Sunday, September 5, 2010

ನೀನು ನಮ್ಮವನಲ್ಲ... ನಿನ್ನ ಗೆಲುವು ಮಾತ್ರವೇ ನಮ್ಮದು !

ಹಣ, ವರ್ಚಸ್ಸು, ರಾಜಕೀಯ ಪ್ರಭಾವ ಇಷ್ಟು ಇದ್ದ ಮಾತ್ರಕ್ಕೆ ಡಾಕ್ಟರ್‌ಗಳೆನ್ನಿಸಿಕೊಳ್ಳುತ್ತಿರುವ ರಾಜಕಾರಣಿಗಳ ಪಟಾಲಂನ ನಡುವೆ ನಿಜಕ್ಕೂ ಅರ್ಹತೆಯಿರುವ ಶ್ರಮಿಕ, ಪ್ರತಿಭಾನ್ವಿತ ವ್ಯಕ್ತಿಗಳು ತೆರೆಯ ಹಿಂದೆಯೇ ಉಳಿಯುತ್ತಿದ್ದಾರೆ. ಯಾವುದೋ ವಿದೇಶೀ ವಿಶ್ವವಿದ್ಯಾಲಯ ಈ ಅಪ್ಪಟ ಪ್ರತಿಭೆಗಳನ್ನೇ  ಬೊಟ್ಟು ಮಾಡಿ ಡಾಕ್ಟರೇಟ್‌ ನೀಡಿದಾಗ, ಪ್ರತಿಭೆಗಳನ್ನು ಗುರುತಿಸಲಾಗದೇ ಕೈಕಟ್ಟಿ ಕೂತು,ಯಾರದೋ ವಶೀಲಿಯ ಕಡತ ತಿದ್ದುತ್ತಿರುವ  ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿಗಳಿಗೆ  ಮಂಗಳಾರತಿ ಆಗಬಹುದು; ವಿಶ್ವನಾಥನ್‌ ಆನಂದ್‌ ಗೆ ಡಾಕ್ಟರೇಟ್‌ ಸಿಕ್ಕಬಹುದು !


