Friday, December 31, 2010

ಕಥೆ ಓದಿ, ನಿಮಗೂ ಇಷ್ಟವಾಗಬಹುದು!


ಬಿಹಾರದ ಧರ್‌ಹರಾ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ ಜೊತೆಗೊಂದು ಗಿಡನೂ ಹುಟ್ಟುತ್ತೆ. ಅದೇ ಆ ಹೆಣ್ಣು ಮಗಳ ಭವಿಷ್ಯ. ಆ ಮರದಿಂದ ಬರುವ ಫಸಲಿನಿಂದಲೇ ಮನೆಮಗಳ ಮದುವೆ ನಡೆಯುತ್ತೆ. ಕೇವಲ ಏಳು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಹೆಣ್ಣಿನ ಹೆಸರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳು ಹುಟ್ಟಿವೆ.




ಅದೊಂದು ಪುಟ್ಟ ಊರು. ಇರುವುದು ಏಳು ಸಾವಿರ ಜನ. ಒಪ್ಪೊತ್ತಿಗೆ ನಿತ್ಯ ಕಾಯಕ. ಇಲ್ಲಿ ಹೆಣ್ಣು ಮಗು ಹುಟ್ಟಿದರೆ, ಗಿಡ ಹುಟ್ಟುತ್ತೆ. ಆ ಊರಲ್ಲಿ ಹೊಸ ಗಿಡವೊಂದು ಕಂಡರೆ ಅಲ್ಲೊಬ್ಬಳು ಹೆಣ್ಣುಮಗಳು ಹುಟ್ಟಿದ್ದಾಳೆಂದೇ ಅರ್ಥ.

ಹೌದು, ಇದು ಬಿಹಾರದ ಧರ್ ಹರಾ ಗ್ರಾಮ. ಇಲ್ಲಿ ಹೆಣ್ಣು ಮಗಳು ಹುಟ್ಟಿದರೆ ಐದು ಲಿಚಿ ಮತ್ತು ಮಾವಿನ ಮರಗಳನ್ನು ನೆಡುವುದು ಕಡ್ಡಾಯ. ಇಂದು ಅಲ್ಲಿರುವ ಮಾವು ಮತ್ತು ಲಿಚಿ ಮರಗಳ ಸಂಖ್ಯೆ ಒಂದು ಲಕ್ಷ ಮುಟ್ಟಿದೆ. ಧರ್ ಹರಾ ಗ್ರಾಮದ ಇಂಚಿಂಚೂ ಹಸಿರ ಐಸಿರಿ. ಬಿಹಾರದ ಮಾರುಕಟ್ಟೆಯಲ್ಲಿ ಲಿಚಿ ಮತ್ತು ಮಾವಿನ ಹಣ್ಣುಗಳಿಂದ ಲಕ್ಷಾನುಗಟ್ಟಲೆ ವಹಿವಾಟು. ಇಂದು ಈ ಗ್ರಾಮದ ಜನರು ಇದೇ ಹಣ್ಣುಗಳಿಂದಲೇ ಲಕ್ಷಾಂತರ ರೂಪಾಯಿ ಎಣಿಸುತ್ತಾರೆ. ಮಗಳ ಮದುವೆ ಮಾಡುತ್ತಾರೆ. ಹಾಗಂತ ಇದ್ಯಾವುದೇ ಸರ್ಕಾರ ನಿರ್ಮಿಸಿದ ಯೋಜನೆಯಲ್ಲಿ ಹುಟ್ಟಿ ಬಂದ ಮರಗಳಲ್ಲ. ಬದಲಾಗಿ ಈ "ಹಸಿರ ಐಸಿರಿ" ಕೂಡ ಮನೆಮಗಳ ಬದುಕಿಗಾಗಿ, ಭವಿಷ್ಯಕ್ಕಾಗಿ! ಇದೇ ಕಾರಣಕ್ಕೆ ಈ ಗ್ರಾಮದಲ್ಲಿ ಈವರೆಗೆ ಒಂದೇ ಒಂದು ವರದಕ್ಷಿಣೆ ಪ್ರಕರಣ ಕೂಡ ವರದಿಯಾಗಿಲ್ಲ.

ಮನೆಮಗಳಿಗೊಂದು ಮರ
ಧರ್‌ಹರಾ ಗ್ರಾಮ ಇರುವುದು ಬಿಹಾರದ ಬಾಗಲ್ಪುರ್ ಜಿಲ್ಲೆಯಲ್ಲಿ. ಹೆಣ್ಣು ಮಗು ಹುಟ್ಟಿದರೆ ಗಿಡ ನೆಡಬೇಕೆನ್ನುವುದು ಹಲವಾರು ತಲೆಮಾರುಗಳಿಂದಲೇ ನಡೆದು ಬಂದಿದೆ. ಹಾಗಂತ, ಇಲ್ಲಿಯ ಜನರ ಬಳಿ ಕೇಳಿದರೆ ನಮ್ಮ ತಾತ-ಮುತ್ತಾತ ಮಾಡಿದರೆನ್ನುವುದು ಅಷ್ಟೇ ಗೊತ್ತು. ಒಟ್ಟಿನಲ್ಲಿ ಅಲ್ಲಿ ಹೆಣ್ಣು ಮಗಳ ಹೆಸರಿನಲ್ಲಿ ಮರಗಳು ತಲೆ ಎತ್ತಿವೆ. ಪರಿಸರ ಹಸಿರಾಗಿದೆ. ಹೆಣ್ಣು ಮಗಳ ಬದುಕು ಹಸನಾಗುತ್ತಿದೆ.

ಗಿಡ ನೆಟ್ಟ ಮಾತ್ರಕ್ಕೆ ಕರ್ತವ್ಯ ಮುಗಿಯುವುದಿಲ್ಲ. ಆ ಪುಟ್ಟ ಮಗು ದೊಡ್ಡವಳಾಗುವ ತನಕ ಮಗಳನ್ನು ಬೆಳೆಸಿದಂತೆ ಪ್ರೀತಿಯಿಂದ ಆ ಗಿಡಗಳನ್ನು ಬೆಳೆಸುತ್ತಾರೆ, ಅವುಗಳಿಗೂ ಪ್ರತಿದಿನ ನೀರೆರೆದು ಪೋಷಿಸುತ್ತಾರೆ. ಗಿಡ ದೊಡ್ಡದಾಗಿ ಹೂವು ಬಿಡುವ ಹೊತ್ತಿಗೆ ಮಗಳು ಅಂಬೆಗಾಲಿಕ್ಕುತ್ತಾಳೆ. ಇಂದಿಗೂ ಬಿಹಾರದ ಧರ್ ಹರಾ ಗ್ರಾಮದಲ್ಲಿ ೭-೮ ವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಅಪ್ಪ-ಅಮ್ಮ ನೆಟ್ಟ ಗಿಡಗಳಿಗೆ ತಪ್ಪದೆ ನೀರೆರೆಯುವುದನ್ನು ಕಾಣಬಹುದು. ಮಗಳು ವಯಸ್ಸಿಗೆ ಬರುವ ಮೊದಲೇ ಆ ಮರಗಳು ಫಲ ಕೊಡುತ್ತವೆ.

