Friday, December 31, 2010

ನದಿಗಳನ್ನು ಪ್ರೀತಿಸುವವನು!

ಚಾರಣ, ಪ್ರವಾಸ ಎಂದ ತಕ್ಷಣ ಬೆಟ್ಟ, ಗುಡ್ಡ ಹತ್ತೋದು. ಯಾವುದೋ ವಿಶೇಷ ಜಾಗಕ್ಕೆ ಹೋಗಿ ಒಂದೆರಡು ದಿನ ಹಾಯಾಗಿ ಇದ್ದು ಬರೋದು...ಇವಿಷ್ಟು ಬಿಟ್ಟರೆ, ಇನ್ನೇನೂ ನೆನಪಾಗದು. ಆದರೆ, ಸ್ವಿಜ್ಜರ್ಲೆಂಡಿನ ಆಂಡಿ ಲೆಹ್ಮನ್‌ಗೆ ಪ್ರವಾಸ ಎಂದರೆ ನದಿಗಳನ್ನು ದಾಟುವುದು, ಅವುಗಳ ವಿಶೇಷತೆಯನ್ನು ತಿಳಿಯುವುದು, ಅಲ್ಲಿನ ನಾಗರಿಕತೆಯನ್ನು ಕಲಿಯುವುದು...! ಈಗಾಗಲೇ ಪ್ರಪಂಚದಾದ್ಯಂತ ನದಿಗಳ ಪ್ರವಾಸ ಮಾಡಿರುವ ಈತ ಭಾರತದ ನದಿಗಳನ್ನೂ ಬಿಟ್ಟಿಲ್ಲ.


ನದಿಯೊಂದು ಸತ್ತರೆ, ನಾಗರೀಕತೆಯೇ ಸತ್ತಂತೆ. ರಸ್ತೆಗಳು ಸಾವುಗಳನ್ನು ಸೃಷ್ಟಿಸುತ್ತವೆ. ನದಿಗಳು ಜೀವಗಳನ್ನು ಉಳಿಸುತ್ತವೆ. ಈ ಪ್ರಪಂಚವನ್ನು ಮುಕ್ಕಾಲು ಭಾಗ ನೀರು ಆವರಿಸಿದ್ದರೂ, ಕುಡಿಯುವ ನೀರಿಗಾಗಿ ಹಾಹಾಕಾರ ಇಂದಿಗೂ ಇದೆ. ಎಲ್ಲಿ ತನಕ ಮನುಷ್ಯನಿಗೆ ನೀರು ಮುಖ್ಯವೋ, ಅಲ್ಲಿ ತನಕ ನನ್ನ ಪಯಣ -ಆಂಡಿ ಲೆಹ್ಮನ್

ಅವನ ಅಪ್ಪ ಮೀನುಗಾರ. ನದಿ, ಸಮುದ್ರಗಳು ಇವರಿಗೆ ಅನ್ನದ ಬಟ್ಟಲು. ಅಪ್ಪ ನದಿ ದಂಡೆಯಲ್ಲಿ ಮೀನಿಗಾಗಿ ಬಲೆ ಬೀಸುತ್ತಿದ್ದಾಗ ಆ ಪುಟ್ಟ ಹುಡುಗ ಅಚ್ಚರಿಯ ಕಣ್ಣುಗಳಿಂದ ಅಪ್ಪನನ್ನೇ ದಿಟ್ಟಿಸುತ್ತಿದ್ದ. ಆ ನದಿಗಳಲ್ಲಿ ಬದುಕುವ ಮೀನುಗಳ ಕುರಿತು, ತನ್ನ ಪಾಡಿಗೆ ತಾನು ಹರಿಯುವ ಆ ನದಿಗಳ ಕುರಿತು ಆತನಲ್ಲಿ ಸಹಜ ಕುತೂಹಲ. ತಾನೂ ನದಿಯಲ್ಲಿ ಈಜಬೇಕು. ಆ ನದಿಗಳ ಕುರಿತು ತಿಳಿದುಕೊಳ್ಳಬೇಕು, ಆ ನದಿಗಳ ಸುತ್ತಮುತ್ತ ಬೆಳೆದಿರಿವ ನಾಗರೀಕತೆ ಕುರಿತು ತಿಳಿಯಬೇಕು...ಹೀಗೇ ಆ ಪುಟ್ಟ ವಯಸ್ಸಿನಲ್ಲಿ ಅವನಲ್ಲಿ ನೂರಾರು ಕನಸುಗಳು.
ಅವನೇ ಪ್ರಪಂಚದ ಪ್ರಪಂಚದ ಪ್ರಸಿದ್ಧ ರಿವರ್ ರೈಡರ್ ಆಂಡಿ ಲೆಹ್ಮನ್.

