Friday, December 31, 2010

ಕಥೆ ಓದಿ, ನಿಮಗೂ ಇಷ್ಟವಾಗಬಹುದು!


ಬಿಹಾರದ ಧರ್‌ಹರಾ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ ಜೊತೆಗೊಂದು ಗಿಡನೂ ಹುಟ್ಟುತ್ತೆ. ಅದೇ ಆ ಹೆಣ್ಣು ಮಗಳ ಭವಿಷ್ಯ. ಆ ಮರದಿಂದ ಬರುವ ಫಸಲಿನಿಂದಲೇ ಮನೆಮಗಳ ಮದುವೆ ನಡೆಯುತ್ತೆ. ಕೇವಲ ಏಳು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಹೆಣ್ಣಿನ ಹೆಸರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳು ಹುಟ್ಟಿವೆ.




ಅದೊಂದು ಪುಟ್ಟ ಊರು. ಇರುವುದು ಏಳು ಸಾವಿರ ಜನ. ಒಪ್ಪೊತ್ತಿಗೆ ನಿತ್ಯ ಕಾಯಕ. ಇಲ್ಲಿ ಹೆಣ್ಣು ಮಗು ಹುಟ್ಟಿದರೆ, ಗಿಡ ಹುಟ್ಟುತ್ತೆ. ಆ ಊರಲ್ಲಿ ಹೊಸ ಗಿಡವೊಂದು ಕಂಡರೆ ಅಲ್ಲೊಬ್ಬಳು ಹೆಣ್ಣುಮಗಳು ಹುಟ್ಟಿದ್ದಾಳೆಂದೇ ಅರ್ಥ.

ಹೌದು, ಇದು ಬಿಹಾರದ ಧರ್ ಹರಾ ಗ್ರಾಮ. ಇಲ್ಲಿ ಹೆಣ್ಣು ಮಗಳು ಹುಟ್ಟಿದರೆ ಐದು ಲಿಚಿ ಮತ್ತು ಮಾವಿನ ಮರಗಳನ್ನು ನೆಡುವುದು ಕಡ್ಡಾಯ. ಇಂದು ಅಲ್ಲಿರುವ ಮಾವು ಮತ್ತು ಲಿಚಿ ಮರಗಳ ಸಂಖ್ಯೆ ಒಂದು ಲಕ್ಷ ಮುಟ್ಟಿದೆ. ಧರ್ ಹರಾ ಗ್ರಾಮದ ಇಂಚಿಂಚೂ ಹಸಿರ ಐಸಿರಿ. ಬಿಹಾರದ ಮಾರುಕಟ್ಟೆಯಲ್ಲಿ ಲಿಚಿ ಮತ್ತು ಮಾವಿನ ಹಣ್ಣುಗಳಿಂದ ಲಕ್ಷಾನುಗಟ್ಟಲೆ ವಹಿವಾಟು. ಇಂದು ಈ ಗ್ರಾಮದ ಜನರು ಇದೇ ಹಣ್ಣುಗಳಿಂದಲೇ ಲಕ್ಷಾಂತರ ರೂಪಾಯಿ ಎಣಿಸುತ್ತಾರೆ. ಮಗಳ ಮದುವೆ ಮಾಡುತ್ತಾರೆ. ಹಾಗಂತ ಇದ್ಯಾವುದೇ ಸರ್ಕಾರ ನಿರ್ಮಿಸಿದ ಯೋಜನೆಯಲ್ಲಿ ಹುಟ್ಟಿ ಬಂದ ಮರಗಳಲ್ಲ. ಬದಲಾಗಿ ಈ "ಹಸಿರ ಐಸಿರಿ" ಕೂಡ ಮನೆಮಗಳ ಬದುಕಿಗಾಗಿ, ಭವಿಷ್ಯಕ್ಕಾಗಿ! ಇದೇ ಕಾರಣಕ್ಕೆ ಈ ಗ್ರಾಮದಲ್ಲಿ ಈವರೆಗೆ ಒಂದೇ ಒಂದು ವರದಕ್ಷಿಣೆ ಪ್ರಕರಣ ಕೂಡ ವರದಿಯಾಗಿಲ್ಲ.