ಮಗಳ ಹೆಸರಲ್ಲಿ ಅಕೌಂಟ್
ಹಾಗೆ ಮಾರುಕಟ್ಟೆ ಪ್ರವೇಶಿಸುವ ಈ ಹಣ್ಣುಗಳಿಗೆ ಬಿಹಾರದಲ್ಲಿ ಹೆಚ್ಚಿನ ಬೇಡಿಕೆ. ಅದರಿಂದ ಬಂದ ಹಣವನ್ನು ಇವರು ಬ್ಯಾಂಕಿನಲ್ಲಿಡುತ್ತಾರೆ. ಅದೂ ಮಗಳ ಹೆಸರಲ್ಲಿ...! ಮಗಳು ಮದುವೆಗೆ ರೆಡಿಯಾದಾಗ ಆ ಅಪ್ಪ-ಅಮ್ಮನ ಜೇಬಲ್ಲಿ ಎರಡರಿಂದ ಎರಡೂವರೆ ಲಕ್ಷ. ಅದರಲ್ಲೇ ಮಗಳ ಮದುವೆ. ಕೊನೆಗೆ ಅದೇ ಮರಗಳನ್ನು ಹೆತ್ತವರು ಉಡುಗೊರೆ ರೂಪದಲ್ಲಿ ಮಗಳಿಗೆ ನೀಡುತ್ತಾರೆ. ಒಟ್ಟಿನಿಂದ ಮರಗಳಿಂದ ಮಗಳ ಮದುವೆ!

ಇತ್ತೀಚೆಗೆ ಜೂನ್‌ನಲ್ಲಿ ಸುಭಾಸ್ ಸಿಂಗ್ ಎಂಬುವವರು ತನ್ನ ಮಗಳು ನಿಕಾಹ್ ಕುಮಾರಿಯನ್ನು ಶಾಲಾ ಶಿಕ್ಷಕನೊಬ್ಬನೊಂದಿಗೆ ವಿವಾಹ ಮಾಡಿದರು. “ನನ್ನ ಮಗಳ ಮದುವೆ ನನಗೆಂದು ಕಷ್ಟವಾಗಲಿಲ್ಲ. ಅವಳು ದುಡಿದ ಹಣದಲ್ಲೇ ನಾನು ಅವಳ ಮದುವೆ ಮಾಡಿದ್ದೇನೆ. ಇದೆಲ್ಲಾ ಅವಳ ಸಂಪತ್ತು. ಇದು ನಮ್ಮ ಗ್ರಾಮದ ಸಂಪ್ರದಾಯ. ಮಗಳು ಹುಟ್ಟಿದರೆ ಹತ್ತು ಫಲ ಬರುವ ಗಿಡಗಳನ್ನು ನೆಡಬೇಕು. ಜಾಗವಿಲ್ಲದಿದ್ದರೇ ಆತ ಜಾಗ ಖರೀದಿಸಿಯಾದರೂ ಗಿಡ ನೆಡಲೇಬೇಕು” ಎನ್ನುತ್ತಾರೆ ಸುಭಾಸ್ ಸಿಂಗ್.

ಒಂದು ಲಕ್ಷ ಮರಗಳು
ಈ ಗ್ರಾಮದಲ್ಲಿ ಹಸಿರೇ ಮನೆ ಮಗಳ ಉಸಿರು. ಕೇವಲ ಏಳು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಇರುವ ಮರಗಳ ಸಂಖ್ಯೆ ಬರೋಬ್ಬರಿ ಒಂದು ಲಕ್ಷ! ಪ್ರತಿ ಸೀಸನ್‌ನಲ್ಲಿ ಈ ಮರಗಳಿಂದ ಬರುವ ಆದಾಯವೇ ಎರಡು ಲಕ್ಷ. "ನಮ್ಮ ಗ್ರಾಮದಲ್ಲಿ ಹಳೆಕಾಲದ ಕೃಷಿ ಪದ್ಧತಿ ಮರೆತು ಬಹಳ ದಿನಗಳಾಯಿತು. ನಮ್ಮ ಗ್ರಾಮದ ಯಾವ ಮನೆಯಲ್ಲಿಯೂ ನೇಗಿಲುಗಳಿಲ್ಲ. ಈ ಮರಗಳಿಂದ ನಮ್ಮೂರಿನ ಹಲವಾರು ಹೆಣ್ಮಕ್ಕಳ ಬದುಕು ಹಸನಾಗಿದೆ" ಎನ್ನುವುದು ಶ್ಯಾಮ ಸುಂದರ ಶರ್ಮಾ ಅವರ ಅಭಿಪ್ರಾಯ. ಇಂದಿಗೂ ಬಿಹಾರದ ಹಲವು ಪ್ರದೇಶಗಳಲ್ಲಿ ವರದಕ್ಷಿಣೆ ಹೆಸರಲ್ಲಿ ಹಲವಾರು ಹೆಣ್ಣು ಮಕ್ಕಳು ಸಾವೀಗಿಡಾಗುತ್ತಿದ್ದಾರೆ. ಧರ್ ಹರಾ ಗ್ರಾಮ ಮಾತ್ರ ಇದಕ್ಕೆ ಅಪವಾದ. "ಹೆಣ್ಣು ಹುಟ್ಟಿದರೆ ಗಿಡ ನೆಡಬೇಕು ಎಮಬ ಪದ್ಧತಿ ಯಾರು ಜಾರಿಗೆ ತಂದರು ಅನ್ನೊದು ಗೊತ್ತಿಲ್ಲ. ನಮ್ಮಪ್ಪ..ನನಗೆ ಹೇಳಿದ್ದು. ನಮ್ಮ ತಾತ-ಮುತ್ತಾನೂ ಮಾಡುತ್ತಿದ್ದರಂತೆ. ಹಾಗಂತ ಆರಂಭ ಎಲ್ಲಿಂದ ಅನ್ನೋದು ತಿಳಿಯದು" ಎನ್ನುವುದು ಶ್ಯಾಮ್ ಸುಂದರ್ ಅವರ ಅಭಿಪ್ರಾಯ.

ಇಂದು ಬಿಹಾರದ ಈ ಗ್ರಾಮ ರಾಜ್ಯದೆಲ್ಲೆಡೆ ಸುದ್ದಿಯಲ್ಲಿದೆ. ಈ ಗ್ರಾಮ ಇಷ್ಟೊಂದು ಹಣ್ಣುಗಳನ್ನು ಉತ್ಪಾದನೆ ಮಾಡಲು ಹೇಗೆ ಸಾಧ್ಯ? ಎಂದು ಅಚ್ಚರಿಪಡುತ್ತಾರೆ. ಆದರೆ, ಇದರ ಹಿಂದೆ ಹೆಣ್ಣು ಮಗಳ ಭವಿಷ್ಯವಿದೆ ಅನ್ನೋದು ಬಹಳಷ್ಟು ಜನರಿಗೆ ಅರಿವಾಗುವುದು ತಡವಾಗಿಯೇ. ವರದಕ್ಷಿಣೆ ಪಿಡುಗನ್ನು ನಾಶ ಮಾಡುವ ನಿಟ್ಟಿನಲ್ಲೂ ಇವರ ಪ್ರಯತ್ನ ಸಾಗುತ್ತಿದೆ. ಹಾಗಾಗಿ ಈಗ ಈ ಗ್ರಾಮದ ಹೆಣ್ಣುಮಕ್ಕಳನ್ನು ವರದಕ್ಷಿಣೆ ಹೆಸರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಣ್ಣು ಮಕ್ಕಳಂದ್ರೆ ಖರ್ಚಿನ ಹೊರೆ ಭಾವಿಸುವ ಪ್ರತಿಯೊಬ್ಬರಿಗೂ ಬಿಹಾರದ ಧರ್‌ಹರಾ ಗ್ರಾಮ ಮಾದರಿ, ಅನುಕರಣೀಯ.
ನಿಜ ಹೇಳಿ ಬರಹ ನಿಮಗಿಷ್ಟವಾಗಿಲ್ವೇ?

*ಹೊಸ ದಿಗಂತದ ಧರಿತ್ರಿ ಪುರವಣಿಯಲ್ಲಿ ಡಿಸೆಂಬರ್ 16 ರಂದು ಪ್ರಕಟಗೊಂಡ ಲೇಖನ..
ಲಿಂಕ್ ನೋಡುವುದಾದರೆ..

