ ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವಲ್ಲಿ ಸುಖ ಕಂಡು ಕೊಳ್ಳುತ್ತಿದ್ದಾರೆ. ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಿದ ಮರುದಿನವೇ ಏಳು ಆನೆಗಳ ಮೃತಪಟ್ಟರಿವುದಕ್ಕೆ ನಮ್ಮ ಕೇಂದ್ರ ಪರಿಸರ ಸಚಿವ ರೈಲ್ವೆ ಮಂಡಳಿ ಜೊತೆ ಮಾತನಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಪಾಪ ರೈಲ್ವೇ ಅಧಿಕಾರಿಗಳು ಏನು ತಾನೆ ಮಾಡಿಯಾರು..?
ಆ ಪ್ರದೇಶದಲ್ಲಿ ಆನೆಗಳ ಸಾವು ಇದೆ ಮೊದಲಲ್ಲ ಹಲವಾರು ಬಾರಿ ಸಂಭವಿಸಿದೆ ಎಂದು ಸಚಿವರೇ ಹೇಳಿದ್ದಾರೆ. ಮೊದಲ ಬಾರಿ ಇಂತಹ ಘಟನೆ ಸಂಭವಿಸಿದ್ದಾಗ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲವೇನೋ.
ಇಷ್ಟಲ್ಲದೇ..
ಆನೆಗಳು ಹೀಗೆ ಅಚಾತುರ್ಯದಿಂದ ಸಾಯುವುದಲ್ಲದೇ ಇನ್ನು ಹಲವಾರು ಕಾರಣಗಳಿಗೆ ಸಾಯುತ್ತವೆ. ಕಾಡುಗಳ್ಳ ವೀರಪ್ಪನ್ ಮರೆಯಾದರೇನಂತೆ ಇಂದಿಗೂ ಅರಣ್ಯಗಳಲ್ಲಿ ಹಲವಾರು ವೀರಪ್ಪನ್ ಗಳು ದಂತಕ್ಕಾಗಿ ಆನೆಯನ್ನು ಭೇಟೆಯಾಡುತ್ತಲೆ ಇದ್ದಾರೆ. ಅಲ್ಲದೇ ಕಾಡುಗಳ ನಾಶದಿಂದ ಆನೆಗಳು ನಾಡಿಗೆ ದಾಳಿ ಇಡುವ ವರದಿಗಳು ಹೆಚ್ಚುತ್ತಲಿವೆ ಕರ್ನಾಟಕದಲ್ಲಿ ಹಾಸನ, ಮಡಿಕೇರಿ, ವೀರಾಜಪೇಟೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತವೆ. ರಾಜ್ಯದಲ್ಲಿ ಬನ್ನೇರುಘಟ್ಟ, ಬಂಡೀಪುರ, ಬಿಳಿಗಿರಿರಂಗಸ್ವಾಮಿ, ಕೊಳ್ಳೆಗಾಲದಲ್ಲಿ ಆನೆಗಳು ಹೆಚ್ಚಿವೆ. ಭದ್ರಾ ಹಾಗೂ ದಾಂಡೇಲಿಯಲ್ಲಿ ಆನೆಗಳ ಸಂತತಿ ತುಂಬಾ ಕಡಿಮೆ ಇದೆ. ಆನೆಗಳು ನಾಡಿಗೆ ದಾಳಿ ಮಾಡುತ್ತದೆ ಎನ್ನುವುದನ್ನೆ ನೆಪ ಮಾಡಿಕೊಂಡ ಹಲವರು ಕಾಡಾನೆಗಳನ್ನು ದಂತಕ್ಕಾಗಿ ಉಪಯೋಗಿಸುತ್ತಿದ್ದಾರೆ.
ಸರ್ಕಾರದ ಹೊಣೆ ಏನು?
ಆನೆಗಳ ಸಂತತಿ ರಕ್ಷಣೆಯ ಕಾರ್ಯವನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.
