ಶಿಲ್ಪಕಲೆಗಳು ನಮ್ಮ ಪಾರಂಪರಿಕ ಆಸ್ತಿಗಳು.. ಅದನ್ನು ಅಲ್ಲಿಯೇ ಹೋಗಿ ನೋಡಬೇಕು.ಅದಾಗದಿದ್ದರೆ, ಅಂತಹ ಪ್ರದೇಶಗಳ ಚಿತ್ರ ಪ್ರದರ್ಶನ ನಡೆದಾಗ ಅದನ್ನು ನೋಡುವ ಮನಸ್ಸಿರಬೇಕು..
ಹಂಪಿಯ ವಿಠ್ಠಲ ದೇವಸ್ಥಾನದ ಪಡಸಾಲೆಯಲ್ಲಿ ಕುಳಿತು ಭಕ್ತನ ಜೊತೆ ಪೂಜಾರಿ ಮಾತನಾಡುತ್ತಿರುವ ಚಿತ್ರ. ಇನ್ನೋಂದು ಚಿತ್ರದಲ್ಲಿ...ಹಂಪಿಯ ಭವ್ಯ ಕಲ್ಲಿನ ರಥದ ಎದುರು ರಾಜ ತನ್ನ ಸಾಮ್ರಾಜ್ಯದ ಮುಂದಿನ ಹಾದಿಯ ಬಗ್ಗೆ ಯೊಜನೆ ರೂಪಿಸುತ್ತಿದ್ದಾನೆ...
ತಮ್ಮ ಜೀವನದ 64 ವರ್ಷಗಳನ್ನು ಚಿತ್ರಗಳ ಬ್ಯಾನರ್ ಬರೆಯುವುದು, ಚಿತ್ರಮಂದಿರದ ಎದುರು ಹಾಕುವ ನಾಯಕರ ದೊಡ್ಡ ಕಟೌಟ್ ಗಳನ್ನು ಬಿಡಿಸುವುದರಲ್ಲೇ ಕಳೆದ ಕೆ.ಚೆನ್ನಪ್ಪ ಅವರ ಕುಂಚದಿಂದ ಮೂಡಿಬಂದ ಅದ್ಭುತ ಚಿತ್ರಗಳಿವು...
ಚಿತ್ರಕಲಾ ಪರಿಷತ್ ನಲ್ಲಿ ನಡೆದ ಇವರ ಕುಂಚಕಲಾ ಪ್ರದರ್ಶನದಲ್ಲಿ 25 ಚಿತ್ರಗಳು ವೀಕ್ಷಕರನ್ನು ಆಕರ್ಷಿಸುತ್ತಿತ್ತು.
ಎಲ್ಲಿಯೂ ಏಕತಾನತೆಯನ್ನು ಸೃಷ್ಟಿಸದ ಇಲ್ಲಿಯ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. ನೆರಳು ಬೆಳಕಿನ ಸೆಳೆತದಲ್ಲಿ ದೇವಸ್ಥಾನದ ಎದುರು ಆನೆಯೊಂದು ದಾಟಿ ಹೊಗುತ್ತಿರುವ ಚಿತ್ರದಲ್ಲಿ ಅವರ ಕಲಾವಂತಿಕೆಯ ಪ್ರದರ್ಶನವಾಗುತ್ತದೆ.
ಇಲ್ಲಿನ ಚಿತ್ರಗಳ ಬಗ್ಗೆ ಚೆನ್ನಪ್ಪ ಅವರನ್ನು ಮಾತನಾಡಿಸಿದಾಗ, ತುಂಬಾ ಆಸ್ಥೆ ವಹಿಸಿ ಚಿತ್ರ ಬರೆದಿದ್ದೆನೆ.. ಪ್ರತಿಯೊಂದು ಚಿತ್ರ ಬರೆಯುವಾಗಲೂ ಹಲವಾರು ತಿಂಗಳುಗಳ ಶ್ರಮ ಹಾಕಿದ್ದೇನೆ. ಕೆಲವೇ ದಿನದಲ್ಲಿ ಮೂಡಿ ಬಂದ ಚಿತ್ರಗಳೂ ಇವೆ... ಎನ್ನುತ್ತಾರೆ.
ಚಿತ್ರಗಳನ್ನು ರಚಿಸುವಾಗ ಇದನ್ನು ಪ್ರದರ್ಶನ ಮಾಡಬೇಕೆಂಬ ಯಾವ ಉದ್ದೇಶವೂ ಇರಲಿಲ್ಲ ಆದರೆ ಈಗ ಪ್ರದರ್ಶನ ವಾಗುತ್ತಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ತಮ್ಮ ಧನ್ಯವಾದ ಸಲ್ಲಿಸುತ್ತಾರೆ.
ಕಲೆಗೆ ಯಾಕೆ ಹಣದ ಟ್ಯಾಗ್..