ಇಂದು ಈತನ ಹೆಸರು ಪ್ರಪಂಚಕ್ಕೆ ಚಿರಪರಿಚಿತ. ಸಾವಿರಾರು "ಹುಟ್ಟು" ಹರಿದ ನದಿಗಳಲ್ಲಿ ಈತನ ಪಯಣ ಸಾಗಿದೆ. ಪ್ರಪಂಚದ ಭಯಾನಕ, ಅಪಾಯಕಾರಿ ನದಿಗಳ ಮೇಲೆ ಈತನ ದೋಣಿ ಹರಿದು ಹೋಗಿದೆ. ದಕ್ಷಿಣ ಅಮೇರಿಕಾದ ಜೀವನದಿಗಳಾದ ಆರ್ ನಿಕೋ ಹಾಗೂ ಅಮೆಜಾನ್, ದಕ್ಷಿಣ ಪೂರ್ವ ಏಷ್ಯಾದ ಮೆಕಾಂಗ್, ಚೀನಾದ ಯಾಂಗ್ಟಿ, ಆಫ್ರಿಕಾದ ಜಾಮೆಂಜಿ... ಹಾಗೇ ಭಾರತದ ನದಿಗಳಾದ ಗಂಗಾ, ಬ್ರಹ್ಮಪುತ್ರ ನದಿಗಳಲ್ಲಿ ಈತ ಸಾಗಿ ಬಂದಿದ್ದಾನೆ. ಬರುವ ಹಾದಿಯಲ್ಲೆಲ್ಲಾ ಸಿಗುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿದ್ದಾನೆ. ನದಿಗಳ ಪ್ರಾಮುಖ್ಯತೆ ಬಗ್ಗೆ ಅವರಿಗೆ ವಿವರಿಸಿದ್ದಾನೆ. ನದಿಗಳ ಉಳಿವಿಗೆ ನಾವೇನು ಮಾಡಬೇಕು ಎಂಬುದರ ಬಗ್ಗೆಯು ಈತ ತಿಳಿಸುತ್ತಾನೆ.
ಹೀಗಾಗಿಯೇ ಆಂಡಿಯನ್ನು ವರ್ಲ್ಡ್ ಬ್ಯಾಂಕ್ ಹಾಗೂ ವಿಶ್ವಸಂಸ್ಥೆಯು ನದಿಗಳ ಸಂರಕ್ಷಣೆ ಬಗ್ಗೆ ಹಾಗೂ ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸುವ ರಾಯಭಾರಿಯನ್ನಾಗಿ ನೇಮಿಸಿದೆ.


ಸಾಗಿದ್ದು ಹೇಗೆ?
ಆಂಡಿ ಹುಟ್ಟಿದ್ದು ೧೯೫೪ರಲ್ಲಿ ಸ್ವಿಜರ್‌ಲ್ಯಾಂಡ್‌ನ ಜ್ಯೂರಿಚ್ ಪ್ರಾಂತದಲ್ಲಿ . ನದಿಗಳಲ್ಲಿ ಈಜುವ ಹವ್ಯಾಸ ಈತನಿಗೆ ಅಚ್ಚುಮೆಚ್ಚು, ಸರ್ಫಿಂಗ್, ಹಾಯಿದೋಣಿಯಂತಹ ಸ್ಪರ್ಧೆಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದ. ಕಲಿತ ವಿದ್ಯೆಗೆ ತಕ್ಕ ಕೆಲಸ ಸಿಕ್ಕಿದರೂ ಸಿಕ್ಕ ಕೆಲಸಕ್ಕೆಲ್ಲಾ ಗೋಲಿ ಹೊಡೆದ. ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಒಂದಲ್ಲಾ ಒಂದು ನೆಪ ಹೇಳಿ ಕಾಲು ಕಿತ್ತಿದ್ದ. ಬ್ಯಾಂಕಾಕ್‌ನಲ್ಲಿ ಪುರುಷರ ಬಟ್ಟೆಗಳ ಮಾಡೆಲ್ ಆಗಿ ಕೈತುಂಬಾ ಹಣ ಸಿಗುತ್ತಿದ್ದರೂ ಆ ಕೆಲಸವನ್ನೂ ಬಿಟ್ಟ. ಹವಾಯಿ, ಸ್ವಿಜರ್‌ಲ್ಯಾಂಡ್, ಕೊಲಂಬಿಯಾ, ಅರ್ಜಿಂಟೀನಾ, ಕೆರಿಬಿಯನ್ ಹೀಗೆ ಹಲವಾರು ದೇಶ ಸುತ್ತಾಡಿದರೂ ಮನಸ್ಸಿಗೆ ಒಪ್ಪುವ ಕೆಲಸ ಸಿಗಲಿಲ್ಲ.