ವಿಶ್ವ ಚೆಸ್‌ ರಂಗದಲ್ಲಿ ಆತನದ್ದು ಧೀಮಂತ ಹೆಸರು.. ತನ್ನೀಡಿ ಬಾಳ್ವೆಯನ್ನು ಚೆಸ್‌ಗಾಗಿಯೆ ಮೀಸಲಿಟ್ಟ. ಭಾರತದ ಒಂದು ಆಟಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟವನಿಗೆ ಡಾಕ್ಟರೇಟ್‌ ಕೊಡಬೇಕು ಎಂದು ಒಂದು ವಿ.ವಿ ನಿರ್ಧರಿಸಿದ್ದು  ತಪ್ಪಾ?
ವಿಶ್ವ ನಾಥನ್‌ ಆನಂದ್‌, ಮೂರು ಬಾರಿ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಗೆದ್ದು ಭಾರತದ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ  ಶ್ರೇಷ್ಟ ಕ್ರೀಡಾಪಟು. ಸ್ಪೇನ್‌ ದೇಶದಲ್ಲಿ ನೆಲೆಸುವ ಆತ  ಭಾರತದ ಪ್ರಜೆಯೇ ಅಲ್ಲ ಎಂದು ಅನುಮಾನಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಆರ್‌.ಡಿ.ಸಹಾಯ್‌ ನಂತವರಿಗೆ  ಏನೆನ್ನಬೇಕು ಗೊತ್ತಾಗುತ್ತಿಲ್ಲ!
ಡಿಸೆಂಬರ್‌ 11,1969 ರಂದು ಚೆನೈನಲ್ಲಿ ಜನಿಸಿದ ಆನಂದ್‌ಗೆ ಮೊದಲಿನಿಂದಲೂ ಚೆಸ್‌ ಎಂದರೇ ಜೀವ. ಆನಂದ್‌ ಹೇಳುತ್ತಾರೆ,‘ ನಾನು ಚೆಸ್‌ ಪಂದ್ಯಗಳನ್ನು ಆಡುವಾಗ  ನಾನು ಇಡೀ ದೇಶದ ಪ್ರತಿನಿಧಿಯಾಗಿರುತ್ತೇನೆ. ನನ್ನ ಸೋಲು, ಗೆಲುವು ಎಲ್ಲಾ ಈ ರಾಷ್ಟ್ರಕ್ಕೆ ಮೀಸಲಾಗಿರುತ್ತದೆ. ಆದ್ದರಿಂದ ಪ್ರತಿ ಪಂದ್ಯ ಆಡುವಾಗಲೂ ನಾನು ನನ್ನ  ದೇಶದ ಗೆಲುವನ್ನೇ ಬಯಸುತ್ತೇನೆ ...’ ಈ ಮಾತುಗಳಿಗೆ ಕನಿಷ್ಠ ಗೌರವವನ್ನು ಕೊಡುವ ಸೌಜನ್ಯವೂ ನಮ್ಮವರಿಗಿಲ್ಲವಲ್ಲಾ... ಇಂತಹ ಅಪ್ಪಟ ದೇಶಪ್ರೇಮಿ ಕ್ರೀಡಾಪಟುವಿಗೆ  ಸರ್ಕಾರ  ಆತನ ಪೌರತ್ವದ ಬಗ್ಗೆ ಗುಮಾನಿ ವ್ಯಕ್ತಪಡಿಸಿ ನೀನು ನಮ್ಮವನೇ ಅಲ್ಲ ಎಂದುಬಿಡುತ್ತದಲ್ಲಾ... ಓಲಿಂಪಿಕ್‌ ಮೊದಲಾದ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತೀಯ ಸ್ಪರ್ಧಾಳುಗಳ ಹಿನ್ನೆಡೆಯಾಗುತ್ತಿರುವುದಕ್ಕೆ ಕಾರಣ ಇಲ್ಲಿಯೇ ಇದೆ ಅನಿಸುತ್ತದೆ.
ಮೊನ್ನೆ ಮಂಗಳವಾರ ಹೈದರಾಬಾದ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್‌ ಕಾಂಗ್ರೆಸ್‌ ಆಫ್‌ ಮ್ಯಾಥಾಮೆಟಿಕ್ಸ್ ನಲ್ಲಿ ನೀಡಲು ಉದ್ದೇಶಿಸಲಾಗಿದ್ದ ಹೈದರಾಬಾದ್‌ ವಿವಿಯ ಗೌರವ ಡಾಕ್ಟರೇಟ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎಚ್‌ಆರ್‌ಡಿ ಅಧಿಕಾರಿಗಳ ಇಂತಹ ಹೇಳಿಕೆಯಿಂದಾಗಿ ಪ್ರಶಸ್ತಿ ನೀಡಲಾರದಂತಾಯಿತು.
ಇಂತಹ ಪ್ರಶಸ್ತಿಗಳಿಂದಾಗಿ ಆತನಿಗೆ ಎನೂ ಆಗಬೇಕಾದದ್ದಿಲ್ಲ. ಆದರೆ ಎಷ್ಟೇ ಪ್ರಶಸ್ತಿ ಬಂದರೂ ತವರಿನ ಪ್ರಶಸ್ತಿ ಒಂದು ಪಟ್ಟು ಹೆಚ್ಚೇ ಗೌರವ ಮೂಡಿಸುತ್ತದೆ. ಆ ಕಾರಣಕ್ಕಾಗಿಯೇ ಆನಂದ್‌ ಇದನ್ನು  ಸ್ವೀಕರಿಸಲು ಒಪ್ಪಿಕೊಂಡಿದ್ದರು. ಈಗ ಕೊಟ್ಟರೂ ಬೇಡ ಎನ್ನುವ ಸ್ಥಿತಿ ಅವರದ್ದು...