Friday, December 3, 2010

ಆಕೆಯ ನಿಷ್ಠೆ ನಮಗೆ ಪಾಠವಾಗಲಿ...

ಸೂಕಿ ಬಿಡುಗಡೆ ಅಲ್ಲಿನ ಜನರಲ್ಲಿ ಮತ್ತೇ ಹೊಸ ನೇಸರನ ಆಶಾಕಿರಣ ಮೂಡಿಸಿದೆ. ವಿಶ್ವದ ಅತಿ ಪುರಾತನ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಅಮೆರಿಕ ಹಾಗು ಬ್ರಿಟನ್‌ ದೇಶಗಳು ಹಲವಾರು ಬಾರಿ ಬರ್ಮಾ ಸೇನಾ ಸರ್ಕಾರಕ್ಕೆ ಸೂಕಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರೂ ಒಪ್ಪದಿದ್ದ ಜನರಲ್‌ ಥಾನ್‌ ಶ್ವೇಗೆ ಈಗ ಜ್ಞಾನೋದಯವಾಗಿದೆ.
ಬುದ್ಧ ನಡೆದ ನೆಲದಲ್ಲಿ ಇನ್ನಾದರೂ ಶಾಂತಿ ನೆಲಸಲಿ....



ಆಕೆ ಬಯಸಿದ್ದರೆ ಗಂಡ-ಹಾಗೂ ಇಬ್ಬರ ಮಕಕ್ಳ ಜತೆಗೂಡಿ ಯಾರೂ ಕಂಡರಿಯದ ಬಾಳು ಬಾಳಬಹುದಿತ್ತು. ಆದರೆ ಆಕೆಯ ದೇಶ ನಿಷ್ಠೆ ಅವಳ ಸಂಸಾರಕ್ಕಿಂತ ದೊಡ್ಡದಾಗಿತ್ತು.
ಕೋಟಿಗಟ್ಟಲೆ ಲೂಟಿ ಮಾಡಿ ನಕಲಿ ದೇಶನಿಷ್ಠೆ ತೋರಿಸುವ ನಮ್ಮ ರಾಜಕಾರಣಿಗಳ ನಡುವಲ್ಲಿ, ನಮ್ಮ ಪಕ್ಕದ ಮನೆಯ ಆಂಗ್‌ ಸಾನ್‌ ಸೂಕಿ 15 ವರ್ಷಗಳ ಕಾಲ ಗೃಹ ಭಂಧನ ಅನುಭವಿಸಿ ನವೆಂಬರ್ 13 ರಂದು ಬಿಡುಗಡೆಯಾಗಿದ್ದಾಳೆ. ಆಕೆ ಗೃಹ ಬಂಧನ ಅನುಭವಿಸಿದ್ದು ಆಕೆ ಮಾಡಿದ ತಪ್ಪಿಗಾಗಿ ಅಲ್ಲ. ಬರ್ಮಾ ಎಂಬ ಪುಟ್ಟ ದೇಶದ ಜನರಿಗಾಗಿ. ಅಲ್ಲಿನವರ ಕನಸಿಗಾಗಿ.
ಬದುಕು
ಬರ್ಮಾ ದೇಶ ಕಂಡ ನೈಜ ನಾಯಕ ಆಂಗ್‌ ಸಾನ್‌ರ ಮಗಳು ಈಕೆ. 1945 ಜೂನ್‌ 19ರಂದು ಜನನ. ಹುಟ್ಟಿದ ಎರಡು ವರ್ಷಕ್ಕೆ ಈಕೆಯ ಅಪ್ಪನ್ನನ್ನು ಕೊಲೆ ಮಾಡಲಾಯಿತು. ಪಿತಾಮಹನೇನೂ ಕಣ್ಮರೆಯಾದ ಆದರೆ ಆತನ ಸ್ಥಾನವನ್ನು ಸಮರ್ಥವಾಗಿ ಸೂಕಿ ತುಂಬಿದಳು. ಹಾಗಂತ ಸೂಕಿಗೆ ರಾಜಕಾರಣ ಇಷ್ಟವಂತಲ್ಲ. ಪ್ರಜಾಪ್ರಭುತ್ವ ಇಷ್ಟ. ನಮ್ಮ ದೇಶವನ್ನು ನಾವು ಆಳಬೇಕು ಯಾವುದೇ ಸೈನ್ಯಾಧಿಕಾರಿಗಳಲ್ಲ ಎನ್ನುವುದು ಆಕೆಯ ನಿಲುವು, 1972ರಲ್ಲಿ ಮೈಕಲ್‌ ಆರಿಸ್‌ರನ್ನು ಮದುವೆಯಾದ ಆಕೆಗೆ ಅಲೆಗ್ಸಾಂಡರ್ ಹಾಗೂ ಕಿಮ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
1988ರಲ್ಲಿ ನಡೆದ ಘಟನೆ ಆಕೆಯನ್ನು ಬರ್ಮಾದೇಶದ ಬಂಗಾರವನ್ನಾಗಿಸಿತು. ಅಲ್ಲಿನವರೆಗೂ ಇಂಗ್ಲೆಂಡ್‌ನಲ್ಲಿ ಸುಂದರ ಸಂಸಾರದಲ್ಲಿ ಭಾಗಿಯಾಗಿದ್ದ ಆಕೆ ನಂತರ ದೇಶಕ್ಕಾಗಿ ದುಡಿದಳು. ಸಾವಿನಂಚಿನಲ್ಲಿದ್ದ ತಾಯಿಯನ್ನು ಕಾಣಲು ಆಸ್ಪತ್ರೆಗೆ ಬಂದಿದ್ದ ಆಕೆ ಅಲ್ಲಿನ ಜನಸಾಗರ ಕಂಡು ದಂಗಾಗಿ ಹೋಗಿದ್ದಳು..! ಅಪ್ಪನ ಮೇಲೆ ಪ್ರೀತಿ ಇಟ್ಟ ಜನ. ಇಂದು ತಮ್ಮ ದೇಶದಲ್ಲೆ ತಾವೆಣಿಸದ ಬಾಳು ಬಾಳುತ್ತಿದ್ದಾರೆ. ಅಪ್ಪನ ಹಾದಿ ತಾನು ಹಿಡಿಯಬೇಕು ಎಂದು ರಾಜಕೀಯಕ್ಕೆ ಧುಮುಕಿದಳು. ಸೇನಾ ದಬ್ಬಾಳಿಕೆಯಲ್ಲಿ ನಲುಗಿದ್ದ ಜನಕ್ಕೆ ಸೂಕಿ ಆಸರೆಯಾದಳು. ಪ್ರಜಾಪ್ರಭುತ್ವ ಕನಸಾಯಿತು. ನ್ಯಾಷನಲ್‌ ಲಿಗ್‌ ಫಾರ್ ಡೆಮಾಕ್ರಸಿ ಸೇರಿದಾಗ ರಾಜಕೀಯ ಭವಿಷ್ಯ ನಿಚ್ಚಳವಾಯಿತು. ಶಾಂತಿ ಸಾರಿದ ಗಾಂಧೀಜಿ, ನೆಲ್ಸನ್‌ ಮಂಡೆಲಾ ಗುರುವಾದರು. ಹಾಗೇಯೆ ಗೌತಮ ಬುದ್ಧ...