ಇದರ ನಡುವೆ ರಸ್ತೆ ಅಫಘಾತವಾಗಿ ಎಂಟು ತಿಂಗಳು ಬೆಡ್‌ರೆಸ್ಟ್. ನಂತರ ಕ್ಯೂಬಾಗೆ ಪಯಣ. ಅಲ್ಲಿ ಬೋಟ್ ತಯಾರಿಕಾ ಕಂಪನಿಯಲ್ಲಿ ಕೆಲಸ. ನದಿಗಳು ಸಮುದ್ರಗಳ ಬಗ್ಗೆ ಮತ್ತೆ ಹೆಚ್ಚಿನ ಆಸಕ್ತಿ."ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು" ಎಂಬಂತೆ ಸಲ್ಲದ ನೆಪ ಹೇಳಿ ಅಲ್ಲಿನ ಕೆಲಸ ಬಿಟ್ಟು ಸ್ಪೇನ್‌ನಲ್ಲಿ ಸಮುದ್ರಯಾನಿಗಳಿಗೆ ಸಹಾಯವಾಗುವ ಪರಿಕರಗಳ ತನ್ನದೇ ಒಂದು "ಶಾಪ್" ಸ್ಥಾಪಿಸಿದ. ಆಗ ಹುಟ್ಟಿದ್ದೇ ವಿಶ್ವ ಪರ್ಯಟನೆಯ ಕನಸು. ಆದರೆ ಸಮುದ್ರದಲ್ಲಿ ಸುಮ್ಮನೆ ಪ್ರಯಾಣ ಮಾಡುವುದಕ್ಕಿಂತ ನದಿಗಳಲ್ಲಿ ಪಯಣಿಸಿ ನದಿಗಳ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವ ನಿರ್ಧಾರ ತಳೆದ. ೨೦೦೩ರಲ್ಲಿ ಆತನ ಕನಸುಗಳು ರೂಪುಗೊಳ್ಳುವ ತನ್ನ ನದಿ ಪರ್ಯಟನೆಯ ಆಸೆ ಈಡೇರುವ ಹಂತ ತಲುಪಿತು.