ಕರ್ನಾಟಕದಲ್ಲಿ ಅರಣ್ಯ ಇಲಾಖೆ ಹಾಕಿರುವ ವಿದ್ಯುತ್ ಬೇಲಿ 12ವೋಲ್ಟನದ್ದಾಗಿದ್ದು ಇದರಿಂದ ಆನೆ ಸಾವು ಸಂಭವಿಸುವುದಿಲ್ಲ ಆದರ ಇಂದು ಇದರ ನಿರ್ವಹಣೆಯ ಕೊರತೆಯೇ ಜಾಸ್ತಿಯಾಗಿ ಕಣ್ಣಿಗೆ ಕಾಣುತ್ತಿದೆ. ಆದರೆ ಗ್ರಾಮಗಳಲ್ಲಿ ತಂತಿ ಬೇಲಿಗೆ ನೇರವಾಗಿ ವಿದ್ಯತ್ ಪ್ರವಹಿಸುತ್ತಾರೆ. ಇದರಲ್ಲಿ 230 ವೋಲ್ಟ್ ವಿದ್ಯುತ್ ಇರುವುದರಿಂದ ಇದನ್ನು ಸರ್ಶ್ಪಿಸುವ ಆನೆಗಳು ಸಾವನಪ್ಪುತ್ತವೆ ಇದನ್ನು ಮೊದಲು ತಡೆಯಬೇಕು.
ವಿದೇಶದಲ್ಲಿ ಈ ಕಾರ್ಯ
*ಆಫ್ರಿಕಾ ಆನೆಗಳ ತವರೂರು. ಇಲ್ಲಿ ಹೆಚ್ಚಾಗಿ ಕಂದಕಗಳನ್ನು ನಿರ್ಮಾಣ ಮಾಡುವ ಉಪಾಯ ಕಂಡುಕೊಂಡಿದ್ದಾರೆ.
* ಜೇನು ಗೂಡು ಇರುವ ಮರಗಳಿಗೆ ಆನೆಗಳು ದಾಳಿ ಮಾಡುವುದಿಲ್ಲ ಹಾಗಾಗಿ ಕೀನ್ಯಾ ಮತ್ತು ಜಿಂಬಾಬ್ವೆಗಳಲ್ಲಿ ಜೇನುಹುಳು ಸಾಕಾಣಿಕೆ ಮಾಡುವ ಮೂಲಕ ಆನೆಗಳ ದಾಳಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.
* ಹಾಗೆ ಅಲ್ಲಿ ಹಗ್ಗವನ್ನು ಬೇಲಿಗಳಿಗೆ ಕಟ್ಟಿ ಅದಕ್ಕೆ ಮೆಣಸಿನ ಪುಡಿಯನ್ನು ಹಚ್ಚುತ್ತಾರೆ.
* ಹಾಗೆ ಕೆಲವು ಕಡೆ ರೈತರು ತಮ್ಮ ಬೇಲಿಗಳಿಗೆ ಕನ್ನಡಿಯ ಚೂರುಗಳನ್ನು ಹಾಗೆ ‘ಸೀಡಿ'ಗಳನ್ನು ಕಟ್ಟುತ್ತಾರೆ. ಚಂದ್ರನ ಬೆಳಕಲ್ಲಿ ಅದು ಹೊಳೆಯುವುದರಿಂದ ಆನೆಗಳು ದಾಳಿ ಮಾಡುವುದಿಲ್ಲ ಎಂಬ ನಂಬಿಕೆ ಅವರಲ್ಲಿದೆ.
ಎಲ್ಲವೂ ದಂತಕ್ಕಾಗಿ..