ಕಣ್ಣೆದುರಿನ ಕೌರ್ಯ
8-8-88 ಕೌರ್ಯದಿಂದ ಈ ಪುಟ್ಟ ದೇಶ ವಿಶ್ವದ ಮನೆಮಾತಾಯಿತು. ಸೇನಾ ಆಡಳಿತದ ಕಣ್ಣಿಗೆ ಸೆಪ್ಟಂಬರ್ 8ರಂದು ಪ್ರತಿಭಟನೆಯಲ್ಲಿ ಸೇರಿದ್ದ 5ಸಾವಿರ ಮಂದಿ ಮನುಷ್ಯರಂತೆ ಕಾಣಲೇ ಇಲ್ಲ. ಮಾನವ ನರಬಲಿ ನಡೆದು ಹೋಯಿತು. ಆದರೆ ಸೇನೆ ಕೆಲವೇ ಜನ ಸತ್ತಿದ್ದು ಎಂದು ಹೇಳಿ ಸುಮ್ಮನಾಯಿತು. ಈ ಘಟನೆಯಿಂದ ಸೇನೆ ಇಕ್ಕಟ್ಟಿನ ಪರಿಸ್ಥಿತಿಗೆ ತಂದುಕೊಂಡಿತು. ಒಲ್ಲದ ಮನಸ್ಸಲ್ಲಿ ಮಹಾ ಚುನಾವಣೆಗೆ ಅಣಿ ಮಾಡಿತು. ಅಂದಿನ ಚುನಾವಣೆಯಲ್ಲಿ ನ್ಯಾಷನಲ್‌ ಲೀಗ್‌ ಫಾರ್ ಡೆಮಾಕ್ರಸಿ ಸ್ಪಷ್ಟ ಬಹುಮತ ಪಡೆದಾಗ ಸೂಕಿ ಬರ್ಮಾ ಜನರಿಗೆ ಮಹಾನ್‌ ನಾಯಕಿಯಾಗಿ ಬೆಳೆದಿದ್ದಳು. ಸೂಕಿ ಎಂದರೆ ಎನ್‌ಎಲ್‌ಡಿ ಎಂಬಂತಾದಾಗ ಸಹಜವಾಗಿ ಸೇನೆಯ ಕಣ್ಣು ಈಕೆಯ ಮೇಲೆ ಬಿದ್ದಿತು. ಅಲ್ಲಿನ ಸೇನಾ ಮುಖ್ಯಸ್ಥ ಜನರಲ್‌ ಥಾನ್‌ ಶ್ವೇ ಚುನಾವಣಾ ಫಲಿತಾಂಶಕ್ಕೆ ಮಾನ್ಯತೆ ನೀಡಲಿಲ್ಲ. ಸೂಕಿ ಎಲ್ಲಕ್ಕೂ ಕಾರಣ ಎಂದಾಗ ಅವಳನ್ನು ಗೃಹ ಬಂಧನದಲ್ಲಿರಸಲಾಯಿತು. ಅಲ್ಲಿಂದ ಇಲ್ಲಿಯವೆರೆಗೂ ಒಟ್ಟು ಮೂರು ಬಾರಿ ಸೂಕಿ ಗೃಹ ಬಂಧನ ಅನುಭವಿಸಿದ್ದಾಳೆ.
ನಂತರ ದಿನಗಳಲ್ಲಿ ಸೇನೆಯ ದಾರ್ಷ್ಟ್ಯ ಮುಂದುವರೆಯಿತು. 1989ರಲ್ಲಿ ಬರ್ಮಾ ಮಯನ್ಮಾರ್ ಆಯಿತು. ಅಲ್ಲಿಯವರೆಗೂ ರಂಗೂನ್‌ ಆಗಿದ್ದ ರಾಜಧಾನಿ ಯಾಂಗೂನ್‌ ಆಗಿ ಬದಲಾಯಿತು. ಸೇನೆ ನ್ಯಾಯಯುತವಾಗಿ ನಡೆದುಕೊಂಡಿದ್ದರೆ ಸೂಕಿ ಯಾವಾಗಲೂ ಬಂಧಮುಕ್ತಳಾಗಬೇಕಿತ್ತು. ಅದು ಅವರ ಜಾಯಮಾನವಾಗಿರಲಿಲ್ಲ, 2009 ಆಗಸ್ಟ್ 11ರಂದು ಸೂಕಿ ಬಿಡುಗಡೆಯನ್ನು 18 ತಿಂಗಳು ಮುಂದಕ್ಕೆ ಹಾಕಿದಾಗ ಸಹಜವಾಗಿಯೇ ಬರ್ಮಾದಲ್ಲಿ ಪ್ರತಿಭಟನೆಗಳಾದವು.
ಗಟ್ಟಿಗೊಳಿಸಿದ ಮಾತು
ಗೃಹ ಬಂಧನದಲ್ಲಿ ಆಕೆಯನ್ನು ನೋಡಿಕೊಳ್ಳಲು ಇಬ್ಬರು ದಾದಿಯರಿದ್ದರು. ಮೊಬೈಲ್‌, ಇಂಟರ್ನೆಟ್‌ ನಂತಹ ಯಾವುದೇ ಸೌಲಭ್ಯಗಳು ಆಕೆಗಿಲ್ಲ. ಅಕ್ಷರಶಃ ಜೈಲಿಗಿಂತ ಕಡೆಯ ಬಾಳು ಆಕೆಯದಾಗಿತ್ತು. ಸೂಕಿಯದು ಶಾಂತಿಯುತ ಹೋರಾಟ ಹಾಗಾಗಿಯೇ ಸೇನಾಧಿಕಾರಿಗಳಿಗೆ ಗೃಹಬಂಧನಕ್ಕಿಂತ ಹೆಚ್ಚಿನ ಮಟ್ಟಿಗಿನ ಶಿಕ್ಷೆ ನೀಡಲಾಗಲಿಲ್ಲ. ಅಹಿಂಸೆಯನ್ನು ಧ್ಯೇಯವನ್ನಾಗಿಟ್ಟುಕೊಂಡ ಸೂಕಿ ಮನಸ್ಸಿನ ಮೇಲೆ ಹಲವು ಘಟನೆಗಳು ಪ್ರಭಾವ ಬೀರಿವೆ. "ನನಗೆ ಬೌದ್ಧ ವಿಹಾರಗಳನ್ನು ನೊಡುವುದೆಂದೆರೇ ಭಾರಿ ಖುಷಿ''. 40 ವರ್ಷಗಳ ಹಿಂದೆ ಒಂದು ಬೌದ್ಧ ವಿಹಾರಕ್ಕೆ ಹೋಗಿದ್ದಾಗ ಅಲ್ಲಿದ್ದ ಮಾತು ಆಕೆಯ ಮನಸ್ಸಲ್ಲಿ ಅಚ್ಚಳಿಯದೇ ಉಳಿಯಿತಂತೆ.'' ಜೀವನದಲ್ಲಿ ಒಂದೊಂದು ಕ್ಷಣವೂ ನಿನ್ನನ್ನು ಹೆದರಿಸುವ ಪ್ರಯತ್ನಗಳಾದಾಗ ಭಯಪಡಬೇಡ. ಹಾಗಂತ ಭಯವೇ ಇಲ್ಲದಿರುವುದಿಲ್ಲ. ನಿನ್ನನ್ನು ಹೊಗಳಿದಾಗ ಸಂಭ್ರಮಿಸಬೇಡ. ಹಾಗೆಂದು ನಿನ್ನ ಸಂತೊಷಗಳನ್ನು ಕಳೆದುಕೊಳ್ಳಬೇಡ'' ನನ್ನ ಯಶಸ್ಸಿಗೆ ಇದೇ ಸೂತ್ರ ಎಂದು ಆಕೆ ಹೇಳಿಕೊಂಡಿದಾ್ದಳೆ.
ಈಕೆಯ ಶಾಂತಿಯುತ ಹೋರಾಟಕಾಕ್ಗಿ ಪ್ರತಿಷ್ಠಿತ ನೊಬೆಲ್‌ ಶಾಂತಿ ಪ್ರಶಸ್ತಿ ಸಹ ದೊರೆತಿದೆ.

