Friday, December 31, 2010

ನದಿಗಳನ್ನು ಪ್ರೀತಿಸುವವನು!

ಚಾರಣ, ಪ್ರವಾಸ ಎಂದ ತಕ್ಷಣ ಬೆಟ್ಟ, ಗುಡ್ಡ ಹತ್ತೋದು. ಯಾವುದೋ ವಿಶೇಷ ಜಾಗಕ್ಕೆ ಹೋಗಿ ಒಂದೆರಡು ದಿನ ಹಾಯಾಗಿ ಇದ್ದು ಬರೋದು...ಇವಿಷ್ಟು ಬಿಟ್ಟರೆ, ಇನ್ನೇನೂ ನೆನಪಾಗದು. ಆದರೆ, ಸ್ವಿಜ್ಜರ್ಲೆಂಡಿನ ಆಂಡಿ ಲೆಹ್ಮನ್‌ಗೆ ಪ್ರವಾಸ ಎಂದರೆ ನದಿಗಳನ್ನು ದಾಟುವುದು, ಅವುಗಳ ವಿಶೇಷತೆಯನ್ನು ತಿಳಿಯುವುದು, ಅಲ್ಲಿನ ನಾಗರಿಕತೆಯನ್ನು ಕಲಿಯುವುದು...! ಈಗಾಗಲೇ ಪ್ರಪಂಚದಾದ್ಯಂತ ನದಿಗಳ ಪ್ರವಾಸ ಮಾಡಿರುವ ಈತ ಭಾರತದ ನದಿಗಳನ್ನೂ ಬಿಟ್ಟಿಲ್ಲ.


ನದಿಯೊಂದು ಸತ್ತರೆ, ನಾಗರೀಕತೆಯೇ ಸತ್ತಂತೆ. ರಸ್ತೆಗಳು ಸಾವುಗಳನ್ನು ಸೃಷ್ಟಿಸುತ್ತವೆ. ನದಿಗಳು ಜೀವಗಳನ್ನು ಉಳಿಸುತ್ತವೆ. ಈ ಪ್ರಪಂಚವನ್ನು ಮುಕ್ಕಾಲು ಭಾಗ ನೀರು ಆವರಿಸಿದ್ದರೂ, ಕುಡಿಯುವ ನೀರಿಗಾಗಿ ಹಾಹಾಕಾರ ಇಂದಿಗೂ ಇದೆ. ಎಲ್ಲಿ ತನಕ ಮನುಷ್ಯನಿಗೆ ನೀರು ಮುಖ್ಯವೋ, ಅಲ್ಲಿ ತನಕ ನನ್ನ ಪಯಣ -ಆಂಡಿ ಲೆಹ್ಮನ್

ಅವನ ಅಪ್ಪ ಮೀನುಗಾರ. ನದಿ, ಸಮುದ್ರಗಳು ಇವರಿಗೆ ಅನ್ನದ ಬಟ್ಟಲು. ಅಪ್ಪ ನದಿ ದಂಡೆಯಲ್ಲಿ ಮೀನಿಗಾಗಿ ಬಲೆ ಬೀಸುತ್ತಿದ್ದಾಗ ಆ ಪುಟ್ಟ ಹುಡುಗ ಅಚ್ಚರಿಯ ಕಣ್ಣುಗಳಿಂದ ಅಪ್ಪನನ್ನೇ ದಿಟ್ಟಿಸುತ್ತಿದ್ದ. ಆ ನದಿಗಳಲ್ಲಿ ಬದುಕುವ ಮೀನುಗಳ ಕುರಿತು, ತನ್ನ ಪಾಡಿಗೆ ತಾನು ಹರಿಯುವ ಆ ನದಿಗಳ ಕುರಿತು ಆತನಲ್ಲಿ ಸಹಜ ಕುತೂಹಲ. ತಾನೂ ನದಿಯಲ್ಲಿ ಈಜಬೇಕು. ಆ ನದಿಗಳ ಕುರಿತು ತಿಳಿದುಕೊಳ್ಳಬೇಕು, ಆ ನದಿಗಳ ಸುತ್ತಮುತ್ತ ಬೆಳೆದಿರಿವ ನಾಗರೀಕತೆ ಕುರಿತು ತಿಳಿಯಬೇಕು...ಹೀಗೇ ಆ ಪುಟ್ಟ ವಯಸ್ಸಿನಲ್ಲಿ ಅವನಲ್ಲಿ ನೂರಾರು ಕನಸುಗಳು.
ಅವನೇ ಪ್ರಪಂಚದ ಪ್ರಪಂಚದ ಪ್ರಸಿದ್ಧ ರಿವರ್ ರೈಡರ್ ಆಂಡಿ ಲೆಹ್ಮನ್.

ಇಂದು ಈತನ ಹೆಸರು ಪ್ರಪಂಚಕ್ಕೆ ಚಿರಪರಿಚಿತ. ಸಾವಿರಾರು "ಹುಟ್ಟು" ಹರಿದ ನದಿಗಳಲ್ಲಿ ಈತನ ಪಯಣ ಸಾಗಿದೆ. ಪ್ರಪಂಚದ ಭಯಾನಕ, ಅಪಾಯಕಾರಿ ನದಿಗಳ ಮೇಲೆ ಈತನ ದೋಣಿ ಹರಿದು ಹೋಗಿದೆ. ದಕ್ಷಿಣ ಅಮೇರಿಕಾದ ಜೀವನದಿಗಳಾದ ಆರ್ ನಿಕೋ ಹಾಗೂ ಅಮೆಜಾನ್, ದಕ್ಷಿಣ ಪೂರ್ವ ಏಷ್ಯಾದ ಮೆಕಾಂಗ್, ಚೀನಾದ ಯಾಂಗ್ಟಿ, ಆಫ್ರಿಕಾದ ಜಾಮೆಂಜಿ... ಹಾಗೇ ಭಾರತದ ನದಿಗಳಾದ ಗಂಗಾ, ಬ್ರಹ್ಮಪುತ್ರ ನದಿಗಳಲ್ಲಿ ಈತ ಸಾಗಿ ಬಂದಿದ್ದಾನೆ. ಬರುವ ಹಾದಿಯಲ್ಲೆಲ್ಲಾ ಸಿಗುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿದ್ದಾನೆ. ನದಿಗಳ ಪ್ರಾಮುಖ್ಯತೆ ಬಗ್ಗೆ ಅವರಿಗೆ ವಿವರಿಸಿದ್ದಾನೆ. ನದಿಗಳ ಉಳಿವಿಗೆ ನಾವೇನು ಮಾಡಬೇಕು ಎಂಬುದರ ಬಗ್ಗೆಯು ಈತ ತಿಳಿಸುತ್ತಾನೆ.
ಹೀಗಾಗಿಯೇ ಆಂಡಿಯನ್ನು ವರ್ಲ್ಡ್ ಬ್ಯಾಂಕ್ ಹಾಗೂ ವಿಶ್ವಸಂಸ್ಥೆಯು ನದಿಗಳ ಸಂರಕ್ಷಣೆ ಬಗ್ಗೆ ಹಾಗೂ ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸುವ ರಾಯಭಾರಿಯನ್ನಾಗಿ ನೇಮಿಸಿದೆ.


