Sunday, September 19, 2010

ನಾಲ್ಕು ಚಿತ್ರ, ನೂರಾರು ಚರ್ಚೆಗಳು...

ತನ್ನ ರಾಜ್ಯಕ್ಕೆ ಇರುವ ಸಮಸ್ಯೆಗಳನ್ನೇ ಚಿತ್ರ ಮಾಡಲು ಆಸಕ್ತಿ ತೋರಿಸಿ, ಅದನ್ನು ಸರ್ಕಾರದ ಮನಗಾಣಿಸುವುದರಿಂದಲೇ ದೇಶದ ಹೆಸರಾಂತ ನಿರ್ದೇಶಕರಿಗಿಂತ  ಶೆಟ್‌ಗಾಂವಕರ್ಎಂಬ ಯುವಕ  ಆಪ್ತವಾಗುತ್ತಾನೆ.
ಮುರಿದು ಹೋದ ಬದುಕು....

"ಪಾಲ್ತಡಾಚೋ ಮುನಿಸ್‌". ಗೋವಾದ ಯುವ ನಿರ್ದೇಶಕ ಲಕ್ಷ್ಮೀಕಾಂತ್‌ ಶೆಟ್‌ಗಾಂವಕರ್ ಚಿತ್ರ. 2002ರಲ್ಲಿ ಚಿತ್ರರಂಗಕ್ಕೆ ಬಂದರೂ  ಇಲ್ಲಿಯವರೆಗೂ ಆತ ಮಾಡಿದ್ದು ನಾಲ್ಕೇ ಚಿತ್ರ.ಆದರೆ ಯಾವ ಚಿತ್ರವೂ ತೆಗೆದು ಹಾಕುವಂತಿಲ್ಲ. ಕಮರ್ಶಿಯಲ್‌ ಮಸಾಲಾ ಮಿಶ್ರಣಗಳಿಂದ ದೂರವುಳಿದಿರುವ  ಈತನ ಚಿತ್ರಗಳು ಆಪ್ತವಾಗುತ್ತವೆ.
ಬಯಾಗ್ರಫಿ...
ಗೋವಾದ ಸಾಲ್ಸೆಟ್‌ನ ಕನ್‌ಕೊಲಿಮ್‌ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಶೆಟ್‌ಗಾಂವಕರ್‌ಗೆ  ಸಿನಿಮಾ ಮಾಧ್ಯಮದ ಮೇಲೆ ವಿಪರೀತ ಆಸಕ್ತಿ. ಹಾಗಾಗಿಯೇ  ಗೋವಾದ ಕಲಾ ಅಕಾಡೆಮಿಯಲ್ಲಿ ಥಿಯೇಟರ್ ಆಟ್ì  ಕುರಿತಂತೆ ಪದವಿ ಪೂರೈಸಿ, ನಂತರ ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ ನಟ ಹಾಗೂ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾನೆ. ಅಷ್ಟರಲ್ಲಾಗಲೇ ಸಮಾಜದಲ್ಲಿರುವ ಸಮಕಾಲೀನ ಸಮಸ್ಯೆಗಳಿಗೆ ಸಿನಿಮಾ ಮಾಧ್ಯಮದ ಮೂಲಕ ಉತ್ತರಿಸಬೇಕು ಎಂದು ಬಹುಕಾಲದಿಂದ ಕಾಡುತ್ತಿದ್ದ ಕನಸು ನನಸಾಗಲು ಮಹೂರ್ತ ಕೂಡಿ ಬರುತ್ತದೆ. ಇದೇ ಕಾರಣಕ್ಕೆ  ಮುಂಬೈಗೆ ಜಿಗಿಯುತ್ತಾರೆ. ಅಲ್ಲಿ ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕ, ಚಿತ್ರಕಥೆ ಬರೆಯುವವರಾಗಿ ಪಡೆದ ಅನುಭವಕ್ಕೆ ಅವರು ಈಗಲೂ ಕೃತಜ್ಞತೆ ಸಲ್ಲಿಸುತ್ತಾರೆ.
ನಾಲ್ಕು ವರ್ಷದ ಅನುಭವದ ಮೊದಲ ಚಿತ್ರ..
ಈ ದಿಸೆಯಲ್ಲಿ ತನ್ನ ಸ್ವಂತ ಊರು ಗೋವಾಕ್ಕೆ ಆಗಮಿಸಿದ ಲಕ್ಷ್ಮೀಕಾಂತ್‌ ಅಲ್ಲಿ ತನ್ನದೇ ಮನಸ್ಥಿತಿಯುಳ್ಳ  ಸ್ನೇಹಿತರನ್ನು ಸೇರಿಸಿಕೊಂಡು "ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಆಫ್‌ ಗೋವಾ" ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಗೋವಾದಲ್ಲಿ ಸಿನಿಮಾ ಕ್ರಾಂತಿಯನ್ನೇ ಎಬ್ಬಿಸಿತು. ತನ್ನ ಸುತ್ತಮುತ್ತಲ ಘಟನೆಗಳನ್ನು ತನ್ನ ಕಲ್ಪನೆಯ ಮೂಲಕ ದೃಶ್ಯ ಸಂಯೋಜಿಸಿ "ಸೀ ಸೈಡ್‌ ಸ್ಟೋರಿ" ಚಿತ್ರ ಮಾಡಿದರು. ಈ ಚಿತ್ರ ಮುಂಬೈ ಇಂಟರ್ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಉತ್ತಮ ಕಲ್ಪನಾತ್ಮಕ ಚಿತ್ರೆವೆಂದು ಪ್ರಶಸ್ತಿ ಗಳಿಸಿತು. ಕೇವಲ 45 ನಿಮಿಷದ ಚಿತ್ರವಾಗಿದ್ದ  ಇದು  ಅಲ್ಲಿನ ಜನರ ಮನಸೂರೆಗೊಂಡಿತು. ಗೋವಾದಲ್ಲಿ ಈ ಚಿತ್ರದಿಂದ ಶೆಟ್‌ಗಾಂವಕರ್ ಜನಮನ್ನಣೆಗೆ ಪಾತ್ರರಾದರು.