ಇಲ್ಲಿನ ಎಲ್ಲಾ ಚಿತ್ರಗಳು ಮಾರಾಟಕ್ಕಿವೆ.ಆದರೆ ಯಾವ ಚಿತ್ರಗಳ ಮೇಲೂ ಅದರ ಬೆಲೆಯ ಸೂಚನೆಯಿರಲಿಲ್ಲ... ಹೀಗೇಕೆ ಎಂದು ಕೇಳಿದಾಗ ಅವರು ನೀಡಿದ ಉತ್ತರ ಸೊಗಸಾಗಿತ್ತು.
ನಾನು ಯಾವ ಚಿತ್ರಗಳಿಗೂ ಬೆಲೆ ಕಟ್ಟಲು ಇಷ್ಟಪಡುವುದಿಲ್ಲ. ಏನಾದರೂ ಬೆಲೆ ಕಟ್ಟದರೆ ನನ್ನ ಶ್ರಮ ಇಷ್ಟೇನಾ ಎಂದು ಬೇಸರವಾಗುತ್ತದೆ...ಕಲೆಗೆ ಬೆಲೆ ಕಟ್ಟಲು ಎಂದಿಗೂ ಸಾಧ್ಯವಾಗುವುದಿಲ್ಲ . ಚಿತ್ರರಸಿಕರೇ ಕಟ್ಟಿದ ಬೆಲೆ ನನಗೆ ಒಪ್ಪಿಗೆಯಾದರೆ ಆ ಚಿತ್ರವನ್ನು ಅವರಿಗೆ ನೀಡುತ್ತೇನೆ....
ಮನಸಾರೆ...
ಮಹಾರಾಷ್ಟ್ರದ ಎಲಿಫೆಂಟಾ ಗುಹೆಯಲ್ಲಿರುವ ತ್ರಿಮೂರ್ತಿ ಶಿಲ್ಪಕಲೆ ಚಿನ್ನಪ್ಪ ಅವರ ಕೈಯಿಂದ ಕ್ಯಾನ್ವಾಸ್ ನಲ್ಲಿ ಮೂಡಿದೆ. ಹಾಗೆಯೇ ಮದವುಕ್ಕಿದ ಆನೆಯ ಚಿತ್ರ, ಒರಿಸ್ಸಾದ ಕೊನಾರ್ಕ್ ದೇಗುಲದ ಎದುರು ಭರತನಾಟ್ಯ ಮಾಡುತ್ತಿರುವ ಯುವತಿ, ಹಂಪಿಯ ಮುಖ್ಯದ್ವಾರದ ಎದುರು ನೀರು ತೆಗೆದುಕೊಂಡು ಹೊಗುತ್ತಿರುವ ಹೆಂಗಸರ ಚಿತ್ರ,ಕೇರಳದ ತ್ರಿಚಿಯಲ್ಲಿರುವ ದೇವಸ್ಥಾನದ ಒಳಾವರಣದ ದಿವ್ಯ ಚಿತ್ರ...ಹೀಗೆ ಮನಸಾರೆ ಬಿಡಿಸಿದ ಚಿತ್ರಗಳೆಲ್ಲವೂ ಮನಸ್ಸಿಗೆ ತಾಕುತ್ತವೆ; ಮನಸಲ್ಲುಳಿಯುತ್ತವೆ.
ಮಾಸ್ಟರ್ ಪೀಸ್..
ಪ್ರದರ್ಶನಕ್ಕೆ ಬಂದಿದ್ದ ಕಲಾ ವಿದ್ಯಾರ್ಥಿಯೊಬ್ಬನನ್ನು ಮಾತಿಗೆಳೆದರೆ, ಈ ಚಿತ್ರಗಳೆಲ್ಲಾ ಮಾಸ್ಟರ್ ಫೀಸ್ ಗಳು ಸಾರ್.. ಸುಲಭಕ್ಕೋಲಿಯೋ ಕಲೆಯಲ್ಲ ಇದು... ಎನ್ನುತ್ತಾನೆ.
ಪ್ರತಿ ಚಿತ್ರಗಳಲ್ಲೂ ಅವರಿದ್ದಾರೆ...
ಚಿತ್ರಗಳನ್ನು ವೀಕ್ಷಿಸಿದ ರಂಗಭೂಮಿ ಕಲಾವಿದೆ ಬಿ.ಜಯಶ್ರೀ... ಇಲ್ಲಿನ ಎಲ್ಲಾ ಚಿತ್ರಗಳಲ್ಲೂ ನನಗೆ ಚಿನ್ನಪ್ಪ ಅವರು ಇದ್ದ ರೀತಿಯೆ ಕಾಣುತ್ತಿದೆ.. ಇಲ್ಲಿನ ಕೆಲವು ಚಿತ್ರಗಳಲ್ಲಿ ಬೌಧ್ಧ ಬಿಕ್ಕುಗಳಿದ್ದಾರೆ..ರಾಜನಿದ್ದಾನೆ..ಪೂಜಾರಿ ಇದ್ದಾನೆ..ಆದರೆ ಅವರೆಲ್ಲರೂ ನೆಪ ಮಾತ್ರ ನಿಜವಾಗಿಯೂ ಅಲ್ಲಿರುವುದು ಚಿನ್ನಪ್ಪ ಎಂದು ಹೇಳುತ್ತಾರೆ.
No comments:
Post a Comment
ನಿಮಗನಿಸಿದ್ದು....