ಸಾಗಿದ್ದು ಹೇಗೆ?
ಆಂಡಿ ಹುಟ್ಟಿದ್ದು ೧೯೫೪ರಲ್ಲಿ ಸ್ವಿಜರ್‌ಲ್ಯಾಂಡ್‌ನ ಜ್ಯೂರಿಚ್ ಪ್ರಾಂತದಲ್ಲಿ . ನದಿಗಳಲ್ಲಿ ಈಜುವ ಹವ್ಯಾಸ ಈತನಿಗೆ ಅಚ್ಚುಮೆಚ್ಚು, ಸರ್ಫಿಂಗ್, ಹಾಯಿದೋಣಿಯಂತಹ ಸ್ಪರ್ಧೆಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದ. ಕಲಿತ ವಿದ್ಯೆಗೆ ತಕ್ಕ ಕೆಲಸ ಸಿಕ್ಕಿದರೂ ಸಿಕ್ಕ ಕೆಲಸಕ್ಕೆಲ್ಲಾ ಗೋಲಿ ಹೊಡೆದ. ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಒಂದಲ್ಲಾ ಒಂದು ನೆಪ ಹೇಳಿ ಕಾಲು ಕಿತ್ತಿದ್ದ. ಬ್ಯಾಂಕಾಕ್‌ನಲ್ಲಿ ಪುರುಷರ ಬಟ್ಟೆಗಳ ಮಾಡೆಲ್ ಆಗಿ ಕೈತುಂಬಾ ಹಣ ಸಿಗುತ್ತಿದ್ದರೂ ಆ ಕೆಲಸವನ್ನೂ ಬಿಟ್ಟ. ಹವಾಯಿ, ಸ್ವಿಜರ್‌ಲ್ಯಾಂಡ್, ಕೊಲಂಬಿಯಾ, ಅರ್ಜಿಂಟೀನಾ, ಕೆರಿಬಿಯನ್ ಹೀಗೆ ಹಲವಾರು ದೇಶ ಸುತ್ತಾಡಿದರೂ ಮನಸ್ಸಿಗೆ ಒಪ್ಪುವ ಕೆಲಸ ಸಿಗಲಿಲ್ಲ.

ಇದರ ನಡುವೆ ರಸ್ತೆ ಅಫಘಾತವಾಗಿ ಎಂಟು ತಿಂಗಳು ಬೆಡ್‌ರೆಸ್ಟ್. ನಂತರ ಕ್ಯೂಬಾಗೆ ಪಯಣ. ಅಲ್ಲಿ ಬೋಟ್ ತಯಾರಿಕಾ ಕಂಪನಿಯಲ್ಲಿ ಕೆಲಸ. ನದಿಗಳು ಸಮುದ್ರಗಳ ಬಗ್ಗೆ ಮತ್ತೆ ಹೆಚ್ಚಿನ ಆಸಕ್ತಿ."ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು" ಎಂಬಂತೆ ಸಲ್ಲದ ನೆಪ ಹೇಳಿ ಅಲ್ಲಿನ ಕೆಲಸ ಬಿಟ್ಟು ಸ್ಪೇನ್‌ನಲ್ಲಿ ಸಮುದ್ರಯಾನಿಗಳಿಗೆ ಸಹಾಯವಾಗುವ ಪರಿಕರಗಳ ತನ್ನದೇ ಒಂದು "ಶಾಪ್" ಸ್ಥಾಪಿಸಿದ. ಆಗ ಹುಟ್ಟಿದ್ದೇ ವಿಶ್ವ ಪರ್ಯಟನೆಯ ಕನಸು. ಆದರೆ ಸಮುದ್ರದಲ್ಲಿ ಸುಮ್ಮನೆ ಪ್ರಯಾಣ ಮಾಡುವುದಕ್ಕಿಂತ ನದಿಗಳಲ್ಲಿ ಪಯಣಿಸಿ ನದಿಗಳ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವ ನಿರ್ಧಾರ ತಳೆದ. ೨೦೦೩ರಲ್ಲಿ ಆತನ ಕನಸುಗಳು ರೂಪುಗೊಳ್ಳುವ ತನ್ನ ನದಿ ಪರ್ಯಟನೆಯ ಆಸೆ ಈಡೇರುವ ಹಂತ ತಲುಪಿತು.

೨೦೦೩ರಲ್ಲಿ ದಕ್ಷಿಣ ಅಮೆರಿಕಾದ ಆರ್ ನಿಕೋ ನದಿಯಲ್ಲಿ ಹಾಯಿ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ. ಅದರಲ್ಲಿ ಮೂರನೇ ಸ್ಥಾನ ಗಳಿಸಿದ. ಸ್ಪರ್ಧಾತ್ಮಕ ರೇಸ್‌ಗಳಲ್ಲಿ ಭಾಗವಹಿಸಿ ಗೆದ್ದ ಮೊದಲ ಯುರೋಪಿಯನ್ ಎಂಬ ಕೀರ್ತಿಗೂ ಭಾಜನನಾದ. ಮುಂದಿನ ವರ್ಷ ವೆನಿಜುವೆಲಾದಲ್ಲಿ ನಡೆಯಬೇಕಾಗಿದ್ದ ಸ್ಪರ್ಧೆ ರಾಜಕೀಯ ಕಾರಣಗಳಿಗಾಗಿ ಮುಳುಗಿತ್ತು. ಆದರೆ ಆಂಡಿ "ಆರ್ ನಿಕೋ" ನದಿಯಲ್ಲಿ ಅದಾಗಲೇ ಪಯಣ ಆರಂಭಿಸಿದ್ದ. ವಿಶ್ವದ ಅತಿ ಅಪಾಯಕಾರಿ ನದಿಯಲ್ಲಿ ೧೭೦೦ಕಿ.ಮೀ ಕ್ರಮಿಸಿದ. ಈ ನದಿಯಲ್ಲಿ ಕೊಲಂಬಿಯಾ, ವೆನಿಜುವೆಲಾ, ಹಾಗೂ ಬ್ರೆಜಿಲ್ ದೇಶಗಳನ್ನು ಸುತ್ತಿದ. ಈತನ ಇಂತಹ ಹುಚ್ಚಾಟಗಳೇ ಆತನಿಗೆ ಬದುಕಿನಲ್ಲಿ ನೆಲೆ ಕಲ್ಪಿಸಿತು. ಆತನ ಯಾನಗಳಿಗೆ ಸ್ಪಾನ್ಸರ್ ಗಳು ದೊರೆತರು. ನಂತರ ೬ ವಿವಿಧ ದೇಶಗಳನ್ನು ಸಂಪರ್ಕಿಸುವ ೨ ಸಾವಿರ ಕಿ.ಮೀ ಉದ್ಧದ ನದಿಯಲ್ಲಿ ಪಯಣಿಸಿದ. ೨೦೦೮ರಲ್ಲಿ ಆಫ್ರಿಕಾ ದೇಶಗಳಾದ ಜಾಂಬಿಯಾ, ನಮಿಬಿಯಾ, ಬೋಟ್ಸವಾನಾ, ಜಿಂಬಾಬ್ವೆ, ಮೊಜಾಂಬಿಕ್ ದೇಶಗಳನ್ನು ಸಂಪರ್ಕಿಸುವ ೨,೯೦೦ಕಿ.ಮೀ ಉದ್ದದ ಜಾಮೆಂಜಿ ನದಿಯಲ್ಲಿ ಪಯಣಿಸಿ, ನದಿಯಲ್ಲಿ ಪಯಣಿಸುವಾಗ ಕಂಡ ವಿಚಾರಗಳನ್ನೆಲ್ಲಾ ಆ ದೇಶಕ್ಕೆ ತಿಳಿಸಿದ. ಜಾಮೆಂಜಿಯಂತಹ ಸುಂದರ ನದಿಯಿದ್ದರೂ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿಕಂಡು ಮುಮ್ಮಲ ಮರುಗಿದ.