೨೦೦೩ರಲ್ಲಿ ದಕ್ಷಿಣ ಅಮೆರಿಕಾದ ಆರ್ ನಿಕೋ ನದಿಯಲ್ಲಿ ಹಾಯಿ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ. ಅದರಲ್ಲಿ ಮೂರನೇ ಸ್ಥಾನ ಗಳಿಸಿದ. ಸ್ಪರ್ಧಾತ್ಮಕ ರೇಸ್‌ಗಳಲ್ಲಿ ಭಾಗವಹಿಸಿ ಗೆದ್ದ ಮೊದಲ ಯುರೋಪಿಯನ್ ಎಂಬ ಕೀರ್ತಿಗೂ ಭಾಜನನಾದ. ಮುಂದಿನ ವರ್ಷ ವೆನಿಜುವೆಲಾದಲ್ಲಿ ನಡೆಯಬೇಕಾಗಿದ್ದ ಸ್ಪರ್ಧೆ ರಾಜಕೀಯ ಕಾರಣಗಳಿಗಾಗಿ ಮುಳುಗಿತ್ತು. ಆದರೆ ಆಂಡಿ "ಆರ್ ನಿಕೋ" ನದಿಯಲ್ಲಿ ಅದಾಗಲೇ ಪಯಣ ಆರಂಭಿಸಿದ್ದ. ವಿಶ್ವದ ಅತಿ ಅಪಾಯಕಾರಿ ನದಿಯಲ್ಲಿ ೧೭೦೦ಕಿ.ಮೀ ಕ್ರಮಿಸಿದ. ಈ ನದಿಯಲ್ಲಿ ಕೊಲಂಬಿಯಾ, ವೆನಿಜುವೆಲಾ, ಹಾಗೂ ಬ್ರೆಜಿಲ್ ದೇಶಗಳನ್ನು ಸುತ್ತಿದ. ಈತನ ಇಂತಹ ಹುಚ್ಚಾಟಗಳೇ ಆತನಿಗೆ ಬದುಕಿನಲ್ಲಿ ನೆಲೆ ಕಲ್ಪಿಸಿತು. ಆತನ ಯಾನಗಳಿಗೆ ಸ್ಪಾನ್ಸರ್ ಗಳು ದೊರೆತರು. ನಂತರ ೬ ವಿವಿಧ ದೇಶಗಳನ್ನು ಸಂಪರ್ಕಿಸುವ ೨ ಸಾವಿರ ಕಿ.ಮೀ ಉದ್ಧದ ನದಿಯಲ್ಲಿ ಪಯಣಿಸಿದ. ೨೦೦೮ರಲ್ಲಿ ಆಫ್ರಿಕಾ ದೇಶಗಳಾದ ಜಾಂಬಿಯಾ, ನಮಿಬಿಯಾ, ಬೋಟ್ಸವಾನಾ, ಜಿಂಬಾಬ್ವೆ, ಮೊಜಾಂಬಿಕ್ ದೇಶಗಳನ್ನು ಸಂಪರ್ಕಿಸುವ ೨,೯೦೦ಕಿ.ಮೀ ಉದ್ದದ ಜಾಮೆಂಜಿ ನದಿಯಲ್ಲಿ ಪಯಣಿಸಿ, ನದಿಯಲ್ಲಿ ಪಯಣಿಸುವಾಗ ಕಂಡ ವಿಚಾರಗಳನ್ನೆಲ್ಲಾ ಆ ದೇಶಕ್ಕೆ ತಿಳಿಸಿದ. ಜಾಮೆಂಜಿಯಂತಹ ಸುಂದರ ನದಿಯಿದ್ದರೂ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿಕಂಡು ಮುಮ್ಮಲ ಮರುಗಿದ.

ಗಂಗಾ ಪಯಣ
ಈತನ ನದಿ ಪಯಣ ೨೦೦೯ರಲ್ಲಿ ಗಂಗಾ ನದಿಯಲ್ಲಿ ನಡೆಯಿತು. ಈ ಸಮಯದಲ್ಲಿ ಈತನ ಯಾನಕ್ಕೆ ಇನ್ನಷ್ಟು ಜನ ಕೈಜೋಡಿಸಿದ್ದರು. ಗಂಗಾ ನದಿ ಬಗ್ಗೆ ಹೇಳುವ ಆತ " ನಾ ಕಂಡ ವಿಶ್ವದ ಅತೀ ಸುಂದರ ನದಿಗಳಲ್ಲಿ ಗಂಗಾ ನದಿಗೆ ಮೊದಲ ಸ್ಥಾನ. ಆದರೆ ಈ ನದಿಯಲ್ಲಿ ಸಾಗುವಾಗ ಸಿಕ್ಕ ಶವಗಳು ನಮ್ಮನ್ನು ಸ್ವಲ್ಪ ಭಯಗ್ರಸ್ಥರನ್ನಾಗಿ ಮಾಡಿತು. ನಂತರ ಇದು ಪುರಾಣ ಪ್ರಸಿದ್ಧಿ ಎಂದು ತಿಳಿದಾಗ ಸಂತೋಷವಾಯಿತು. ಆದರೆ ಇದೇ ರಿತಿಯಲ್ಲಿ ಕಲುಷಿತವಾಗಿ ನದಿ ಮುಂದುವರಿದರೇ ಮುಂದಿನ ದಶಕದಲ್ಲಿ ಗಂಗಾ ನೀರು ಕುಡಿಯುವ ಭಾಗ್ಯ ಇರಲಾರದು" ಎಂದು ಎಚ್ಚರಿಸುತ್ತಾನೆ.