ಮನೆಮಗಳಿಗೊಂದು ಮರ
ಧರ್‌ಹರಾ ಗ್ರಾಮ ಇರುವುದು ಬಿಹಾರದ ಬಾಗಲ್ಪುರ್ ಜಿಲ್ಲೆಯಲ್ಲಿ. ಹೆಣ್ಣು ಮಗು ಹುಟ್ಟಿದರೆ ಗಿಡ ನೆಡಬೇಕೆನ್ನುವುದು ಹಲವಾರು ತಲೆಮಾರುಗಳಿಂದಲೇ ನಡೆದು ಬಂದಿದೆ. ಹಾಗಂತ, ಇಲ್ಲಿಯ ಜನರ ಬಳಿ ಕೇಳಿದರೆ ನಮ್ಮ ತಾತ-ಮುತ್ತಾತ ಮಾಡಿದರೆನ್ನುವುದು ಅಷ್ಟೇ ಗೊತ್ತು. ಒಟ್ಟಿನಲ್ಲಿ ಅಲ್ಲಿ ಹೆಣ್ಣು ಮಗಳ ಹೆಸರಿನಲ್ಲಿ ಮರಗಳು ತಲೆ ಎತ್ತಿವೆ. ಪರಿಸರ ಹಸಿರಾಗಿದೆ. ಹೆಣ್ಣು ಮಗಳ ಬದುಕು ಹಸನಾಗುತ್ತಿದೆ.

ಗಿಡ ನೆಟ್ಟ ಮಾತ್ರಕ್ಕೆ ಕರ್ತವ್ಯ ಮುಗಿಯುವುದಿಲ್ಲ. ಆ ಪುಟ್ಟ ಮಗು ದೊಡ್ಡವಳಾಗುವ ತನಕ ಮಗಳನ್ನು ಬೆಳೆಸಿದಂತೆ ಪ್ರೀತಿಯಿಂದ ಆ ಗಿಡಗಳನ್ನು ಬೆಳೆಸುತ್ತಾರೆ, ಅವುಗಳಿಗೂ ಪ್ರತಿದಿನ ನೀರೆರೆದು ಪೋಷಿಸುತ್ತಾರೆ. ಗಿಡ ದೊಡ್ಡದಾಗಿ ಹೂವು ಬಿಡುವ ಹೊತ್ತಿಗೆ ಮಗಳು ಅಂಬೆಗಾಲಿಕ್ಕುತ್ತಾಳೆ. ಇಂದಿಗೂ ಬಿಹಾರದ ಧರ್ ಹರಾ ಗ್ರಾಮದಲ್ಲಿ ೭-೮ ವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಅಪ್ಪ-ಅಮ್ಮ ನೆಟ್ಟ ಗಿಡಗಳಿಗೆ ತಪ್ಪದೆ ನೀರೆರೆಯುವುದನ್ನು ಕಾಣಬಹುದು. ಮಗಳು ವಯಸ್ಸಿಗೆ ಬರುವ ಮೊದಲೇ ಆ ಮರಗಳು ಫಲ ಕೊಡುತ್ತವೆ.