ಗಂಗಾ ಪಯಣ
ಈತನ ನದಿ ಪಯಣ ೨೦೦೯ರಲ್ಲಿ ಗಂಗಾ ನದಿಯಲ್ಲಿ ನಡೆಯಿತು. ಈ ಸಮಯದಲ್ಲಿ ಈತನ ಯಾನಕ್ಕೆ ಇನ್ನಷ್ಟು ಜನ ಕೈಜೋಡಿಸಿದ್ದರು. ಗಂಗಾ ನದಿ ಬಗ್ಗೆ ಹೇಳುವ ಆತ " ನಾ ಕಂಡ ವಿಶ್ವದ ಅತೀ ಸುಂದರ ನದಿಗಳಲ್ಲಿ ಗಂಗಾ ನದಿಗೆ ಮೊದಲ ಸ್ಥಾನ. ಆದರೆ ಈ ನದಿಯಲ್ಲಿ ಸಾಗುವಾಗ ಸಿಕ್ಕ ಶವಗಳು ನಮ್ಮನ್ನು ಸ್ವಲ್ಪ ಭಯಗ್ರಸ್ಥರನ್ನಾಗಿ ಮಾಡಿತು. ನಂತರ ಇದು ಪುರಾಣ ಪ್ರಸಿದ್ಧಿ ಎಂದು ತಿಳಿದಾಗ ಸಂತೋಷವಾಯಿತು. ಆದರೆ ಇದೇ ರಿತಿಯಲ್ಲಿ ಕಲುಷಿತವಾಗಿ ನದಿ ಮುಂದುವರಿದರೇ ಮುಂದಿನ ದಶಕದಲ್ಲಿ ಗಂಗಾ ನೀರು ಕುಡಿಯುವ ಭಾಗ್ಯ ಇರಲಾರದು" ಎಂದು ಎಚ್ಚರಿಸುತ್ತಾನೆ.

ಈ ವರ್ಷ ಬ್ರಹ್ಮಪುತ್ರ
2010ರಲ್ಲಿ ಆಂಡಿಯ ನದಿ ವಿಹಾರ ಭಾರತದ ಇನ್ನೊಂದು ಪ್ರಸಿದ್ಧ ನದಿ ಬಹ್ಮಪುತ್ರದಲ್ಲಿ. ೫೫ ದಿನಗಳ ಈ ಯಾತ್ರೆ ಈ ವರ್ಷದ ನವೆಂಬರ್ ಗೆ ಕೊನೆಗೊಂಡಿದೆ. ಟಿಬೆಟ್‌ನಲ್ಲಿನ ಬ್ರಹ್ಮಪುತ್ರ ನದಿ ಮೂಲದಿಂದ ಬಂಗಾಳ ಕೊಲ್ಲಿ ವರೆಗಿನ ಸಂಗಮದವರೆಗಿನ ೨,೮೦೦ಕಿ.ಮೀ. ದೂರವನ್ನು ಆಂಡಿ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ತಲುಪಿದ್ದಾನೆ. ಹೆಚ್ಚಿನ ಯಾನಿಗಳು ಬೆಳಗಿನ ಸಮಯದಲ್ಲಿ ಪಯಣಿಸಿದರೆ ಆಂಡಿ ತಂಡ ಮಾತ್ರ ರಾತ್ರಿ ೮ ರಿಂದ ಬೆಳಿಗ್ಗೆ ೪ರವರೆಗೆ ಪಯಣಿಸುತ್ತಾರೆ. ಬೆಳಿಗ್ಗೆ ವಿಶ್ರಾಂತಿ. ಆಹಾರ ತಯಾರಿಸಲು ಒಬ್ಬನಿದ್ದಾನೆ. ತಾನು ಸಾಗುವ ಹಾದಿಯಲ್ಲಿ ನದಿಗಳ ರಕ್ಷಣೆ ಬಗ್ಗೆ ಹೇಳಿದ್ದಾನೆ. ಆಫ್ರಿಕಾದಲ್ಲಿ ನದಿಯಿದ್ದರೂ ನೀರಿಗಾಗಿ ಹಾಹಾಕಾರ ಪಡುವ ವ್ಯಥೆಯನ್ನು, ನೀರಿನ ಹಸಿವನ್ನು, ಅಲ್ಲಿ ರೆಕಾರ್ಡ್ ಮಾಡಿದ ಚಿತ್ರಣವನ್ನು ಜನರಿಗೆ ತೋರಿಸಿ ನಿಮ್ಮ ನದಿ ಹೀಗಾಗಬಾರದಾದರೇ ನದಿಗಳ ಬಗ್ಗೆ ಎಚ್ಚರ ವಹಿಸಿ ಎನ್ನುತ್ತಾನೆ. ಬ್ರಹ್ಮಪುತ್ರ ನದಿಯ ಪಯಣ ಮಾಡಿ ಈ ನದಿಯನ್ನು ಯಶಸ್ವಿಯಾಗಿ ಯಾನ ಮಾಡಿದ ಮೊದಲಿಗ ಎಂಬ ಕೀರ್ತಿಗೂ ಭಾಜನನಾಗಿದ್ದಾನೆ ಆಂಡಿ. "ನಾನು ನದಿಗಳನ್ನು ಪ್ರೀತಿಸುತ್ತೇನೆ. ನದಿಗಳೇ ನನಗೆ ಜೀವ. ನದಿಗಳ ಸ್ಪರ್ಶವಿಲ್ಲದಿರುವ ಜನಾಂಗ ಜಗತ್ತಿನಲ್ಲೇ ಇಲ್ಲ" ಇದು ಆಂಡಿ ಹೋದಲ್ಲೆಲ್ಲಾ ಜನರಿಗೆ ಹೇಳುವ ಮಾತು.ವಿಹಾರ ಪುರವಣಿಯಲ್ಲಿ ಜನವರಿ 1 ರಂದು ಪ್ರಕಟವಾದ ಬರಹ... ಇಲ್ಲಿ ನೋಡಿ..

ಕಥೆ ಓದಿ, ನಿಮಗೂ ಇಷ್ಟವಾಗಬಹುದು!


ಬಿಹಾರದ ಧರ್‌ಹರಾ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ ಜೊತೆಗೊಂದು ಗಿಡನೂ ಹುಟ್ಟುತ್ತೆ. ಅದೇ ಆ ಹೆಣ್ಣು ಮಗಳ ಭವಿಷ್ಯ. ಆ ಮರದಿಂದ ಬರುವ ಫಸಲಿನಿಂದಲೇ ಮನೆಮಗಳ ಮದುವೆ ನಡೆಯುತ್ತೆ. ಕೇವಲ ಏಳು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಹೆಣ್ಣಿನ ಹೆಸರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳು ಹುಟ್ಟಿವೆ.
ಅದೊಂದು ಪುಟ್ಟ ಊರು. ಇರುವುದು ಏಳು ಸಾವಿರ ಜನ. ಒಪ್ಪೊತ್ತಿಗೆ ನಿತ್ಯ ಕಾಯಕ. ಇಲ್ಲಿ ಹೆಣ್ಣು ಮಗು ಹುಟ್ಟಿದರೆ, ಗಿಡ ಹುಟ್ಟುತ್ತೆ. ಆ ಊರಲ್ಲಿ ಹೊಸ ಗಿಡವೊಂದು ಕಂಡರೆ ಅಲ್ಲೊಬ್ಬಳು ಹೆಣ್ಣುಮಗಳು ಹುಟ್ಟಿದ್ದಾಳೆಂದೇ ಅರ್ಥ.

ಹೌದು, ಇದು ಬಿಹಾರದ ಧರ್ ಹರಾ ಗ್ರಾಮ. ಇಲ್ಲಿ ಹೆಣ್ಣು ಮಗಳು ಹುಟ್ಟಿದರೆ ಐದು ಲಿಚಿ ಮತ್ತು ಮಾವಿನ ಮರಗಳನ್ನು ನೆಡುವುದು ಕಡ್ಡಾಯ. ಇಂದು ಅಲ್ಲಿರುವ ಮಾವು ಮತ್ತು ಲಿಚಿ ಮರಗಳ ಸಂಖ್ಯೆ ಒಂದು ಲಕ್ಷ ಮುಟ್ಟಿದೆ. ಧರ್ ಹರಾ ಗ್ರಾಮದ ಇಂಚಿಂಚೂ ಹಸಿರ ಐಸಿರಿ. ಬಿಹಾರದ ಮಾರುಕಟ್ಟೆಯಲ್ಲಿ ಲಿಚಿ ಮತ್ತು ಮಾವಿನ ಹಣ್ಣುಗಳಿಂದ ಲಕ್ಷಾನುಗಟ್ಟಲೆ ವಹಿವಾಟು. ಇಂದು ಈ ಗ್ರಾಮದ ಜನರು ಇದೇ ಹಣ್ಣುಗಳಿಂದಲೇ ಲಕ್ಷಾಂತರ ರೂಪಾಯಿ ಎಣಿಸುತ್ತಾರೆ. ಮಗಳ ಮದುವೆ ಮಾಡುತ್ತಾರೆ. ಹಾಗಂತ ಇದ್ಯಾವುದೇ ಸರ್ಕಾರ ನಿರ್ಮಿಸಿದ ಯೋಜನೆಯಲ್ಲಿ ಹುಟ್ಟಿ ಬಂದ ಮರಗಳಲ್ಲ. ಬದಲಾಗಿ ಈ "ಹಸಿರ ಐಸಿರಿ" ಕೂಡ ಮನೆಮಗಳ ಬದುಕಿಗಾಗಿ, ಭವಿಷ್ಯಕ್ಕಾಗಿ! ಇದೇ ಕಾರಣಕ್ಕೆ ಈ ಗ್ರಾಮದಲ್ಲಿ ಈವರೆಗೆ ಒಂದೇ ಒಂದು ವರದಕ್ಷಿಣೆ ಪ್ರಕರಣ ಕೂಡ ವರದಿಯಾಗಿಲ್ಲ.

ಮನೆಮಗಳಿಗೊಂದು ಮರ
ಧರ್‌ಹರಾ ಗ್ರಾಮ ಇರುವುದು ಬಿಹಾರದ ಬಾಗಲ್ಪುರ್ ಜಿಲ್ಲೆಯಲ್ಲಿ. ಹೆಣ್ಣು ಮಗು ಹುಟ್ಟಿದರೆ ಗಿಡ ನೆಡಬೇಕೆನ್ನುವುದು ಹಲವಾರು ತಲೆಮಾರುಗಳಿಂದಲೇ ನಡೆದು ಬಂದಿದೆ. ಹಾಗಂತ, ಇಲ್ಲಿಯ ಜನರ ಬಳಿ ಕೇಳಿದರೆ ನಮ್ಮ ತಾತ-ಮುತ್ತಾತ ಮಾಡಿದರೆನ್ನುವುದು ಅಷ್ಟೇ ಗೊತ್ತು. ಒಟ್ಟಿನಲ್ಲಿ ಅಲ್ಲಿ ಹೆಣ್ಣು ಮಗಳ ಹೆಸರಿನಲ್ಲಿ ಮರಗಳು ತಲೆ ಎತ್ತಿವೆ. ಪರಿಸರ ಹಸಿರಾಗಿದೆ. ಹೆಣ್ಣು ಮಗಳ ಬದುಕು ಹಸನಾಗುತ್ತಿದೆ.

ಗಿಡ ನೆಟ್ಟ ಮಾತ್ರಕ್ಕೆ ಕರ್ತವ್ಯ ಮುಗಿಯುವುದಿಲ್ಲ. ಆ ಪುಟ್ಟ ಮಗು ದೊಡ್ಡವಳಾಗುವ ತನಕ ಮಗಳನ್ನು ಬೆಳೆಸಿದಂತೆ ಪ್ರೀತಿಯಿಂದ ಆ ಗಿಡಗಳನ್ನು ಬೆಳೆಸುತ್ತಾರೆ, ಅವುಗಳಿಗೂ ಪ್ರತಿದಿನ ನೀರೆರೆದು ಪೋಷಿಸುತ್ತಾರೆ. ಗಿಡ ದೊಡ್ಡದಾಗಿ ಹೂವು ಬಿಡುವ ಹೊತ್ತಿಗೆ ಮಗಳು ಅಂಬೆಗಾಲಿಕ್ಕುತ್ತಾಳೆ. ಇಂದಿಗೂ ಬಿಹಾರದ ಧರ್ ಹರಾ ಗ್ರಾಮದಲ್ಲಿ ೭-೮ ವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಅಪ್ಪ-ಅಮ್ಮ ನೆಟ್ಟ ಗಿಡಗಳಿಗೆ ತಪ್ಪದೆ ನೀರೆರೆಯುವುದನ್ನು ಕಾಣಬಹುದು. ಮಗಳು ವಯಸ್ಸಿಗೆ ಬರುವ ಮೊದಲೇ ಆ ಮರಗಳು ಫಲ ಕೊಡುತ್ತವೆ.