ಈ ವರ್ಷ ಬ್ರಹ್ಮಪುತ್ರ
2010ರಲ್ಲಿ ಆಂಡಿಯ ನದಿ ವಿಹಾರ ಭಾರತದ ಇನ್ನೊಂದು ಪ್ರಸಿದ್ಧ ನದಿ ಬಹ್ಮಪುತ್ರದಲ್ಲಿ. ೫೫ ದಿನಗಳ ಈ ಯಾತ್ರೆ ಈ ವರ್ಷದ ನವೆಂಬರ್ ಗೆ ಕೊನೆಗೊಂಡಿದೆ. ಟಿಬೆಟ್‌ನಲ್ಲಿನ ಬ್ರಹ್ಮಪುತ್ರ ನದಿ ಮೂಲದಿಂದ ಬಂಗಾಳ ಕೊಲ್ಲಿ ವರೆಗಿನ ಸಂಗಮದವರೆಗಿನ ೨,೮೦೦ಕಿ.ಮೀ. ದೂರವನ್ನು ಆಂಡಿ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ತಲುಪಿದ್ದಾನೆ. ಹೆಚ್ಚಿನ ಯಾನಿಗಳು ಬೆಳಗಿನ ಸಮಯದಲ್ಲಿ ಪಯಣಿಸಿದರೆ ಆಂಡಿ ತಂಡ ಮಾತ್ರ ರಾತ್ರಿ ೮ ರಿಂದ ಬೆಳಿಗ್ಗೆ ೪ರವರೆಗೆ ಪಯಣಿಸುತ್ತಾರೆ. ಬೆಳಿಗ್ಗೆ ವಿಶ್ರಾಂತಿ. ಆಹಾರ ತಯಾರಿಸಲು ಒಬ್ಬನಿದ್ದಾನೆ. ತಾನು ಸಾಗುವ ಹಾದಿಯಲ್ಲಿ ನದಿಗಳ ರಕ್ಷಣೆ ಬಗ್ಗೆ ಹೇಳಿದ್ದಾನೆ. ಆಫ್ರಿಕಾದಲ್ಲಿ ನದಿಯಿದ್ದರೂ ನೀರಿಗಾಗಿ ಹಾಹಾಕಾರ ಪಡುವ ವ್ಯಥೆಯನ್ನು, ನೀರಿನ ಹಸಿವನ್ನು, ಅಲ್ಲಿ ರೆಕಾರ್ಡ್ ಮಾಡಿದ ಚಿತ್ರಣವನ್ನು ಜನರಿಗೆ ತೋರಿಸಿ ನಿಮ್ಮ ನದಿ ಹೀಗಾಗಬಾರದಾದರೇ ನದಿಗಳ ಬಗ್ಗೆ ಎಚ್ಚರ ವಹಿಸಿ ಎನ್ನುತ್ತಾನೆ. ಬ್ರಹ್ಮಪುತ್ರ ನದಿಯ ಪಯಣ ಮಾಡಿ ಈ ನದಿಯನ್ನು ಯಶಸ್ವಿಯಾಗಿ ಯಾನ ಮಾಡಿದ ಮೊದಲಿಗ ಎಂಬ ಕೀರ್ತಿಗೂ ಭಾಜನನಾಗಿದ್ದಾನೆ ಆಂಡಿ. "ನಾನು ನದಿಗಳನ್ನು ಪ್ರೀತಿಸುತ್ತೇನೆ. ನದಿಗಳೇ ನನಗೆ ಜೀವ. ನದಿಗಳ ಸ್ಪರ್ಶವಿಲ್ಲದಿರುವ ಜನಾಂಗ ಜಗತ್ತಿನಲ್ಲೇ ಇಲ್ಲ" ಇದು ಆಂಡಿ ಹೋದಲ್ಲೆಲ್ಲಾ ಜನರಿಗೆ ಹೇಳುವ ಮಾತು.ವಿಹಾರ ಪುರವಣಿಯಲ್ಲಿ ಜನವರಿ 1 ರಂದು ಪ್ರಕಟವಾದ ಬರಹ... ಇಲ್ಲಿ ನೋಡಿ..

No comments:

Post a Comment

ನಿಮಗನಿಸಿದ್ದು....