ವೇಶ್ಯಾವಾಟಿಕೆ ಬಗ್ಗೆ , ಸಮಾಜದಲ್ಲಿ ಈ ಕತ್ತಲವೃತ್ತಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ  ಕಥೆ ಹೊಂದಿದ್ದ  Let's talk about it..ಚಿತ್ರವನ್ನು ಗೋವಾದ ಕಾಲೇಜುಗಳಲ್ಲಿ, ಪಂಚಾಯತ್‌ಗಳಲ್ಲಿ, ಹಾಗೇ ಸರ್ಕಾರಿ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ  ಪ್ರದರ್ಶನ ಮಾಡಲಾಯಿತು.
ಅಂತಾರಾಷ್ಟ್ರೀಯ ಭಾರತೀಯ ಚಿತ್ರೋತ್ಸವ 2004ರಿಂದ ಗೋವಾದಲ್ಲಿ ಪ್ರತೀ ವರ್ಷ ನಡೆಸಬೇಕೆಂದು  ಅಲ್ಲಿನ ಸರ್ಕಾರ ತೀರ್ಮಾನಿಸಿದಾಗ  ಗೋವಾದಲ್ಲಿ ಮೊದಲ ಬಾರಿಗೆ ಚಲನಚಿತ್ರಗಳ ಬಗ್ಗೆ ಚರ್ಚೆ ಆರಂಭವಾಯಿತು. ಕೊಂಕಣಿ ಚಿತ್ರಗಳ ಸಣ್ಣ ಮಾರುಕಟ್ಟೆಯಿಂದ ಶೆಟ್‌ಗಾಂವಕರ್ 2004ರಲ್ಲೇ ಮಾಡಿದ್ದ ಚಿತ್ರವನ್ನು ಬಿಡುಗಡೆ ಮಾಡಲಾಗಲಿಲ್ಲ.
ಎಷ್ಟೋ ಬಾರಿ ಶೆಟ್‌ಗಾಂವಕರ್ ಚಿತ್ರಕಥೆಗಳು ಸರ್ಕಾರದ ಮನಗೆಲ್ಲಲು ವಿಫಲವಾಯಿತು.ಕಷ್ಟಪಟ್ಟಿದ್ದಕ್ಕೆ ಬೆಲೆ ಇದೆ ಎನ್ನುವಂತೆ 2009 ರಲ್ಲಿ ನಿರ್ದೇಶಿಸಿದ ಪಾಲ್ತಡಾಚೋ ಮಾನಿಸ್‌ ಇಡಿ ಜಗತ್ತಿನ ಗಮನ ಸೆಳೆದಿದೆ. ಈ ಚಿತ್ರಕ್ಕೆ 2009ರ ಟೋರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ FIPRESCI ಪ್ರಶಸ್ತಿ ಗಳಿಸಿತು. ಕೊಂಕಣಿ ಭಾಷೆಯ ಚಿತ್ರಗಳು ಪ್ರದರ್ಶನಗೊಳ್ಳುವುದೆ ಸಾಧನೆ ಅನ್ನುವಂತಿದ್ದ ಕಾಲದಲ್ಲಿ ಶೆಟ್‌ಗಾಂವಕರ್ ಚಿತ್ರ ಪ್ರಶಸ್ತಿ ಸಹ ಗಳಿಸಿತ್ತು. ನಂತರ ಹಾಂಗ್‌ಕಾಂಗ್‌,ಕೈರೋ, ಮುಂಬೈ ಮುಂತಾದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರದಿಂದ ಗೋವಾದಲ್ಲಿ ಸಿನಿಮಾ ಕುರಿತಾದ ಹೊಸ ಚಳುವಳಿಯೆ ಆರಂಭವಾಯಿತು. ಸಿನಿಮಾಗಳ ಬಗ್ಗೆ ಗೋವಾದ ಜನತೆ ಆಸಕ್ತಿ ಹಚ್ಚಿಸಿದ ಹಾಗೂ ಆ ಕ್ಷೇತ್ರದಲ್ಲಿನ ಆತನ ಸಾಧನೆಗೆ 2009ರ ಅಕ್ಟೋಬರ್ 2 ರಂದು ಗೋವಾ ಸರ್ಕಾರ ಆತನಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಪಾಲ್ತಡಾಚೋ ಚಿತ್ರ 2009ರ ಇಂಡಿಯನ್‌ ಪನೋರಮಾದಲ್ಲಿ ಮೊದಲ ಚಿತ್ರವಾಗಿ ಪ್ರದರ್ಶಿತವಾಯಿತು. ಇದರಿಂದ ಭಾರತದಲ್ಲಿ ಹೊಸ ಸಿನಿಮಾ ಕಲ್ಚರ್ ಬೆಳವಣಿಗೆಗೊಂಡಿತು.
ಪಾಲ್ತಡಾಚೋ ಮಾನಿಸ್‌ನಲ್ಲಿ  ಅಂಥದ್ದೇನಿದೆ...
ಗೋವಾ ಮತ್ತು  ಕರ್ನಾಟಕದ ಗಡಿ ಭಾಗದ ಪಶ್ಚಿಮಘಟ್ಟದ ಸುಂದರ ಪರಿಸರದಲ್ಲಿ  ಚಿತ್ರಿತವಾದ ಈ ಚಿತ್ರ, ಸಭ್ಯ ರೋಮ್ಯಾನ್ಸ್ ನ ಕಲಾತ್ಮಕ ಸಿನಿಮಾ. ಚಿತ್ರದ ನಾಯಕ ವಿನಾಯಕ್‌ ಫಾರೆಸ್ಟ್ ಗಾರ್ಡ್‌ ಪಶ್ಚಿಮ ಘಟ್ಟದ ಕಾಡುಗಳನ್ನು ನೋಡಿಕೊಳ್ಳುತ್ತಾ ಒಬ್ಬಂಟಿಯಾಗಿ ಬರಡು ಜೀವನ ಬಾಳುತ್ತಿದ್ದಾನೆ. ಆ ಕಾಡಿಗೆ ಸಾಗುವಾನಿ ಮರದ ಕೆಲಸಕ್ಕಾಗಿ ಬರುವ ಕೆಲಸಗಾರರೊಂದಿಗೆ ಮಾತ್ರ ಆತನ ಮಾತುಕತೆ... ಜನರ ಒಡನಾಟವೇ ಆತನಿಗಿಲ್ಲ. ಆ ದಟ್ಟ  ಆ ಕಾಡಿನಲ್ಲಿ ಆತನಿಗೆ ನೆನಪುಗಳೆಂದು ಉಳಿದುಕೊಂಡಿರುವುದು  ಸತ್ತ ತನ್ನ ಹೆಂಡತಿಯ ಬಗ್ಗೆ ಮಾತ್ರ.ಆ ನೆನಪೇ ಆತನನ್ನು ಇನ್ನೂ ಬದುಕಿಸಿದೆ.
ಆತ ಉಳಿದುಕೊಂಡಿರುವ ಮನೆಯಲ್ಲಿ ಅಕ್ಕ ಪಕ್ಕ ಮಾನಸಿಕ ಹತೋಟಿ ಕಳೆದುಕೊಂಡ ಹುಡುಗಿ. ಮನುಷ್ಯರ ಸಂಪರ್ಕವೇ ಇಲ್ಲದ ಆತನಿಗೆ ಅವಳ ಸಂಪರ್ಕ ಸಹ್ಯವಾಗುತ್ತದೆ. ತನ್ನ ಊಟದಲ್ಲಿ ಅವಳಿಗೂ ಅರ್ಧ ನೀಡುತ್ತಾನೆ. ಒಂಚೂರು..ಒಂಚೂರು ಎಂಬಷ್ಟು ಆಪ್ತರಾಗುವ ವೇಳೆಗೆ ಅಲ್ಲಿಯೇ ಪಕ್ಕದ ಊರಿನಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಗುಸು ಗುಸು ಆರಂಭವಾಗಿರುತ್ತದೆ. ಆದರೆ ವಿನಾಯಕ್‌ ಅದಕ್ಕೆ ಗಮನ ನೀಡುವುದಿಲ್ಲ ಇವರ ಸಂಬಂಧ ಆಕೆ ಗರ್ಭೀಣಿಯಾಗುವಲ್ಲಿಗೆ ತಲುಪುತ್ತದೆ. ಮುಂದೆ ಜನ ಆತನನ್ನು ಕಾಣುವ ಪರಿ ಇವೆಲ್ಲವನ್ನು ಶೆಟ್‌ಗಾಂವಕರ್ ಸುಂದರ ಚಿತ್ರವಾಗಿಸಿದ್ದಾರೆ.