ಇದೀಗ ದೇಶದ ಸಾವಿರಾರು ಜನತೆಯ ನೀರಿಕ್ಷೆಗಳು ನಿಜವಾಗಿದೆ. ನಮಗೆ ನಮ್ಮದೊಂದು ಬದುಕು ನೀಡುವ ಸಲುವಾಗಿ ತನ್ನ ಸುಂದರ ಬದುಕನ್ನೆ ಕಲ್ಲಾಗಿಸಿಕೊಂಡ ಆಕೆಯ ಮೇಲೆ ಅಲ್ಲಿನ ಜನರಿಗೆ ಪ್ರೀತಿ ಇದೆ ಅದಕ್ಕಿಂತ ಹೆಚ್ಚಾಗಿ ಮಮತೆ ಇದೆ. 1999ರಂದು ಆಕೆಯ ಪತಿ ನಿಧನರಾದಾಗಲೂ ಆಕೆ ಗೃಹ ಬಂಧನದಲ್ಲಿದ್ದಳು. ಬಿಡುಗಡೆಯಾಗಿರುವ ಆಕೆ ಇಂಟರ್ನೆಟ್‌ ಹೊಂದುವ ಆಸೆ ವ್ಯಕ್ತಪಡಿಸಿದ್ದಾಳೆ. 65 ವರ್ಷದ ಆಕೆ ಟ್ವೀಟರ್ ನಲ್ಲಿ ಟ್ವೀಟ್‌ ಮಾಡುವ ಬಯಕೆ ವ್ಯಕ್ತಪಡಿಸಿದ್ದಾಳೆ. ಆ ಮೂಲಕ ದೇಶದ ಜನತೆಯನ್ನು ಸಂಪರ್ಕಿಸುವ ಆಸೆ ಹೊಂದಿದ್ದಾಳೆ. ಮತ್ತೆ ಪ್ರಜಾಪ್ರಭುತ್ವಕ್ಕಾಗಿ ದನಿ ಎತ್ತುವ ಹಂಬಲದಲ್ಲಿದ್ದಾರೆ. ಒಂದಂತೂ ಸತ್ಯ ಆಕೆಯ ದೇಶನಿಷ್ಠೆ ಸಾಮಾನ್ಯವಾದುದಂತು ಅಲ್ಲ ಅವಳ ಆ ನಿಷ್ಠೆ ನಮಗೆಲ್ಲ ಮಾದರಿ ಆಗಬೇಕು.
ಸೇನಾ ಆಳ್ವಿಕೆಯಲ್ಲಿ ಕಂಗೆಟ್ಟು ಹೊಗಿದ್ದ ಬರ್ಮಾ ಒಡಲಲ್ಲಿ ಮತ್ತೆ ಪ್ರಜಾಪ್ರಭುತ್ವದ ಕನಸುಗಳು ಮೊಳಕೆಯೊಡೆದಿದೆ. ಸೂಕಿ ಬಿಡುಗಡೆ ಅಲ್ಲಿನ ಜನರಲ್ಲಿ ಮತ್ತೇ ಹೊಸ ನೇಸರನ ಆಶಾಕಿರಣ ಮೂಡಿಸಿದೆ. ವಿಶ್ವದ ಅತಿ ಪುರಾತನ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಅಮೆರಿಕ ಹಾಗು ಬ್ರಿಟನ್‌ ದೇಶಗಳು ಹಲವಾರು ಬಾರಿ ಬರ್ಮಾ ಸೇನಾ ಸರ್ಕಾರಕ್ಕೆ ಸೂಕಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರೂ ಒಪ್ಪದಿದ್ದ ಜನರಲ್‌ ಥಾನ್‌ ಶ್ವೇಗೆ ಈಗ ಜ್ಞಾನೋದಯವಾಗಿದೆ.
ಬುದ್ಧ ನಡೆದ ನೆಲದಲ್ಲಿ ಇನ್ನಾದರೂ ಶಾಂತಿ ನೆಲಸಲಿ....

ಪ್ರಕಟವಾದ ದಿನದ ವಿಶೇಷ ಪೇಜ್ ನ ಲಿಂಕ್ ಇಲ್ಲಿದೆ...

http://www.hosadigantha.in/epaper.php?date=11-15-2010&name=11-15-2010-7

Thursday, September 30, 2010

ನೀವು ಕಂಡ ಕನಸುಗಳು ಇನ್ನೂ ಹಾಗೇ ಉಳಿದಿವೆ..


ಶಂಕರ್ ನಾಗ್ ಎಂದೂ ತನಗೆ ಗೌರವ ನೀಡಿ ಎಂದು ಆಪೇಕ್ಷಿಸಿದವರೇ ಅಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ತಾನೊಬ್ಬ ಶ್ರೇಷ್ಠ ನಟ, ನಿರ್ದೇಶಕ ಎಂಬ ಹಮ್ಮು ಅವರಿಗೆ ಇರಲೇ ಇಲ್ಲ. ಆದ್ದರಿಂದ ಇಂದು ಜನ ಶಂಕರನಾಗ್ ರನ್ನು ಜನ ಪ್ರೀತಿಯಿಂದ ಏಕವಚನದಲ್ಲೆ ‘ನಮ್ಮ ಶಂಕರ್’ಹಾಗೇ ‘ಶಂಕ್ರಣ್ಣ' ಎಂದು ಸಂಬೊಧಿಸುತ್ತಾರೆ. ಏಕೆಂದರೆ ಅವರ ಪಾಲಿಗೆ ಶಂಕರ್ ನಾಗ್ ತಮ್ಮಮನೆಮಗ..

1990ರ ಸೆಪ್ಟಂಬರ್ 30, ಆ ದಿನದ ಮುಂಜಾನೆಯಲ್ಲಿ ದಾವಣಗೆರೆಯ ಕರಿ ಹೆಬ್ಬಾವಿನಂಥ ರಸ್ತೆಯ ಮೇಲೆ ಹೆಣವಾಗಿ ಬಿದ್ದ ಅವರೊಂದಿಗೆ ಚಿತ್ರಜಗತ್ತಿನ ಬಂಗಾರದ ಕನಸುಗಳು ನಡೆದು ಬಿಟ್ಟವು ಸದ್ದೇ ಇಲ್ಲದಂತೆ ! ಆತ ಅಗಲಿ ಇಪ್ಪತ್ತು ವರ್ಷವಾಯಿತು ಬೆಂಗಳೂರಿನ ಮೆಟ್ರೊ ಕಾಮಗಾರಿ ನೋಡುವಾಗಲೆಲ್ಲಾ ಆತ ನೆನಪಾಗುತ್ತಾನೆ. ಮನಸ್ಸಿಗೆ ಸುಪ್ತವಾಗಿ ಕಾಡಿ "ಅವನಿದ್ದಿದ್ದರೇ" ಎಂಬ ಭಾವ ಬರಿಸಿ, ಮರೆಯಾಗುತ್ತಾನೆ. ಆತ ಇಲ್ಲದಿರುವಾಗ ಆತನ ಬಗ್ಗೆ ಚಿಕ್ಕ ನೆನೆಪು ಮಾಡಿಕೊಳ್ಳೋಣ.