ಮಗಳ ಹೆಸರಲ್ಲಿ ಅಕೌಂಟ್
ಹಾಗೆ ಮಾರುಕಟ್ಟೆ ಪ್ರವೇಶಿಸುವ ಈ ಹಣ್ಣುಗಳಿಗೆ ಬಿಹಾರದಲ್ಲಿ ಹೆಚ್ಚಿನ ಬೇಡಿಕೆ. ಅದರಿಂದ ಬಂದ ಹಣವನ್ನು ಇವರು ಬ್ಯಾಂಕಿನಲ್ಲಿಡುತ್ತಾರೆ. ಅದೂ ಮಗಳ ಹೆಸರಲ್ಲಿ...! ಮಗಳು ಮದುವೆಗೆ ರೆಡಿಯಾದಾಗ ಆ ಅಪ್ಪ-ಅಮ್ಮನ ಜೇಬಲ್ಲಿ ಎರಡರಿಂದ ಎರಡೂವರೆ ಲಕ್ಷ. ಅದರಲ್ಲೇ ಮಗಳ ಮದುವೆ. ಕೊನೆಗೆ ಅದೇ ಮರಗಳನ್ನು ಹೆತ್ತವರು ಉಡುಗೊರೆ ರೂಪದಲ್ಲಿ ಮಗಳಿಗೆ ನೀಡುತ್ತಾರೆ. ಒಟ್ಟಿನಿಂದ ಮರಗಳಿಂದ ಮಗಳ ಮದುವೆ!

ಇತ್ತೀಚೆಗೆ ಜೂನ್‌ನಲ್ಲಿ ಸುಭಾಸ್ ಸಿಂಗ್ ಎಂಬುವವರು ತನ್ನ ಮಗಳು ನಿಕಾಹ್ ಕುಮಾರಿಯನ್ನು ಶಾಲಾ ಶಿಕ್ಷಕನೊಬ್ಬನೊಂದಿಗೆ ವಿವಾಹ ಮಾಡಿದರು. “ನನ್ನ ಮಗಳ ಮದುವೆ ನನಗೆಂದು ಕಷ್ಟವಾಗಲಿಲ್ಲ. ಅವಳು ದುಡಿದ ಹಣದಲ್ಲೇ ನಾನು ಅವಳ ಮದುವೆ ಮಾಡಿದ್ದೇನೆ. ಇದೆಲ್ಲಾ ಅವಳ ಸಂಪತ್ತು. ಇದು ನಮ್ಮ ಗ್ರಾಮದ ಸಂಪ್ರದಾಯ. ಮಗಳು ಹುಟ್ಟಿದರೆ ಹತ್ತು ಫಲ ಬರುವ ಗಿಡಗಳನ್ನು ನೆಡಬೇಕು. ಜಾಗವಿಲ್ಲದಿದ್ದರೇ ಆತ ಜಾಗ ಖರೀದಿಸಿಯಾದರೂ ಗಿಡ ನೆಡಲೇಬೇಕು” ಎನ್ನುತ್ತಾರೆ ಸುಭಾಸ್ ಸಿಂಗ್.

ಒಂದು ಲಕ್ಷ ಮರಗಳು
ಈ ಗ್ರಾಮದಲ್ಲಿ ಹಸಿರೇ ಮನೆ ಮಗಳ ಉಸಿರು. ಕೇವಲ ಏಳು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಇರುವ ಮರಗಳ ಸಂಖ್ಯೆ ಬರೋಬ್ಬರಿ ಒಂದು ಲಕ್ಷ! ಪ್ರತಿ ಸೀಸನ್‌ನಲ್ಲಿ ಈ ಮರಗಳಿಂದ ಬರುವ ಆದಾಯವೇ ಎರಡು ಲಕ್ಷ. "ನಮ್ಮ ಗ್ರಾಮದಲ್ಲಿ ಹಳೆಕಾಲದ ಕೃಷಿ ಪದ್ಧತಿ ಮರೆತು ಬಹಳ ದಿನಗಳಾಯಿತು. ನಮ್ಮ ಗ್ರಾಮದ ಯಾವ ಮನೆಯಲ್ಲಿಯೂ ನೇಗಿಲುಗಳಿಲ್ಲ. ಈ ಮರಗಳಿಂದ ನಮ್ಮೂರಿನ ಹಲವಾರು ಹೆಣ್ಮಕ್ಕಳ ಬದುಕು ಹಸನಾಗಿದೆ" ಎನ್ನುವುದು ಶ್ಯಾಮ ಸುಂದರ ಶರ್ಮಾ ಅವರ ಅಭಿಪ್ರಾಯ. ಇಂದಿಗೂ ಬಿಹಾರದ ಹಲವು ಪ್ರದೇಶಗಳಲ್ಲಿ ವರದಕ್ಷಿಣೆ ಹೆಸರಲ್ಲಿ ಹಲವಾರು ಹೆಣ್ಣು ಮಕ್ಕಳು ಸಾವೀಗಿಡಾಗುತ್ತಿದ್ದಾರೆ. ಧರ್ ಹರಾ ಗ್ರಾಮ ಮಾತ್ರ ಇದಕ್ಕೆ ಅಪವಾದ. "ಹೆಣ್ಣು ಹುಟ್ಟಿದರೆ ಗಿಡ ನೆಡಬೇಕು ಎಮಬ ಪದ್ಧತಿ ಯಾರು ಜಾರಿಗೆ ತಂದರು ಅನ್ನೊದು ಗೊತ್ತಿಲ್ಲ. ನಮ್ಮಪ್ಪ..ನನಗೆ ಹೇಳಿದ್ದು. ನಮ್ಮ ತಾತ-ಮುತ್ತಾನೂ ಮಾಡುತ್ತಿದ್ದರಂತೆ. ಹಾಗಂತ ಆರಂಭ ಎಲ್ಲಿಂದ ಅನ್ನೋದು ತಿಳಿಯದು" ಎನ್ನುವುದು ಶ್ಯಾಮ್ ಸುಂದರ್ ಅವರ ಅಭಿಪ್ರಾಯ.