ಈ ಚಿತ್ರದಲ್ಲಿ ಒಂದು ಹಗ್ಗದ ಸೇತುವೆಯ ದೃಶ್ಯ ಇದೆ. ಈ ನಾಜೂಕು ಸೇತುವೆಯೇ ಆ ದಟ್ಟ ಕಾಡಿಗೂ ಸೋ ಕಾಲ್ಡ್ ನಾಗರೀಕತೆ ಇರುವ ಜನಾಂಗಕ್ಕೂ ಇರುವ ಏಕೈಕ ಕೊಂಡಿ. ಈ ಚಿತ್ರದ ಚಿತ್ರಕಥೆಗಾಗಿ ಬ್ರಿಟಿಷ್‌ ಕೌನ್ಸಿಲ್‌ ಪ್ರಶಸ್ತಿ ನೀಡಿದೆ.
ಇಲ್ಲಿಯವರೆಗೂ ಮಾಡಿದ್ದು ನಾಲ್ಕು ಚಿತ್ರಗಳು..ಗೋವಾದಲ್ಲಿ ಚಿತ್ರ ಮಾಡಿದರೆ ಅಲ್ಲಿ ಚಿತ್ರಮಂದಿರದ್ದೇ ಸಮಸ್ಯೆ ಆದರೆ ಶೆಟ್‌ಗಾಂವಕರ್ ತಮ್ಮ ಚಿತ್ರವನ್ನು ಹಳ್ಳಿ ಮಂದಿಗೆ ವೀಡಿಯೋ ಪ್ರೊಜೆಕ್ಷನ್‌ ಮೂಲಕ ತೋರಿಸುತ್ತಾರೆ. ಪ್ರತಿ ಹಳ್ಳಿಗಳಲ್ಲೂ ತನ್ನ ಚಿತ್ರಗಳ ಬಗ್ಗೆ ಮಾತನಾಡುವಂತಾಗಬೇಕು, ಹಾಗೇ ಸಿನಿಮಾಗಳ ಬಗ್ಗೆ ಅವರಲ್ಲೂ ಕನಸುಗಳು ಮೂಡಬೇಕು ಎಂದು ಶೆಟ್‌ಗಾಂವಕರ್ ಹೇಳುತ್ತಾರೆ.
ಆತ ಮಾಡಿದ್ದು ನಾಲ್ಕೇ ಚಿತ್ರ ಅದರೆ ಅತನ ಚಿತ್ರಗಳ ಬಗ್ಗೆ ಗೋವಾದಲ್ಲಿ ದಿನವೂ ನೂರಾರು ಚರ್ಚೆಗಳು ನಡೆಯುತ್ತವೆ. ಒಂದು ಭಾಷೆ ಬೆಳೆಯುವಲ್ಲಿ ಸಿನಿಮಾ ಮಾಧ್ಯಮದ ಬೆಳವಣಿಗೆ ಅಷ್ಟೇ ಪ್ರಮುಖವಾದದ್ದು,ತನ್ನ ರಾಜ್ಯಕ್ಕೆ ಇರುವ ಸಮಸ್ಯೆಗಳನ್ನೇ ಚಿತ್ರ ಮಾಡಲು ಆಸಕ್ತಿ ತೋರಿಸಿ, ಅದನ್ನು ಸರ್ಕಾರದ ಮನಗಾಣಿಸುವುದರಿಂದಲೇ ದೇಶದ ಹೆಸರಾಂತ ನಿರ್ದೇಶಕರಿಗಿಂತ  ಶೆಟ್‌ಗಾಂವಕರ್ಎಂಬ ಯುವಕ  ಆಪ್ತವಾಗುತ್ತಾನೆ.

ಹೊಸ ದಿಗಂತ ಪತ್ರಿಕೆಯಲ್ಲಿ ಸೆಪ್ಟಂಬರ್ 19 ರಂದು ಬರೆದ ಬರಹ

No comments:

Post a Comment

ನಿಮಗನಿಸಿದ್ದು....