ಶಂಕರ್ ನಾಗ್‌ ಯಾನೆ ಶಂಕರ್ ನಾಗರಕಟ್ಟೆ .
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಾಗರಕಟ್ಟೆಯಲ್ಲಿ ಹುಟ್ಟಿದ ಶಂಕರ್ ನಾಗ್‌(ಇವರ ಅಣ್ಣ ಅನಂತ್‌ನಾಗ್‌) ಕನಸು ಕಂಗಳಲ್ಲಿ ಜೀವನದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದ. ನಾಟಕ, ರಂಗಭೂಮಿ, ಕಲಾತ್ಮಕ ಚಿತ್ರಗಳೆಂದರೆ ಪಂಚಪ್ರಾಣ. ಹಾಗಂತ ಕೇವಲ ಚಿತ್ರ ನಿರ್ಮಾಣ ನಿರ್ದೇಶನ ಮಾಡುತ್ತಾ ಕೂರಲಿಲ್ಲ. ತನ್ನ ಮನಸ್ಸಿಗೆ ಬಂದ ಅಭಿವೃದ್ದಿಯ ಕನಸನ್ನು ಸರ್ಕಾರದ ಮುಂದಿಡುತ್ತಿದ್ದರು. ಲಂಡನ್‌ನಲ್ಲಿ ಮೆಟ್ರೊ ರೈಲುಗಳನ್ನು ನೋಡಿದ್ದ ಶಂಕರ್ ನಾಗ್, ಇದೇ ಮಾದರಿಯ ರೈಲುಗಳು ಬೆಂಗಳೂರಿಗೆ ಸೂಕ್ತ ಎಂದವರೇ ಸರ್ಕಾರಕ್ಕೆ ಎರಡು ಪುಟಗಳ ವರದಿ ಸಲ್ಲಿದ್ದರು. ಆದರೆ ಸರ್ಕಾರ ಅದನ್ನು ಬುಟ್ಟಿಗೆಸೆಯಿತು. ಇಂದು ಅವರ ಕನಸು ನನಸಾಗುವ ಹಂತದಲ್ಲಿದೆ ಆದರೆ ಅವರೇ ಇಲ್ಲ..!
ನಟಿಸಿದ ಮೊದಲ ಚಿತ್ರಕ್ಕೆ ಪ್ರಶಸ್ತಿ
  12 ವರ್ಷಗಳ ಚಿತ್ರಜೀವನದಲ್ಲಿ ಹೆಚ್ಚು ಕಡಿಮೆ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್ ನಾಗ್ ಅವರ ಪ್ರತಿಭೆ ಮೊದಲು ಗುರುತಿಸಿದವರು ಗಿರೀಶ್‌ ಕಾನಾರ್ಡ್‌ ಅವರು ನಿರ್ದೇಶಿಸಿದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಗಂಡುಗಲಿ ಪಾತ್ರಕ್ಕೆ ಆಯ್ಕೆಯಾದ ಇವರು ಆ ಚಿತ್ರದ ನಟನೆಗಾಗಿ ಪ್ರಶಸ್ತಿ ಪಡೆದುಕೊಂಡರು. ನಂತರ ವಾಣಿಜ್ಯ ಚಿತ್ರಗಳೆಡೆ ವಾಲಿದ ಶಂಕರ್ ‘ಸೀತಾರಾಮು' ಚಿತ್ರ ಭರ್ಜರಿ ಯಶಸ್ಸು ಕಂಡಿತು. ನಂತರ ಆಟೋರಾಜ, ಸಿಬಿಐ ಶಂಕರ್, ಸಾಂಗ್ಲಿಯಾನ ಯಶಸ್ವೀಯಾದದ್ದೇ ತಡ ಸಾಲು ಸಾಲು ನಿರ್ಮಾಪಕರು ಇವರನ್ನು ನಾಯಕನಾಗಿ ಆಯ್ಕೆ ಮಾಡಿದರೂ ಅವರೇ ಕನಸೇ ಬೇರೆಯದಿತ್ತು. ಏನಾದರೂ ಹೊಸದನ್ನು ನೀಡಬೇಕು ಎನ್ನುವ ಮನಸ್ಸಾದಾಗ ನಿರ್ದೇಶಕರ ಪಾತ್ರ ನಿಭಾಯಿಸಿದರು. ಶಂಕರ್ ನಿರ್ದೇಶಿಸಿದ ಪ್ರಥಮ ಚಿತ್ರ ‘ಮಿಂಚಿನ ಓಟ’ಕ್ಕೆ ಏಳು ರಾಜ್ಯ ಪ್ರಶಸ್ತಿ ಪಡೆದು ತಮ್ಮ ಶಕ್ತಿ ತೋರಿಸಿದ್ದರು. ನಂತರ ರಾಷ್ಟ್ರ ಪ್ರಶಸ್ತಿ ಪಡೆದ ಆಕ್ಸಿಡೆಂಟ್‌, ಗೀತಾ, ಜನ್ಮ ಜನ್ಮದ ಅನುಭಂಧ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಡಾ. ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ ಒಂದು ಮುತ್ತಿನ ಕಥೆ ಇವೆಲ್ಲಾ ಶಂಕರ್ ನಾಗ್‌ ಗರಡಿಯಲ್ಲಿ ಬಂದ ಚಿತ್ರಗಳು.
    ಇಂದಿಗೂ ಶಂಕರ್ ನಾಗ್ ರನ್ನು ಹಲಾವಾರು ಕಾರಣಗಳಿಗೆ ನೆನಪಿಸಿಕೊಳ್ಳುತ್ತಾರೆ. ಆಗ ಟಿವಿ ಎಂದರೆ ದೂರದರ್ಶನ ಮಾತ್ರ. ಈಗಿನ ಹಾಗೆ ಹಳ್ಳಿಹಳ್ಳಿಗೂ ಟಿವಿ ಚಾನೆಲ್‌ಗಳು ಇರಲಿಲ್ಲ. ಅಂತದ್ದರಲ್ಲಿ ಶಂಕರ್, ಆರ್‌.ಕೆ. ನಾರಾಯಣ್‌ ಅವರ ಮಾಲ್ಗುಡಿ ಡೇಸ್‌ನ್ನು ಧಾರವಾಹಿಯನ್ನಾಗಿಸಿದರು. ಬಹು ಜನಪ್ರಿಯಗೊಂಡ ಈ ಧಾರವಾಹಿ ಶಂಕರ್ ನಾಗ್‌ ಎಂಬ ಕನ್ನಡದ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಕನ್ನಡಕೊಬ್ಬ ಸಮರ್ಥ ನಿರ್ದೇಶಕ ದಕ್ಕಿದಂತಾಯಿತು ಎಂದು ನಿಟ್ಟುಸಿರಿಟ್ಟರು. ನಂತರ ಸ್ವಾಮಿ ಎಂಬ ಧಾರವಾಹಿ ನಿರ್ದೇಶಿಸಿದರು.