ಮಗಳ ಹೆಸರಲ್ಲಿ ಅಕೌಂಟ್
ಹಾಗೆ ಮಾರುಕಟ್ಟೆ ಪ್ರವೇಶಿಸುವ ಈ ಹಣ್ಣುಗಳಿಗೆ ಬಿಹಾರದಲ್ಲಿ ಹೆಚ್ಚಿನ ಬೇಡಿಕೆ. ಅದರಿಂದ ಬಂದ ಹಣವನ್ನು ಇವರು ಬ್ಯಾಂಕಿನಲ್ಲಿಡುತ್ತಾರೆ. ಅದೂ ಮಗಳ ಹೆಸರಲ್ಲಿ...! ಮಗಳು ಮದುವೆಗೆ ರೆಡಿಯಾದಾಗ ಆ ಅಪ್ಪ-ಅಮ್ಮನ ಜೇಬಲ್ಲಿ ಎರಡರಿಂದ ಎರಡೂವರೆ ಲಕ್ಷ. ಅದರಲ್ಲೇ ಮಗಳ ಮದುವೆ. ಕೊನೆಗೆ ಅದೇ ಮರಗಳನ್ನು ಹೆತ್ತವರು ಉಡುಗೊರೆ ರೂಪದಲ್ಲಿ ಮಗಳಿಗೆ ನೀಡುತ್ತಾರೆ. ಒಟ್ಟಿನಿಂದ ಮರಗಳಿಂದ ಮಗಳ ಮದುವೆ!

ಇತ್ತೀಚೆಗೆ ಜೂನ್‌ನಲ್ಲಿ ಸುಭಾಸ್ ಸಿಂಗ್ ಎಂಬುವವರು ತನ್ನ ಮಗಳು ನಿಕಾಹ್ ಕುಮಾರಿಯನ್ನು ಶಾಲಾ ಶಿಕ್ಷಕನೊಬ್ಬನೊಂದಿಗೆ ವಿವಾಹ ಮಾಡಿದರು. “ನನ್ನ ಮಗಳ ಮದುವೆ ನನಗೆಂದು ಕಷ್ಟವಾಗಲಿಲ್ಲ. ಅವಳು ದುಡಿದ ಹಣದಲ್ಲೇ ನಾನು ಅವಳ ಮದುವೆ ಮಾಡಿದ್ದೇನೆ. ಇದೆಲ್ಲಾ ಅವಳ ಸಂಪತ್ತು. ಇದು ನಮ್ಮ ಗ್ರಾಮದ ಸಂಪ್ರದಾಯ. ಮಗಳು ಹುಟ್ಟಿದರೆ ಹತ್ತು ಫಲ ಬರುವ ಗಿಡಗಳನ್ನು ನೆಡಬೇಕು. ಜಾಗವಿಲ್ಲದಿದ್ದರೇ ಆತ ಜಾಗ ಖರೀದಿಸಿಯಾದರೂ ಗಿಡ ನೆಡಲೇಬೇಕು” ಎನ್ನುತ್ತಾರೆ ಸುಭಾಸ್ ಸಿಂಗ್.

ಒಂದು ಲಕ್ಷ ಮರಗಳು
ಈ ಗ್ರಾಮದಲ್ಲಿ ಹಸಿರೇ ಮನೆ ಮಗಳ ಉಸಿರು. ಕೇವಲ ಏಳು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಇರುವ ಮರಗಳ ಸಂಖ್ಯೆ ಬರೋಬ್ಬರಿ ಒಂದು ಲಕ್ಷ! ಪ್ರತಿ ಸೀಸನ್‌ನಲ್ಲಿ ಈ ಮರಗಳಿಂದ ಬರುವ ಆದಾಯವೇ ಎರಡು ಲಕ್ಷ. "ನಮ್ಮ ಗ್ರಾಮದಲ್ಲಿ ಹಳೆಕಾಲದ ಕೃಷಿ ಪದ್ಧತಿ ಮರೆತು ಬಹಳ ದಿನಗಳಾಯಿತು. ನಮ್ಮ ಗ್ರಾಮದ ಯಾವ ಮನೆಯಲ್ಲಿಯೂ ನೇಗಿಲುಗಳಿಲ್ಲ. ಈ ಮರಗಳಿಂದ ನಮ್ಮೂರಿನ ಹಲವಾರು ಹೆಣ್ಮಕ್ಕಳ ಬದುಕು ಹಸನಾಗಿದೆ" ಎನ್ನುವುದು ಶ್ಯಾಮ ಸುಂದರ ಶರ್ಮಾ ಅವರ ಅಭಿಪ್ರಾಯ. ಇಂದಿಗೂ ಬಿಹಾರದ ಹಲವು ಪ್ರದೇಶಗಳಲ್ಲಿ ವರದಕ್ಷಿಣೆ ಹೆಸರಲ್ಲಿ ಹಲವಾರು ಹೆಣ್ಣು ಮಕ್ಕಳು ಸಾವೀಗಿಡಾಗುತ್ತಿದ್ದಾರೆ. ಧರ್ ಹರಾ ಗ್ರಾಮ ಮಾತ್ರ ಇದಕ್ಕೆ ಅಪವಾದ. "ಹೆಣ್ಣು ಹುಟ್ಟಿದರೆ ಗಿಡ ನೆಡಬೇಕು ಎಮಬ ಪದ್ಧತಿ ಯಾರು ಜಾರಿಗೆ ತಂದರು ಅನ್ನೊದು ಗೊತ್ತಿಲ್ಲ. ನಮ್ಮಪ್ಪ..ನನಗೆ ಹೇಳಿದ್ದು. ನಮ್ಮ ತಾತ-ಮುತ್ತಾನೂ ಮಾಡುತ್ತಿದ್ದರಂತೆ. ಹಾಗಂತ ಆರಂಭ ಎಲ್ಲಿಂದ ಅನ್ನೋದು ತಿಳಿಯದು" ಎನ್ನುವುದು ಶ್ಯಾಮ್ ಸುಂದರ್ ಅವರ ಅಭಿಪ್ರಾಯ.