70 ರಿಂದ 80 ಸಾವಿರದಷ್ಟು ಬೆಲೆಬಾಳುವ ಆನೆದಂತಗಳ ಕಳ್ಳಸಾಗಾಣಿಕೆ ಇಂದು ಅವ್ಯಾಹತವಾಗಿದೆ.ಎಲ್ಲರೂ ದಂತ ಸಾಗಿಸುವಾಗ ಸಿಕ್ಕಿ ಬೀಳುತ್ತಾರೆಯೆ ಹೊರತು ಆನೆಯನ್ನು ಸಾಯಿಸುವಾಗ ಸಿಕ್ಕಿ ಬೀಳುವುದಿಲ್ಲ. ಸರಾಸರಿ 20ಕೆ.ಜಿ ತೂಕದ ಆನೆಯ ದಂತ ಹಲಾವರು ಕರಕುಶಲ ವಸ್ತುಗಳ ಉತ್ಪಾದನೆಗಾಗಿ ಬಳಕೆ ಆಗುತ್ತವೆ. ಕೆಲವರಿಗೆ ಆನೆಯ ದಂತಗಳನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿರುವುದರಿಂದ ಹಾಗಾಗಿ ಇಂದು ನಮಗೆ ಆನೆಗಳು ಕಾಣ ಸಿಗುವುದು ಬಾರಿ ಕಡಿಮೆ ಆದರೆ ಆನೆಯ ದಂತಗಳು ಪ್ರತಿನಿತ್ಯ ಸುದ್ದಿಯಾಗುತ್ತವೆ.
ರಕ್ಷಿಸುವ ಹೊಣೆ ಎಲ್ಲರದ್ದಾಗಿರಲಿ..
ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಉಳಿಸಿಕೊಳ್ಳಲು ನಾವು ಹರಸಾಹಸ ಪಡುತ್ತಿದ್ದೆವೆ. ಇಂದು ಆನೆಗಳ ಗತಿ ಅದೇ ದಾರಿಯಲ್ಲಿ ಸಾಗುತ್ತಿದೆ. ಪಾರಂಪರಿಕ ಪ್ರಾಣಿ ಎಂದು ಘೋಷಿಸಿದರೂ ಆನೆಗಳ ಉಳಿವಿಗೆ ಹಾಗೂ ಅದರ ರಕ್ಷಣೆಗೆ ಸರ್ಕಾರ ಯಾವೊಂದು ಕ್ರಮವನ್ನು ಕೈಗೊಳ್ಳದಿರುವುದು ಬೇಸರದ ಸಂಗತಿಯೇ. ರೈಲಿಗೆ ಸಿಲುಕಿ ಸತ್ತದ್ದಕಾಗಿಯೇ ಏನೂ ಸಚಿವ ಜೈರಾಂ ರಮೇಶ್ ಆನೆಗಳ ರಾಷ್ಟ್ರೀಯ ಸಂರಕ್ಷಣಾ ಪ್ರಾಧಿಕಾರ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗೆ ರೈಲ್ವೆ ಸಚಿವೆ ಕೆಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಗಳ ಜೊತೆ ಮುಂದಿನವಾರ ಮಾತನಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರೂ ಅವರ ಮಾತುಕತೆಗಳು ಹಾಗೂ ಇನ್ಯಾವುದೋ ಅಧಿವೇಶನಗಳು ಆನೆಗಳ ಜೀವವನ್ನು ಕಾಪಾಡುವುದಿಲ್ಲ ಹಾಗಾಗಿ ಆನೆಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ. ಪ್ರಾಧಿಕಾರ ಸ್ಥಾಪನೆ ಮಾಡುವ ಭರವಸೆ ನೀಡಿ ನಂತರ ಜಾರಿಕೊಳ್ಳುವ ಬದಲು ಇಂತಹ ಹೇಳಿಕೆಗಳು ನೀಡದೇ ಇರುವಂತಹ ಸೌಜನ್ಯವನ್ನು ರಾಜಕಾರಣಿಗಳು ಬೆಳೆಸಿಕೊಳ್ಳಲಿ.
ಹೊಸದಿಗಂತ ಪತ್ರಿಕೆಯ ವಿಶೇಷ ಪುಟದಲ್ಲಿ ಸೆಪ್ಟಂಬರ್ 26 ರಂದು ಪ್ರಕಟವಾದ ಬರಹ
No comments:
Post a Comment
ನಿಮಗನಿಸಿದ್ದು....