ಇಂದು ಬಿಹಾರದ ಈ ಗ್ರಾಮ ರಾಜ್ಯದೆಲ್ಲೆಡೆ ಸುದ್ದಿಯಲ್ಲಿದೆ. ಈ ಗ್ರಾಮ ಇಷ್ಟೊಂದು ಹಣ್ಣುಗಳನ್ನು ಉತ್ಪಾದನೆ ಮಾಡಲು ಹೇಗೆ ಸಾಧ್ಯ? ಎಂದು ಅಚ್ಚರಿಪಡುತ್ತಾರೆ. ಆದರೆ, ಇದರ ಹಿಂದೆ ಹೆಣ್ಣು ಮಗಳ ಭವಿಷ್ಯವಿದೆ ಅನ್ನೋದು ಬಹಳಷ್ಟು ಜನರಿಗೆ ಅರಿವಾಗುವುದು ತಡವಾಗಿಯೇ. ವರದಕ್ಷಿಣೆ ಪಿಡುಗನ್ನು ನಾಶ ಮಾಡುವ ನಿಟ್ಟಿನಲ್ಲೂ ಇವರ ಪ್ರಯತ್ನ ಸಾಗುತ್ತಿದೆ. ಹಾಗಾಗಿ ಈಗ ಈ ಗ್ರಾಮದ ಹೆಣ್ಣುಮಕ್ಕಳನ್ನು ವರದಕ್ಷಿಣೆ ಹೆಸರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಣ್ಣು ಮಕ್ಕಳಂದ್ರೆ ಖರ್ಚಿನ ಹೊರೆ ಭಾವಿಸುವ ಪ್ರತಿಯೊಬ್ಬರಿಗೂ ಬಿಹಾರದ ಧರ್‌ಹರಾ ಗ್ರಾಮ ಮಾದರಿ, ಅನುಕರಣೀಯ.
ನಿಜ ಹೇಳಿ ಬರಹ ನಿಮಗಿಷ್ಟವಾಗಿಲ್ವೇ?

*ಹೊಸ ದಿಗಂತದ ಧರಿತ್ರಿ ಪುರವಣಿಯಲ್ಲಿ ಡಿಸೆಂಬರ್ 16 ರಂದು ಪ್ರಕಟಗೊಂಡ ಲೇಖನ..
ಲಿಂಕ್ ನೋಡುವುದಾದರೆ..

No comments:

Post a Comment

ನಿಮಗನಿಸಿದ್ದು....