ಇಂದು ಬಿಹಾರದ ಈ ಗ್ರಾಮ ರಾಜ್ಯದೆಲ್ಲೆಡೆ ಸುದ್ದಿಯಲ್ಲಿದೆ. ಈ ಗ್ರಾಮ ಇಷ್ಟೊಂದು ಹಣ್ಣುಗಳನ್ನು ಉತ್ಪಾದನೆ ಮಾಡಲು ಹೇಗೆ ಸಾಧ್ಯ? ಎಂದು ಅಚ್ಚರಿಪಡುತ್ತಾರೆ. ಆದರೆ, ಇದರ ಹಿಂದೆ ಹೆಣ್ಣು ಮಗಳ ಭವಿಷ್ಯವಿದೆ ಅನ್ನೋದು ಬಹಳಷ್ಟು ಜನರಿಗೆ ಅರಿವಾಗುವುದು ತಡವಾಗಿಯೇ. ವರದಕ್ಷಿಣೆ ಪಿಡುಗನ್ನು ನಾಶ ಮಾಡುವ ನಿಟ್ಟಿನಲ್ಲೂ ಇವರ ಪ್ರಯತ್ನ ಸಾಗುತ್ತಿದೆ. ಹಾಗಾಗಿ ಈಗ ಈ ಗ್ರಾಮದ ಹೆಣ್ಣುಮಕ್ಕಳನ್ನು ವರದಕ್ಷಿಣೆ ಹೆಸರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಣ್ಣು ಮಕ್ಕಳಂದ್ರೆ ಖರ್ಚಿನ ಹೊರೆ ಭಾವಿಸುವ ಪ್ರತಿಯೊಬ್ಬರಿಗೂ ಬಿಹಾರದ ಧರ್‌ಹರಾ ಗ್ರಾಮ ಮಾದರಿ, ಅನುಕರಣೀಯ.
ನಿಜ ಹೇಳಿ ಬರಹ ನಿಮಗಿಷ್ಟವಾಗಿಲ್ವೇ?

*ಹೊಸ ದಿಗಂತದ ಧರಿತ್ರಿ ಪುರವಣಿಯಲ್ಲಿ ಡಿಸೆಂಬರ್ 16 ರಂದು ಪ್ರಕಟಗೊಂಡ ಲೇಖನ..
ಲಿಂಕ್ ನೋಡುವುದಾದರೆ..

Friday, December 3, 2010

ಆಕೆಯ ನಿಷ್ಠೆ ನಮಗೆ ಪಾಠವಾಗಲಿ...