ಪದವಿಯ ನೀಡುವ ಬಗ್ಗೆ   ಆ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಒಂದು ಕ್ಷಣ ಆನಂದ್‌ ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಆಶ್ಚರ್ಯಚಕಿತವಾಗುವುದರ ಜೊತೆಗೆ ಬೆಚ್ಚಿಬಿದ್ದರು.  ಇದೇ ಪ್ರಶ್ನೆಯನ್ನು ನಿಮ್ಮ  ಸೋನಿಯಾ ಗಾಂಧಿಗೆ ಕೇಳಿ ಎಂದು  ಚೆಸ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು... ಮತ್ತೂ ಆನಂದ್‌ ಭಾರತೀಯನೆಂಬುದನ್ನು ಖಾತ್ರಿ ಮಾಡಲು ಇನ್ನೂ ಸಮಾಲೋಚನೆ ನಡೆಸಬೇಕು ಎಂದು ಅಧಿಕಾರಿಗಳು ಕೈಚೆಲ್ಲಿ ಕುಳಿತಾಗ ,ಆನಂದ್‌ ಪತ್ನಿ ಅರುಣಾ ಭಾರತೀಯ  ಪೌರತ್ವದ ದಾಖಲೆಗಳನ್ನು ಹೇಳುವ  ಭಾರತೀಯ ಪಾಸ್‌ಪೋರ್ಟ್‌ ವಿವರಗಳನ್ನು ಫ್ಯಾಕ್ಸ್ ಮೂಲಕ ಕಳುಹಿಸಿದರೂ ಅತ್ತ ಗಮನ ಹರಿಸುವ ತಾಳ್ಮೆಯನ್ನು ತೋರಲಿಲ್ಲ ಅಧಿಕಾರಿಗಳು.
 ತಿರಂಗಾ ನೆರಳಲ್ಲಿ ಆಡುವುದೇ ಖುಷಿ...
 ‘ನನಗೆ ಪ್ರಶಸ್ತಿ ಪುರಸ್ಕಾರ ಎಲ್ಲವೂ ನಂತರದ ಪ್ರಶ್ನೆ. ನನ್ನ ದೇಶದ ತಿರಂಗಾ ಅಡಿಯಲ್ಲಿ ಆಡುತ್ತಿರುವುದಕ್ಕೆ ನನಗೆ ಸಂತಸವಿದೆ. ಮತ್ಯಾವುದೂ ನನಗೆ  ಇಷ್ಟು ಖುಷಿ ಕೊಡಲಾರದು. ನನ್ನ ದೇಶವೇ ನನಗೆ ಬಹು ದೊಡ್ಡ ಪ್ರಶಸ್ತಿ’ ಎನ್ನುತ್ತಾರೆ ಆನಂದ್‌.
ಇಷ್ಟೆಲ್ಲಾ ಆದ ಬಳಿಕ  ಕ್ಷಮೆ ಕೇಳಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್‌ ಸಿಬಲ್‌ ‘ಮತ್ತೊಂದು ಕಾರ್ಯಕ್ರಮದಲ್ಲಿ  ಪದವಿ ನೀಡುತ್ತೇವೆ ’ ಎಂದು ಎಳೆಮಕ್ಕಳ ಕಣ್ಣೀರೊರೆಸುವಂತೆ ಮಾತನಾಡಿದ್ದಾರೆ. ಅಷ್ಟಕ್ಕೂ ಎಂದಿಗೂ ಪ್ರಶಸ್ತಿ, ಪದವಿಗಳ ಆಸೆಗೆ ಬಿದ್ದು  ಆಟದ ನಿಜವಾದ ಸಂತಸವನ್ನು ಹಾಳು ಮಾಡಿಕೊಳ್ಳಲು ಒಪ್ಪದ ಮಾಸ್ಟರ್‌ ಸಹಜವಾಗಿಯೇ ತನಗೆ ಆ ಪದವಿಯೇ ಬೇಡ ಎಂದರೂ, ಅಭಿಮಾನಿಗಳ ಒತ್ತಾಯದ ಮೇಲೆ ಸ್ವೀಕರಿಸುವ ಮಾತನಾಡಿದ್ದಾರೆ.
ಇಲ್ಲಿರುವುದು ನಮ್ಮನೆ ಅಲ್ಲಿರುವುದು ಸುಮ್ಮನೆ...
ಆನಂದ್‌ ಹೆಚ್ಚಾಗಿ ಸ್ಪೇನ್‌ ದೇಶದಲ್ಲಿ ವಾಸಿಸಲು ಕಾರಣವೂ ಇದೆ. ವಿಶ್ವ ಚೆಸ್‌ನ ಹೆಚ್ಚಿನ ಚಾಂಪಿಯನ್‌ ಷಿಪ್‌ ಪಂದ್ಯಾಟಗಳು ನಡೆಯುವುದು, ಬೆಲ್ಜಿಯಂ(ಫಿಡೆ ವಿಶ್ವ ಚಾಂಪಿಯನ್‌ ಟೂರ್ನಮೆಂಟ್‌), ಮ್ಯಾಡ್ರಿಡ್‌,ಸ್ವಿಜರ್‌ಲ್ಯಾಂಡ್‌ ಸೇರಿದಂತೆ ಮುಂತಾದ ಕೆಲವು ಯೂರೋಪ್‌ ದೇಶಗಳು ಹಾಗೂ ರಷ್ಯಾ,ಅಮೇರಿಕದಲ್ಲಿ ನಡೆಯುತ್ತದೆ. ಆ ಕಾರಣಕ್ಕಾಗಿ ಅವರು ಆ ದೇಶದಲ್ಲಿ ನೆಲೆಸಿದ್ದಾರೆಯೇ ಹೊರತೂ ಬೇರೇ ಯಾವ ಮೋಜಿಗೂ ಅಲ್ಲ. ಇದನ್ನು ಈ ರಾಜಕಾರಣಿಗಳು ಅರಿತ್ತದ್ದರೆ ಆತನಿಗೆ ಅವಮಾನವಾಗುವ ಸಂದರ್ಭವೆ ಬರುತ್ತಿರಲಿಲ್ಲ.
ಜಾಗತೀಕರಣದಲ್ಲಿ ಇದೆಲ್ಲಾ ಮಾಮೂಲಿ
ಇಂದು ವಿಶ್ವವೆ ಒಂದು ಗ್ರಾಮವಾಗಿರುವ ಸಂದರ್ಭದಲ್ಲಿ  ದೇಶ- ದೇಶಗಳ ನಡುವಿನ ಗಡಿ ಶಿಥಿಲವಾಗುತ್ತಿದೆ.   ಇನ್ನೊಂದು ದೇಶದಲ್ಲಿದ್ದುಕೊಂಡು ಸ್ವಂತ ದೇಶಕ್ಕೆ ಆಡುವ ಪರಿಪಾಠ ಸಾಮಾನ್ಯವಾಗಿದೆ. ಅದಕ್ಕಾಗಿ ದೇಶದ ಹೆಸರಾಂತ ಕ್ರೀಡಾಪಟುಗಳನ್ನು  ಆತ ನಮ್ಮ ದೇಶದ ಪ್ರಜೆಯೇ ಅಲ್ಲ ಎಂದು ಅವಮಾನಿಸುವುದು ಸರಿಯಲ್ಲ.

No comments:

Post a Comment

ನಿಮಗನಿಸಿದ್ದು....