ಬೆಂಗಳೂರ ಕನಸು.
 ಇಂದು ಬೆಂಗಳೂರಿನಲ್ಲಿ ವಿಶಾಲವಾದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿಗೆ ಇದು ಅನಿವಾರ್ಯವೆಂದು ಹೇಳಿದವರು ಶಂಕರ್ ನಾಗ್, ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಠಿಯಲ್ಲಿ ನಂದಿ ಬೆಟ್ಟಕ್ಕೆ ರೋಪ್ ಕಟ್ಟುವ ಯೋಜನೆ ರೂಪಿಸಿದ್ದರು ಅದನ್ನು ಒಪ್ಪಿದ್ದ ಸರ್ಕಾರ ಅದರ ಭೂಮಿಪೂಜೆಯನ್ನು ನಡೆಸಿದ್ದರು. ಆದರೆ ಶಂಕರ್ ನಾಗ್ ಮರಣದ ನಂತರ ಅವರ ಜೊತೆಯಲ್ಲಿಯೇ ಅವರ ಈ ಬಹುದೊಡ್ಡ ಕನಸು ಮಣ್ಣು ಸೇರಿತ್ತು.
 ಶಂಕರ್ ನಾಗ್ ಚಿತ್ರದಲ್ಲಿ ನಟಿಸುವುದು ಕೇವಲ ಹೊಟ್ಟೆಪಾಡಿಗಾಗಿ ಮಾತ್ರ. ಆದರೆ ಅವರ ಆಸಕ್ತಿ ರಂಗಭೂಮಿಯ ಮೇಲೆ ಇತ್ತು ಇದಕ್ಕಾಗಿಯೇ ‘ಸಂಕೇತ್’ ಎಂಬ ರಂಗಭೂಮಿ ತಂಡವನ್ನು ರಚಿಸಿದ್ದರು ಇದರ ಮೂಲಕ ಕಾರ್ನಾಡ್ ರ ‘ನಾಗಮಂಡಲ', ‘ಅಂಜುಮಲ್ಲಿಗೆ' ಹಾಗೆ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಎನ್ನುವ ನಾಟಕವನ್ನು ನಿರ್ದೇಶಿಸಿದ್ದರು. ಇಂದಿಗೂ ಸಂಕೇತ್ ತಂಡ ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಹೆಸರುಗಳಿಸಿ ಮುನ್ನಡೆಯುತ್ತಿದೆ. ಆದರೆ ಕನ್ನಡಕ್ಕೆ ಕರ್ನಾಟಕದಲ್ಲೇ ಸುಸಜ್ಜಿತವಾದ ಸ್ಟುಡಿಯೋ ಬೇಕೆಂಬ ದಿಸೆಯಲ್ಲಿ ಆರಂಭಿಸಿದ್ದ ‘ಸಂಕೇತ್' ಸ್ಟುಡಿಯೋ ಉಳಿಸಿಕೊಳ್ಳಲಾಗಲಿಲ್ಲ ಆದರೆ ಅವರ ಕನಸಿನ ಕೂಸು ರಂಗಶಂಕರ ಇಂದು ಜೆ.ಪಿ.ನಗರದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿದೆ. ಪ್ರತಿನಿತ್ಯದ ರಂಗಭೂಮಿ ಕಾಯಕದಲ್ಲಿ ತೊಡಗಿರುವ ರಂಗಶಂಕರ ಶಂಕರನಾಗ್ ನೆನಪನ್ನು ಇನ್ನೂ ಹಸಿರಾಗುಳಿಸಿದೆ.
ದೇವರು ಕರೆಸಿಕೊಂಡ
ತನ್ನ 12 ವರ್ಷಗಳ ಚಿತ್ರಜೀವನದಲ್ಲಿ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತಿತ್ತು.ಒಂದೇ ಸಮಯದಲ್ಲಿ ಮೂರ್ನಾಲ್ಕು ಕೆಲಸ ಮಾಡುತ್ತಿದ್ದ ಶಂಕರನಾಗ್  ಶರವೇಗದ ಕೆಲಸ ನೋಡಿ ಆ ದೇವರಿಗೂ ಅಸೂಯೆಯಾಗಿದ್ದಿರಬೇಕು. ಸೆಪ್ಟಂಬರ್ 30ರಂದು ಜೋಕುಮಾರಸ್ವಾಮಿ ಚಿತ್ರದ ಮಾತುಕತೆಗಾಗಿ ಬೆಂಗಳೂರಿಗೆ ಹೆಂಡತಿ ಅರುಂಧತಿ ನಾಗ್ ಮಗಳು ಕಾವ್ಯ ಜೊತೆಯಲ್ಲಿ ಬರುತ್ತಿದ್ದ ಶಂಕರನಾಗ್ ಕಾರು ದಾವಣಗೆರೆಯ ಆನುಗೋಡಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕಿಡಾಯಿತು. ಅಷ್ಟೇ, ಶಂಕರನಾಗ್ ಎಂಬ ಪಾದರಸದ ಯುವಕ ಹೆಣವಾಗಿದ್ದ..! ಆತ ಅಭಿನಯಿಸಿದ್ದ ಕೊನೆಯ ಚಿತ್ರ ನಿಗೂಢ ರಹಸ್ಯ.  
ಅಲ್ಲಿಗೆ ಕನ್ನಡ ಚಿತ್ರರಂಗದ ಅಪೂರ್ವ ಕುಡಿಯೊಂದು ಕಂಡು ಕಾಣದಂತೆ ಕಣ್ಮರೆಯಾಯಿತು. ಆದರೆ ಶಂಕರನಾಗ್ ಎಂಬ ಕನಸು ಕಂಗಳ ಯುವಕ ಇಂದಿಗೂ ಪ್ರತಿಯೊಬ್ಬ ಆಟೋ ಡ್ರೈವರ್  ಕಂಗಳಲ್ಲಿದ್ದಾನೆ. ಆತನ ಮುಗುಳ್ನಗುವಿನ ಚಿತ್ರ ಬೆಂಗಳೂರಿನ ಹೆಚ್ಚಿನ ಆಟೋಗಳ ಮೇಲೆ ರಾರಾಜಿಸುವಾಗ ಶಂಕರನಾಗ್ ಎಂಬ ಅಸಮಾನ್ಯ ಪ್ರತಿಭೆ ಹೇಗೆ ಜನಸಾಮಾನ್ಯರಲ್ಲಿ ಆಪ್ತವಾಗಿ ಬೇರೂರಿದ್ದ ಎನ್ನುವುದು ಸ್ಪಷ್ಠವಾಗುತ್ತದೆ.