ಸೂಕಿ ಬಿಡುಗಡೆ ಅಲ್ಲಿನ ಜನರಲ್ಲಿ ಮತ್ತೇ ಹೊಸ ನೇಸರನ ಆಶಾಕಿರಣ ಮೂಡಿಸಿದೆ. ವಿಶ್ವದ ಅತಿ ಪುರಾತನ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಅಮೆರಿಕ ಹಾಗು ಬ್ರಿಟನ್‌ ದೇಶಗಳು ಹಲವಾರು ಬಾರಿ ಬರ್ಮಾ ಸೇನಾ ಸರ್ಕಾರಕ್ಕೆ ಸೂಕಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರೂ ಒಪ್ಪದಿದ್ದ ಜನರಲ್‌ ಥಾನ್‌ ಶ್ವೇಗೆ ಈಗ ಜ್ಞಾನೋದಯವಾಗಿದೆ.
ಬುದ್ಧ ನಡೆದ ನೆಲದಲ್ಲಿ ಇನ್ನಾದರೂ ಶಾಂತಿ ನೆಲಸಲಿ....ಆಕೆ ಬಯಸಿದ್ದರೆ ಗಂಡ-ಹಾಗೂ ಇಬ್ಬರ ಮಕಕ್ಳ ಜತೆಗೂಡಿ ಯಾರೂ ಕಂಡರಿಯದ ಬಾಳು ಬಾಳಬಹುದಿತ್ತು. ಆದರೆ ಆಕೆಯ ದೇಶ ನಿಷ್ಠೆ ಅವಳ ಸಂಸಾರಕ್ಕಿಂತ ದೊಡ್ಡದಾಗಿತ್ತು.
ಕೋಟಿಗಟ್ಟಲೆ ಲೂಟಿ ಮಾಡಿ ನಕಲಿ ದೇಶನಿಷ್ಠೆ ತೋರಿಸುವ ನಮ್ಮ ರಾಜಕಾರಣಿಗಳ ನಡುವಲ್ಲಿ, ನಮ್ಮ ಪಕ್ಕದ ಮನೆಯ ಆಂಗ್‌ ಸಾನ್‌ ಸೂಕಿ 15 ವರ್ಷಗಳ ಕಾಲ ಗೃಹ ಭಂಧನ ಅನುಭವಿಸಿ ನವೆಂಬರ್ 13 ರಂದು ಬಿಡುಗಡೆಯಾಗಿದ್ದಾಳೆ. ಆಕೆ ಗೃಹ ಬಂಧನ ಅನುಭವಿಸಿದ್ದು ಆಕೆ ಮಾಡಿದ ತಪ್ಪಿಗಾಗಿ ಅಲ್ಲ. ಬರ್ಮಾ ಎಂಬ ಪುಟ್ಟ ದೇಶದ ಜನರಿಗಾಗಿ. ಅಲ್ಲಿನವರ ಕನಸಿಗಾಗಿ.
ಬದುಕು
ಬರ್ಮಾ ದೇಶ ಕಂಡ ನೈಜ ನಾಯಕ ಆಂಗ್‌ ಸಾನ್‌ರ ಮಗಳು ಈಕೆ. 1945 ಜೂನ್‌ 19ರಂದು ಜನನ. ಹುಟ್ಟಿದ ಎರಡು ವರ್ಷಕ್ಕೆ ಈಕೆಯ ಅಪ್ಪನ್ನನ್ನು ಕೊಲೆ ಮಾಡಲಾಯಿತು. ಪಿತಾಮಹನೇನೂ ಕಣ್ಮರೆಯಾದ ಆದರೆ ಆತನ ಸ್ಥಾನವನ್ನು ಸಮರ್ಥವಾಗಿ ಸೂಕಿ ತುಂಬಿದಳು. ಹಾಗಂತ ಸೂಕಿಗೆ ರಾಜಕಾರಣ ಇಷ್ಟವಂತಲ್ಲ. ಪ್ರಜಾಪ್ರಭುತ್ವ ಇಷ್ಟ. ನಮ್ಮ ದೇಶವನ್ನು ನಾವು ಆಳಬೇಕು ಯಾವುದೇ ಸೈನ್ಯಾಧಿಕಾರಿಗಳಲ್ಲ ಎನ್ನುವುದು ಆಕೆಯ ನಿಲುವು, 1972ರಲ್ಲಿ ಮೈಕಲ್‌ ಆರಿಸ್‌ರನ್ನು ಮದುವೆಯಾದ ಆಕೆಗೆ ಅಲೆಗ್ಸಾಂಡರ್ ಹಾಗೂ ಕಿಮ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
1988ರಲ್ಲಿ ನಡೆದ ಘಟನೆ ಆಕೆಯನ್ನು ಬರ್ಮಾದೇಶದ ಬಂಗಾರವನ್ನಾಗಿಸಿತು. ಅಲ್ಲಿನವರೆಗೂ ಇಂಗ್ಲೆಂಡ್‌ನಲ್ಲಿ ಸುಂದರ ಸಂಸಾರದಲ್ಲಿ ಭಾಗಿಯಾಗಿದ್ದ ಆಕೆ ನಂತರ ದೇಶಕ್ಕಾಗಿ ದುಡಿದಳು. ಸಾವಿನಂಚಿನಲ್ಲಿದ್ದ ತಾಯಿಯನ್ನು ಕಾಣಲು ಆಸ್ಪತ್ರೆಗೆ ಬಂದಿದ್ದ ಆಕೆ ಅಲ್ಲಿನ ಜನಸಾಗರ ಕಂಡು ದಂಗಾಗಿ ಹೋಗಿದ್ದಳು..! ಅಪ್ಪನ ಮೇಲೆ ಪ್ರೀತಿ ಇಟ್ಟ ಜನ. ಇಂದು ತಮ್ಮ ದೇಶದಲ್ಲೆ ತಾವೆಣಿಸದ ಬಾಳು ಬಾಳುತ್ತಿದ್ದಾರೆ. ಅಪ್ಪನ ಹಾದಿ ತಾನು ಹಿಡಿಯಬೇಕು ಎಂದು ರಾಜಕೀಯಕ್ಕೆ ಧುಮುಕಿದಳು. ಸೇನಾ ದಬ್ಬಾಳಿಕೆಯಲ್ಲಿ ನಲುಗಿದ್ದ ಜನಕ್ಕೆ ಸೂಕಿ ಆಸರೆಯಾದಳು. ಪ್ರಜಾಪ್ರಭುತ್ವ ಕನಸಾಯಿತು. ನ್ಯಾಷನಲ್‌ ಲಿಗ್‌ ಫಾರ್ ಡೆಮಾಕ್ರಸಿ ಸೇರಿದಾಗ ರಾಜಕೀಯ ಭವಿಷ್ಯ ನಿಚ್ಚಳವಾಯಿತು. ಶಾಂತಿ ಸಾರಿದ ಗಾಂಧೀಜಿ, ನೆಲ್ಸನ್‌ ಮಂಡೆಲಾ ಗುರುವಾದರು. ಹಾಗೇಯೆ ಗೌತಮ ಬುದ್ಧ...
ಕಣ್ಣೆದುರಿನ ಕೌರ್ಯ
8-8-88 ಕೌರ್ಯದಿಂದ ಈ ಪುಟ್ಟ ದೇಶ ವಿಶ್ವದ ಮನೆಮಾತಾಯಿತು. ಸೇನಾ ಆಡಳಿತದ ಕಣ್ಣಿಗೆ ಸೆಪ್ಟಂಬರ್ 8ರಂದು ಪ್ರತಿಭಟನೆಯಲ್ಲಿ ಸೇರಿದ್ದ 5ಸಾವಿರ ಮಂದಿ ಮನುಷ್ಯರಂತೆ ಕಾಣಲೇ ಇಲ್ಲ. ಮಾನವ ನರಬಲಿ ನಡೆದು ಹೋಯಿತು. ಆದರೆ ಸೇನೆ ಕೆಲವೇ ಜನ ಸತ್ತಿದ್ದು ಎಂದು ಹೇಳಿ ಸುಮ್ಮನಾಯಿತು. ಈ ಘಟನೆಯಿಂದ ಸೇನೆ ಇಕ್ಕಟ್ಟಿನ ಪರಿಸ್ಥಿತಿಗೆ ತಂದುಕೊಂಡಿತು. ಒಲ್ಲದ ಮನಸ್ಸಲ್ಲಿ ಮಹಾ ಚುನಾವಣೆಗೆ ಅಣಿ ಮಾಡಿತು. ಅಂದಿನ ಚುನಾವಣೆಯಲ್ಲಿ ನ್ಯಾಷನಲ್‌ ಲೀಗ್‌ ಫಾರ್ ಡೆಮಾಕ್ರಸಿ ಸ್ಪಷ್ಟ ಬಹುಮತ ಪಡೆದಾಗ ಸೂಕಿ ಬರ್ಮಾ ಜನರಿಗೆ ಮಹಾನ್‌ ನಾಯಕಿಯಾಗಿ ಬೆಳೆದಿದ್ದಳು. ಸೂಕಿ ಎಂದರೆ ಎನ್‌ಎಲ್‌ಡಿ ಎಂಬಂತಾದಾಗ ಸಹಜವಾಗಿ ಸೇನೆಯ ಕಣ್ಣು ಈಕೆಯ ಮೇಲೆ ಬಿದ್ದಿತು. ಅಲ್ಲಿನ ಸೇನಾ ಮುಖ್ಯಸ್ಥ ಜನರಲ್‌ ಥಾನ್‌ ಶ್ವೇ ಚುನಾವಣಾ ಫಲಿತಾಂಶಕ್ಕೆ ಮಾನ್ಯತೆ ನೀಡಲಿಲ್ಲ. ಸೂಕಿ ಎಲ್ಲಕ್ಕೂ ಕಾರಣ ಎಂದಾಗ ಅವಳನ್ನು ಗೃಹ ಬಂಧನದಲ್ಲಿರಸಲಾಯಿತು. ಅಲ್ಲಿಂದ ಇಲ್ಲಿಯವೆರೆಗೂ ಒಟ್ಟು ಮೂರು ಬಾರಿ ಸೂಕಿ ಗೃಹ ಬಂಧನ ಅನುಭವಿಸಿದ್ದಾಳೆ.
ನಂತರ ದಿನಗಳಲ್ಲಿ ಸೇನೆಯ ದಾರ್ಷ್ಟ್ಯ ಮುಂದುವರೆಯಿತು. 1989ರಲ್ಲಿ ಬರ್ಮಾ ಮಯನ್ಮಾರ್ ಆಯಿತು. ಅಲ್ಲಿಯವರೆಗೂ ರಂಗೂನ್‌ ಆಗಿದ್ದ ರಾಜಧಾನಿ ಯಾಂಗೂನ್‌ ಆಗಿ ಬದಲಾಯಿತು. ಸೇನೆ ನ್ಯಾಯಯುತವಾಗಿ ನಡೆದುಕೊಂಡಿದ್ದರೆ ಸೂಕಿ ಯಾವಾಗಲೂ ಬಂಧಮುಕ್ತಳಾಗಬೇಕಿತ್ತು. ಅದು ಅವರ ಜಾಯಮಾನವಾಗಿರಲಿಲ್ಲ, 2009 ಆಗಸ್ಟ್ 11ರಂದು ಸೂಕಿ ಬಿಡುಗಡೆಯನ್ನು 18 ತಿಂಗಳು ಮುಂದಕ್ಕೆ ಹಾಕಿದಾಗ ಸಹಜವಾಗಿಯೇ ಬರ್ಮಾದಲ್ಲಿ ಪ್ರತಿಭಟನೆಗಳಾದವು.
ಗಟ್ಟಿಗೊಳಿಸಿದ ಮಾತು
ಗೃಹ ಬಂಧನದಲ್ಲಿ ಆಕೆಯನ್ನು ನೋಡಿಕೊಳ್ಳಲು ಇಬ್ಬರು ದಾದಿಯರಿದ್ದರು. ಮೊಬೈಲ್‌, ಇಂಟರ್ನೆಟ್‌ ನಂತಹ ಯಾವುದೇ ಸೌಲಭ್ಯಗಳು ಆಕೆಗಿಲ್ಲ. ಅಕ್ಷರಶಃ ಜೈಲಿಗಿಂತ ಕಡೆಯ ಬಾಳು ಆಕೆಯದಾಗಿತ್ತು. ಸೂಕಿಯದು ಶಾಂತಿಯುತ ಹೋರಾಟ ಹಾಗಾಗಿಯೇ ಸೇನಾಧಿಕಾರಿಗಳಿಗೆ ಗೃಹಬಂಧನಕ್ಕಿಂತ ಹೆಚ್ಚಿನ ಮಟ್ಟಿಗಿನ ಶಿಕ್ಷೆ ನೀಡಲಾಗಲಿಲ್ಲ. ಅಹಿಂಸೆಯನ್ನು ಧ್ಯೇಯವನ್ನಾಗಿಟ್ಟುಕೊಂಡ ಸೂಕಿ ಮನಸ್ಸಿನ ಮೇಲೆ ಹಲವು ಘಟನೆಗಳು ಪ್ರಭಾವ ಬೀರಿವೆ. "ನನಗೆ ಬೌದ್ಧ ವಿಹಾರಗಳನ್ನು ನೊಡುವುದೆಂದೆರೇ ಭಾರಿ ಖುಷಿ''. 40 ವರ್ಷಗಳ ಹಿಂದೆ ಒಂದು ಬೌದ್ಧ ವಿಹಾರಕ್ಕೆ ಹೋಗಿದ್ದಾಗ ಅಲ್ಲಿದ್ದ ಮಾತು ಆಕೆಯ ಮನಸ್ಸಲ್ಲಿ ಅಚ್ಚಳಿಯದೇ ಉಳಿಯಿತಂತೆ.'' ಜೀವನದಲ್ಲಿ ಒಂದೊಂದು ಕ್ಷಣವೂ ನಿನ್ನನ್ನು ಹೆದರಿಸುವ ಪ್ರಯತ್ನಗಳಾದಾಗ ಭಯಪಡಬೇಡ. ಹಾಗಂತ ಭಯವೇ ಇಲ್ಲದಿರುವುದಿಲ್ಲ. ನಿನ್ನನ್ನು ಹೊಗಳಿದಾಗ ಸಂಭ್ರಮಿಸಬೇಡ. ಹಾಗೆಂದು ನಿನ್ನ ಸಂತೊಷಗಳನ್ನು ಕಳೆದುಕೊಳ್ಳಬೇಡ'' ನನ್ನ ಯಶಸ್ಸಿಗೆ ಇದೇ ಸೂತ್ರ ಎಂದು ಆಕೆ ಹೇಳಿಕೊಂಡಿದಾ್ದಳೆ.
ಈಕೆಯ ಶಾಂತಿಯುತ ಹೋರಾಟಕಾಕ್ಗಿ ಪ್ರತಿಷ್ಠಿತ ನೊಬೆಲ್‌ ಶಾಂತಿ ಪ್ರಶಸ್ತಿ ಸಹ ದೊರೆತಿದೆ.

ಇದೀಗ ದೇಶದ ಸಾವಿರಾರು ಜನತೆಯ ನೀರಿಕ್ಷೆಗಳು ನಿಜವಾಗಿದೆ. ನಮಗೆ ನಮ್ಮದೊಂದು ಬದುಕು ನೀಡುವ ಸಲುವಾಗಿ ತನ್ನ ಸುಂದರ ಬದುಕನ್ನೆ ಕಲ್ಲಾಗಿಸಿಕೊಂಡ ಆಕೆಯ ಮೇಲೆ ಅಲ್ಲಿನ ಜನರಿಗೆ ಪ್ರೀತಿ ಇದೆ ಅದಕ್ಕಿಂತ ಹೆಚ್ಚಾಗಿ ಮಮತೆ ಇದೆ. 1999ರಂದು ಆಕೆಯ ಪತಿ ನಿಧನರಾದಾಗಲೂ ಆಕೆ ಗೃಹ ಬಂಧನದಲ್ಲಿದ್ದಳು. ಬಿಡುಗಡೆಯಾಗಿರುವ ಆಕೆ ಇಂಟರ್ನೆಟ್‌ ಹೊಂದುವ ಆಸೆ ವ್ಯಕ್ತಪಡಿಸಿದ್ದಾಳೆ. 65 ವರ್ಷದ ಆಕೆ ಟ್ವೀಟರ್ ನಲ್ಲಿ ಟ್ವೀಟ್‌ ಮಾಡುವ ಬಯಕೆ ವ್ಯಕ್ತಪಡಿಸಿದ್ದಾಳೆ. ಆ ಮೂಲಕ ದೇಶದ ಜನತೆಯನ್ನು ಸಂಪರ್ಕಿಸುವ ಆಸೆ ಹೊಂದಿದ್ದಾಳೆ. ಮತ್ತೆ ಪ್ರಜಾಪ್ರಭುತ್ವಕ್ಕಾಗಿ ದನಿ ಎತ್ತುವ ಹಂಬಲದಲ್ಲಿದ್ದಾರೆ. ಒಂದಂತೂ ಸತ್ಯ ಆಕೆಯ ದೇಶನಿಷ್ಠೆ ಸಾಮಾನ್ಯವಾದುದಂತು ಅಲ್ಲ ಅವಳ ಆ ನಿಷ್ಠೆ ನಮಗೆಲ್ಲ ಮಾದರಿ ಆಗಬೇಕು.
ಸೇನಾ ಆಳ್ವಿಕೆಯಲ್ಲಿ ಕಂಗೆಟ್ಟು ಹೊಗಿದ್ದ ಬರ್ಮಾ ಒಡಲಲ್ಲಿ ಮತ್ತೆ ಪ್ರಜಾಪ್ರಭುತ್ವದ ಕನಸುಗಳು ಮೊಳಕೆಯೊಡೆದಿದೆ. ಸೂಕಿ ಬಿಡುಗಡೆ ಅಲ್ಲಿನ ಜನರಲ್ಲಿ ಮತ್ತೇ ಹೊಸ ನೇಸರನ ಆಶಾಕಿರಣ ಮೂಡಿಸಿದೆ. ವಿಶ್ವದ ಅತಿ ಪುರಾತನ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಅಮೆರಿಕ ಹಾಗು ಬ್ರಿಟನ್‌ ದೇಶಗಳು ಹಲವಾರು ಬಾರಿ ಬರ್ಮಾ ಸೇನಾ ಸರ್ಕಾರಕ್ಕೆ ಸೂಕಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರೂ ಒಪ್ಪದಿದ್ದ ಜನರಲ್‌ ಥಾನ್‌ ಶ್ವೇಗೆ ಈಗ ಜ್ಞಾನೋದಯವಾಗಿದೆ.
ಬುದ್ಧ ನಡೆದ ನೆಲದಲ್ಲಿ ಇನ್ನಾದರೂ ಶಾಂತಿ ನೆಲಸಲಿ....

ಪ್ರಕಟವಾದ ದಿನದ ವಿಶೇಷ ಪೇಜ್ ನ ಲಿಂಕ್ ಇಲ್ಲಿದೆ...

http://www.hosadigantha.in/epaper.php?date=11-15-2010&name=11-15-2010-7