ಅಯೋಧ್ಯೆ ತೀರ್ಪು..ಸುದ್ದಿಮನೆಯ ಹಾಡು...

ಬಹು ನಿರೀಕ್ಷಿತ ಅಯೊಧ್ಯೆ ತೀರ್ಪು ಹೊರಬಿದ್ದಿದೆ..ಮಾಧ್ಯಮ ಮಂದಿ ಎಚ್ಚರಿಸುವಂತೆ ಏನೂ ಆಗಿಲ್ಲ. ಅದಕ್ಕೆ ಕೇಂದ್ರ ಸರ್ಕಾರ ಮೂಗು ದಾರ ಹಾಕಿದ್ದು ಕಾರಣವಾದರೂ, ಪತ್ರಿಕೆಗಿಂತ, ಟಿವಿ ಮಾದ್ಯಮದವರ ಅವಸ್ಥೆ ಕಂಡು ನಮ್ಮ ಸುದ್ದಿಮನೆಯಲ್ಲಿ ನಗುವುದೊಂದೆ ಬಾಕಿ..ಕನ್ನಡದ ಪ್ರತಿಷ್ಟತ ನ್ಯೂಸ್ ಚಾನೆಲ್ ಒಂದು ಬೆಳಗಿನ್ನಿಂದಲೆ ಒದರುತ್ತಾ ಸಾಗುತ್ತಿತ್ತು..ಅದಕ್ಕೆ ಲೆಕ್ಕವಿಲ್ಲ ದಷ್ಟು ಬ್ರೇಕಿಂಗ್ ನ್ಯೂಸ್ ಗಳು ಬರುತ್ತಿದ್ದವು. ಬೆಳಿಗ್ಗೆ ಬೆಳಿಗ್ಗೆ ನಿರೂಪಕಿ ಮೀನ್ಸ್ ಆಂಕರ್ ಕೆಳಿದ ಪ್ರಶ್ನೆ ಅಭಾಸದ ಪರಮಾವಧಿ ಎಂದರೆ ತಪ್ಪಾಗಲಿಕ್ಕಿಲ್ಲ.. ಎಲ್ಲಾ ಕಡೆ ಗಲಾಟೆ, ದೊಂಬಿ ಆಗಬಾರದು ಎಂದು ಪೋಲೀಸ್ ಸರ್ಪಗಾವಲು ಇದ್ದಿದ್ದರೆ..ಆಕೆ ಪೋನ್ ಇನ್ ಕಾಲ್ ಅಲ್ಲಿ ಇವತ್ತು ಗಲಾಟೆ ಆಗುವ ಸಂಭವ ಕಾಣುತ್ತಿದೆಯಾ ಎಂದು ಮೂರು-, ನಾಲ್ಕು ಬಾರಿ ಕೆಳಿದಳು. ಆಕೆಯ ಪ್ರಕಾರ ಗಲಾಟೆ ಆದರೆ ಮತ್ತೊಂದು ಬ್ರೆಕಿಂಗ್ ನ್ಯೂಸ್ ಆಗುತ್ತದೆ ಎಂದು ಭಾವಿಸಿರಬೇಕು..ಮೀಡಿಯಾಗಳು ದುರಂತದ ಹಾದಿಯಲ್ಲಿ ಸಾಗುತ್ತಿರುವ ಉದಾಹರಣೆ ಗೆ ಈದು ಹೊಸ ಸೆರ್ಪಡೆ..ಅಷ್ಟೆ.
ಇನ್ನು ನಮ್ಮ ಸುದ್ದಿ ಮನೆಯಲ್ಲಿ...
ಅಯೋಧ್ಯೆ ಎಂದರೆ ಬಹಳ ದೊಡ್ಡ ನ್ಯೂಸ್ ಆಗುವ ಪೇಪರ್..ಆ ದಿನ ನನ್ನ ಪ್ರತಿನಿತ್ಯದ ಪೇಜ್ನ್ನು ಅಯೋಧ್ಯೆ ಗಾಗಿ ಮೀಸಲಿಟ್ಟಿದದರಿಂದ ಸ್ವಲ್ಪ ಆರಾಮದಿಂದಿದ್ದೆ ಆದರೆ ಗಂಟೆ 12 ದಾಟುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಧಾವಂತ ಆರಂಭವಾಗಿತ್ತು. ಇಂದು ಅಯೋಧ್ಯೆ ತೀರ್ಪು ಏನಾಗಲಿದೆಯೂ..ಎಂಬ ಬಗ್ಗೆ ಆಲೋಚಿಸುತ್ತಿದ್ದೆ..ಹಾಗಾಗಿ ನನ್ನಿಂದ ಒಂದ್ಕ್ಷರವನ್ನು ಬರೆಯಲಾಗಲಿಲ್ಲ..ಆಫೀಸಿನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದೆ..ಎಲ್ಲರ ಕಂಪ್ಯೂಟರ್ ಮೇಲೂ (ಅದರ ಅಕ್ಕ-ಪಕ್ಕದಲ್ಲೂ) ಅಯೋಧ್ಯೆಯ ನ್ಯೂಸ್ ಗಳ ಪುರಾಣಗಳು..ಜನರಲ್ ಡೆಸ್ಕ್ನಲ್ಲಿದ್ದ ಎಲ್ಲರೂ ಅದರ ಬಗ್ಗೆ ಉತ್ಸುಕರಾಗಿದ್ದರು. ಇಂದು ಆಫೀಸ್ ನಲ್ಲಿ ಯಾರಿಗೂ ರಜಾ ನೀಡದ್ದರಿಂದ ಕಚೇರಿ ತುಂಬಿ ತುಳುಕುತ್ತಿತ್ತು.
3.30 ಆದಾಗ ಎಲ್ಲರ ಕಂಪ್ಯೂಟರ್ ನಲ್ಲೂ ಅಯೋಧ್ಯೆಗೆ ಸಂಬಂಧ ಪಟ್ಟ ವೆಬ್ ತಾಣಗಳು ಕಂಪ್ಯೂಟರ್ ಮೇಲೆ ರಾರಾಜಿಸಿದ್ದವು. ನಾನು ಸಿಎನ್ಎನ್ ಐಬಿನ್ ಚಾನೆಲ್ಗಳ ಮೇಲೆ ಕಣ್ಣಿಟ್ಟಿದ್ದೆ. ಪ್ರತಿಕ್ಷಣ ಹೊಸ ಹೊಸ ಸುದ್ದಿಗಳು ಬಿತ್ತರಗೊಳ್ಳುತ್ತಿದ್ದವು. 4 ಗಂಟೆಗೆ ತೀರ್ಪು ಪ್ರಕಟಗೊಳ್ಳುತ್ತದೆ ಎಂದಾಗ ಸ್ವಲ್ಪ ನಿರಾಳ. ಹಾಗೆ ನನ್ನ ಸಪ್ಲಿಮೆಂಟ್  ಪೇಜ್ ನೋಡಿ ಮುಗಿಸಿದಾಗ ಗಂಟೆ ಸರಿಯಾಗಿ 4 ಆಗಿತ್ತು.. ರಿಪೋರ್ಟಿಂಗ್ ಸೆಕ್ಷನ್ ನಲ್ಲಿ ಆಗಲೇ ಯಾರ್ಯಾರ ಪ್ರತಿಕ್ರಿಯೆ ತೆಗೆದುಕೊಳ್ಳಬೇಕೆಂಬ ಚರ್ಚೆ ಆರಂಭವಾಗಿತ್ತು.. ಪ್ರತಿದಿನ 5 ಗಂಟೆಗೆ ಸಭೆಸೇರುವ ಸೀನಿಯರ್ಗಳ ತಂಡ ಅಂದು ಬೇಗನೇ ಸಭೆ ಸೇರಿ ಆಗಬೇಕಾದ ಕೆಲಸಗಳ ಬಗ್ಗೆ ತಿರ್ಮಾನಿಸಿತ್ತು. ಅಲ್ಲಿಗೆ. ಟಿವಿಯಲ್ಲಿ ಅಯೋದ್ಯೆ ಕುರಿತಾದ ತೀರ್ಪು ಹೊರಬಂದಿತ್ತು.
ತಮ್ಮ ಸ್ವಸ್ಥಾನ ದಿಂದ ಎಲ್ಲರೂ ಎದ್ದು ಡೆಸ್ಕ್ ವಿಭಾಗದಲ್ಲಿರುವ ಟಿವಿ ಹತ್ತಿರ ಸೇರಿದ್ದರು. ಕ್ಷಣ ಕ್ಷಣವೂ ಕುತೂಹಲ. ಅದರಲ್ಲಿ ಡಿಶಿಶನ್ ಎನಂತ ಹಾಕಿದ್ದಾರೆ ಆ ಚಾನೆಲ್ ಹಾಕಿ, ಈ ಚಾನೆಲ್ ಹಾಕಿ ಎಂಬ ಸಣ್ಣ ಧ್ವನಿಗಳು ಕೇಳಿಬರುತ್ತಿದ್ದರೂ..ಅಂತೂ ಎನ್ ಡಿಟಿವಿ ಯಲ್ಲಿ, ಆಜ್ ತಕ್ ಚಾನೆಲ್ ನಲ್ಲಿ ಡಿಶಶನ್ ಹೊರಬಿದ್ದದ್ದು ಕೆಳಿಸಿಕೊಂಡಾಗ ಒಂದು ಸಾರಿ ಚಪ್ಪಾಳೆ ತಟ್ಟಿ ಖುಷಿ ಪಟ್ಟೆವು. ನಂತರ ಟೀ ಕುಡಿದು ತೀರ್ಪು ಬಗ್ಗೆ ಚರ್ಚೆಗಳಾದವು ಕೆಲವರಿಗೆ ಸಮಾದಾನವಾಗಲಿಲ್ಲ.."ನನಗೂ ಸೇರಿ", ನಂತರ ಕೆಲಸದ ಸಮಯ..ಅಂತೂ ರಾಮನ ಭೂಮಿ ರಾಮನಿಗೆ ಸಿಕ್ಕತು ಅನ್ನೊದಷ್ಟೆ ಸಂತೋಷ.